

ರಾಜ್ಯಮಟ್ಟದ ‘ದಸರಾ ಮುಖ್ಯಮಂತ್ರಿ ಕಪ್’ ಕ್ರೀಡಾಕೂಟದ ಫ್ರೀಸ್ಟೈಲ್ ಕುಸ್ತಿ ಪಂದ್ಯಾವಳಿಯಲ್ಲಿ ಬೆಂಗಳೂರು ಗ್ರಾಮಾಂತರ ಹಾಗೂ ಬೆಳಗಾವಿ ವಿಭಾಗ ತಂಡಗಳು ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ‘ಸಮಗ್ರ ತಂಡ’ ಪ್ರಶಸ್ತಿ ಪಡೆದವು.
ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಫ್ರೀಸ್ಟೈಲ್ ಕುಸ್ತಿಯ ಪುರುಷರ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ತಂಡ 51 ಅಂಕ ಪಡೆದು ಈ ಸಾಧನೆ ಮಾಡಿದರೆ, ಮಹಿಳಾ ವಿಭಾಗದಲ್ಲಿ ಬೆಳಗಾವಿ ತಂಡ 60 ಅಂಕಗಳೊಂದಿಗೆ ಈ ಸಾಧನೆ ತೋರಿತು.
ಪುರುಷರ ವಿಭಾಗದಲ್ಲಿ 34 ಅಂಕಗಳಿಸಿದ್ದ ಬೆಳಗಾವಿ ತಂಡ ದ್ವಿತೀಯ ಸ್ಥಾನ ಪಡೆದರೆ, ಮಹಿಳಾ ವಿಭಾಗದಲ್ಲಿ 30 ಅಂಕಗಳಿಸಿದ್ದ ಬೆಂಗಳೂರು ಗ್ರಾಮಾಂತರ ದ್ವಿತೀಯ ಸ್ಥಾನ ಪಡೆಯಿತು. ಇನ್ನೂ ಗ್ರೀಕೊ ರೋಮನ್ ಕುಸ್ತಿಯಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗ ತಂಡ 45 ಅಂಕಗಳೊಂದಿಗೆ ‘ಸಮಗ್ರ’ ಪ್ರಶಸ್ತಿ ಪಡೆದರೆ, 30 ಅಂಕಗಳೊಂದಿಗೆ ಬೆಳಗಾವಿ ತಂಡ ದ್ವಿತೀಯ ಸ್ಥಾನ ಪಡೆಯಿತು.