ಟ್ರ್ಯಾಕ್ಟರ್ ಇಂಜಿನ್‌ನಡಿ ಸಿಲುಕಿ ಚಾಲಕ ಸಾವು

5blrp3
ಚಿತ್ರ:5(ಬಿಎಲ್‌ಆರ್)3-ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಟ್ರ್ಯಾಕ್ಟರ್ ಇಂಜಿನ್
Published on

ಜಲ್ಲಿ ತುಂಬಿಕೊಂಡು ಬರುತ್ತಿರುವಾಗ ಪಲ್ಟಿಯಾದ ವಾಹನ

ಬೇಲೂರು : ಕ್ರಷರ್‌ನಿಂದ ಜಲ್ಲಿ ತುಂಬಿಕೊಂಡು ಬರುತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆಯೇ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬೇಲೂರು ತಾಲೂಕಿನ ಮಲ್ಲಾಪುರ ಗ್ರಾಮದ ಸಂಜು(ದಿನೇಶ್)(24) ಮೃತ ದುರ್ದೈವಿ. ಈತ ಬುಧವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ತಾಲೂಕಿನ ಹಕ್ಕಿಹಳ್ಳಿ ಸಮೀಪದ ಸಿಲ್ವರ್ ಸ್ಯಾಂಡ್ ಕ್ರಷರ್‌ನಿಂದ ಜಲ್ಲಿಕಲ್ಲು ತುಂಬಿಕೊಂಡು ಬರುತ್ತಿದ್ದಾಗ ಎತ್ತರವಾದ ದಿಣ್ಣೆ ಹತ್ತುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ನ ಇಂಜಿನ್ ಹಿಮ್ಮುಖ ಚಲಿಸಿ ಪಲ್ಟಿಯಾಗಿದೆ. ಪರಿಣಾಮ ರಸ್ತೆಗೆ ಬಿದ್ದದ್ದ ಚಾಲಕ ಸಂಜು(ದಿನೇಶ್) ಮೇಲೆಯೇ ಇಂಜಿನ್ ಬಿದ್ದಿದ್ದರಿಂದ ಚಾಲಕ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.

ಮೃತ ಸಂಜು

ವಿಷಯ ತಿಳಿದ ಮಲ್ಲಾಪುರ ಗ್ರಾಮಸ್ಥರು ಮತ್ತು ಸಂಬಂಧಿಕರು ಸ್ಥಳದಲ್ಲಿ ಪ್ರತಿಭಟಿಸಿ ಕ್ರಷರ್ ಮಾಲೀಕರ ವಿರುದ್ಧ ಹಾಗೂ ದುರಂತಕ್ಕೆ ಕಾರಣವಾದ ರಸ್ತೆ ದುರಸ್ತಿಗೆ ಮುಂದಾಗದ ಅದಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಮೃತ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದರು. ಕ್ರಷರ್ ಮಾಲೀಕರು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸುವಂತೆ ಒತ್ತಾಯಿಸಿ ಕ್ರಷರ್ ಮುಂಭಾಗವೇ ಕೆಲ ಸಮಯ ಪ್ರತಿಭಟಿಸಿದರು.

ಸ್ಥಳಕಾಗಮಿಸಿದ ಬೇಲೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರೇವಣ್ಣ ಮತ್ತು ಸಿಬ್ಬಂದಿ, ಮೃತನ ಸಂಬಂಧಿಕರ ಮನವೊಲಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೇಲೂರಿನ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಕೊಂಡೊಯ್ದರು. ಅಲ್ಲಿಯೂ ಸಹ ಗ್ರಾಮಸ್ಥರು ಹಾಗೂ ಮೃತನ ಸಂಬಂಧಿಕರು ಕ್ರಷರ್ ಮಾಲೀಕ ಬರೋವರೆಗೂ ಮೃತದೇಹ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಬಳಿಕ ಪೊಲೀಸರ ಮನವೊಲಿಕೆಯಿಂದ ಪ್ರತಿಭಟನೆ ಹಿಂಪಡೆದರು. ಇದಾದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಬುಧವಾರ ಸಂಜೆ ಮೃತನ ಅಂತ್ಯಕ್ರಿಯೆ ನಡೆಸಲಾಯಿತು.

ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net