

ಜಿ.ಎಸ್. ಶಿವರುದ್ರಪ್ಪ ಅವರು ವ್ಯಕ್ತಿಯಾಗಿ ದೊಡ್ಡ ನೈತಿಕ ಶಕ್ತಿ. ಅವರು ಎಲ್ಲರ ಮೇಷ್ಟ್ರು. ಕೊನೆಯವರೆಗೂ ಮೇಷ್ಟ್ರಾಗಿದ್ದವರು. ತಮಗೆ ಗೊತ್ತಿರುವ ಸಂಗತಿಗಳನ್ನು ಬೇರೆಯವರ ಜತೆ ಹಂಚಿಕೊಳ್ಳುವುದರಲ್ಲಿ ಖುಷಿ ಪಡುತ್ತಿದ್ದರು ಮತ್ತು ಯಾರಲ್ಲಾದರೂ ಕಾವ್ಯಶಕ್ತಿ ಅಥವಾ ಸಾಹಿತ್ಯದ ಶಕ್ತಿ ಇದೆ ಎಂಬುದು ಕಂಡುಬಂದರೆ ಅವರಿಗೆ ಮಾರ್ಗದರ್ಶನ ನೀಡಿ ಬೆಳೆಸುತ್ತಿದ್ದರು. ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಅವರಿಗೆ ಅಪಾರ ಪ್ರೀತಿ. ಹಾಗಾಗಿಯೇ ಕನ್ನಡದ ಚೈತನ್ಯಯುತ ಸೈನ್ಯವನ್ನು ಕಟ್ಟಿದರು.
ಕನ್ನಡ ವಿಭಾಗಗಳನ್ನು ಅವರು ಕಟ್ಟಿದ ಮತ್ತು ಮುನ್ನಡೆಸಿದ ಬಗೆ ನಿಜಕ್ಕೂ ಪ್ರೇರಣಾದಾಯಿ. ಅವರು ಗುಣಮಟ್ಟದ ಬಗ್ಗೆಯೂ ಕಾಳಜಿ ವಹಿಸಿದರು. ಹಾಗೆಯೇ ಸಾಮಾಜಿಕ ನ್ಯಾಯವನ್ನು ಖಾತ್ರಿ ಪಡಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗವನ್ನು ಕಟ್ಟಿ, ಅದಕ್ಕೆ ಶಕ್ತಿ ತುಂಬಿದರು. ವಿಚಾರ ಸಂಕಿರಣಗಳು, ಪ್ರಖರವಾದ ವಿಷಯಗಳ ಮೇಲೆ ಗೋಷ್ಠಿಗಳು... ಹೀಗೆ ಕನ್ನಡಕ್ಕಾಗಿ ಏನೆಲ್ಲ ಮಾಡಬಹುದಿತ್ತೋ ಅದನ್ನೆಲ್ಲ ಮಾಡಿದರು. ಕನ್ನಡ ಭಾಷೆಯನ್ನು ಉಳಿಸುವ, ಬೆಳೆಸುವ ಪಥವನ್ನು ಅವರ ಕಾರ್ಯಗಳ ಮೂಲಕವೇ ತೋರಿಸಿಕೊಟ್ಟರು. ಜತೆಯಲ್ಲಿ ಇದ್ದವರನ್ನು ಅಪಾರ ಅಂತಃಕರಣದಿಂದ ಕಾಣುತ್ತಿದ್ದರು. ಅದು ಅವರ ವ್ಯಕ್ತಿತ್ವದ ವಿಶೇಷ.
ಬಡತನ, ಹಸಿವು, ಕ್ರೌರ್ಯಗಳೇ ಜಗತ್ತಿನ ಪ್ರಮುಖ ಸವಾಲುಗಳು ಮತ್ತು ಮನುಷ್ಯನ ಹೋರಾಟ ಇವುಗಳ ವಿರುದ್ಧ ಎಂಬುದನ್ನೇ ತಮ್ಮ ಕಾವ್ಯ ಮುಖೇನ ತಿಳಿಸಿಕೊಟ್ಟರು. ಇಂದಿಗೂ ಜಿಎಸ್ಎಸ್ ಅವರ ಪ್ರಸಿದ್ಧ ಕವನಗಳು ಮನೆಮನಗಳಲ್ಲಿ ಅನುರಣಿಸುತ್ತಿವೆ. ಆದರೆ, ಈ ಪ್ರಸಿದ್ಧ ಹಾಡುಗಳ ಆಚೆಯೇ ಜಿಎಸ್ಎಸ್ ಅವರ ನಿಜವಾದ ಕಾವ್ಯವಿದೆ ಎಂಬುದನ್ನು ಮರೆಯಬಾರದು. ‘ಸ್ತ್ರೀ ಅಂದರೆ ಅಷ್ಟೇ ಸಾಕೇ’ ಕವನಕ್ಕಿಂತ ಸ್ತ್ರೀಶಕ್ತಿ ಹೆಚ್ಚು ಪರಿಣಾಮಕಾರಿಯಾಗಿ ಅನಾವರಣಗೊಂಡಿದ್ದು ಅವರ ‘ಅಮೃತ ಮುಹೂರ್ತ’ ಮತ್ತು ‘ದಾಟಿ ಬಾ ನಿರ್ಭಯದ ನಿಲುವಿಗೆ...’ ಕವನಗಳಲ್ಲಿ. ಹಾಗಾಗಿ, ಪ್ರಸಿದ್ಧ ಹಾಡುಗಳ ಆಚೆಗೂ ಅವರ ಕಾವ್ಯವನ್ನು ನೋಡಬೇಕು. ಅರಿಯಬೇಕು.
ನಾನು ಅವರ ನೇರ ವಿದ್ಯಾರ್ಥಿನಿಯಲ್ಲ. ಆದರೂ, ನನ್ನನ್ನು ಶಿಷ್ಯವಾತ್ಸಲ್ಯದಲ್ಲೇ ಸಲುಹಿದರು. ಹಾಗಾಗಿ, ನನ್ನ ಪಾಲಿಗೆ ಜಿಎಸ್ಎಸ್ ನಿಜವಾದ ಹಣತೆ. ಆ ಬೆಳಕನ್ನು, ಪ್ರೇರಣೆಯನ್ನು ಮರೆಯಲು ಸಾಧ್ಯವೇ ಇಲ್ಲ. ಜೀವನಪ್ರೀತಿ ಎಂದು ಹೇಳುವಾಗ ಅಲ್ಲಿ ಎಲ್ಲ ಸಂಗತಿಗಳು ಒಳಪಡುತ್ತವೆ. ಸಣ್ಣಸಣ್ಣ ಸಂಗತಿಗಳನ್ನು ಅಗಾಧವಾಗಿ ಪ್ರೀತಿಸಿ, ಹೇಗೆ ಬದುಕಬೇಕು ಎಂಬುದನ್ನೂ ತೋರಿಸಿಕೊಟ್ಟರು. ಒಳ್ಳೆಯ ಬಟ್ಟೆ, ರುಚಿಯಾದ ಊಟ ಇಷ್ಟಪಡುತ್ತಿದ್ದ ಅವರನ್ನು ರುಚಿವಂತ ಮನುಷ್ಯ ಎಂದೇ ಹೇಳಬಹುದು. ಅವರ ಓದಿನ ಪ್ರೀತಿಯಂತೂ ಅಗಾಧ.
ಕವಿತ್ವಕ್ಕೆ ಹೊಸ ಶಕ್ತಿಯನ್ನೇ ತುಂಬಿದ ಜಿಎಸ್ಎಸ್ ಮಂಡಿಸುತ್ತಿದ್ದ ವಿಚಾರಗಳು, ಪ್ರತಿಪಾದಿಸುತ್ತಿದ್ದ ಚಿಂತನೆಗಳು ಅಪಾರ ಸ್ಪಷ್ಟತೆಯಿಂದ ಕೂಡಿರುತ್ತಿದ್ದವು. ಅವರ ವೈಚಾರಿಕ ನಿಲುವಿನಲ್ಲಿ ಗೊಂದಲಕ್ಕೆ ಆಸ್ಪದವಿರಲಿಲ್ಲ. 20ನೇ ಶತಮಾನದ ಪ್ರಮುಖ ಸಾಹಿತ್ಯಿಕ ಚಳವಳಿಗಳಾದ ನವೋದಯ, ಪ್ರಗತಿಶೀಲ, ನವ್ಯ ಮತ್ತು ಬಂಡಾಯಗಳ ಅತ್ಯುತ್ತಮ ಅಂಶಗಳನ್ನೆಲ್ಲ ಮೈಗೂಡಿಸಿಕೊಂಡು ಬರೆದ ಮಹತ್ವದ ಲೇಖಕ ಜಿಎಸ್ಸೆಸ್. ಈ ಮೂಲಕ ಕನ್ನಡದಲ್ಲಿ ಹೊಸ ಪರಂಪರೆಯನ್ನು ನಿರ್ಮಾಣ ಮಾಡಿದರು. ಸಮಕಾಲೀನ ಸಂದರ್ಭದಲ್ಲಿ ಹೊಸ ಸಾಹಿತ್ಯ ಚಳವಳಿಯಲ್ಲಿ ತೆರೆದ ಮನಸ್ಸಿನಿಂದ ಪಾಲ್ಗೊಂಡರು. ಹೀಗೆ ಎಲ್ಲವನ್ನೂ ಒಳಗೊಳ್ಳುವ ಮನಸ್ಸು ಮತ್ತು ಶಕ್ತಿ ಅವರದ್ದಾಗಿತ್ತು. ಅವರ ಗುರುಗಳಾದ ಕುವೆಂಪು ಅವರಿಂದ ಕಲಿತ ಪಾಠಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತಂದರು.
ಮನುಷ್ಯರಲ್ಲಿ ಅಪಾರ ನಂಬಿಕೆ ಇಟ್ಟರು. ಅಂತಃಕರಣ, ಪ್ರೀತಿಯನ್ನು ಪರಿಣಾಮಕಾರಿಯಾಗಿ ಗುರುತಿಸಿದರು.
‘ಎಲ್ಲೋ ಹುಡುಕಿದೆ ಇಲ್ಲದ ದೇವರಕಲ್ಲು ಮಣ್ಣುಗಳ ಗುಡಿಯೊಳಗೆಇಲ್ಲೇ ಇರುವ ಪ್ರೀತಿ, ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ....’ ಎಂದು ಹೇಳುವ ಮೂಲಕ ಮನುಷ್ಯರಲ್ಲಿನ ನಂಬಿಕೆಯನ್ನು ಮತ್ತಷ್ಟು ದೃಢಗೊಳಿಸಿದರು. ಆ ಅಂತಃಕರಣ ನಿಜಕ್ಕೂ ಅನನ್ಯ. ಕನ್ನಡ ಕಟ್ಟುವ ಬಗೆಗಿನ ಅವರ ದೂರದರ್ಶಿತ್ವ ಕೂಡ ಅಸಾಧಾರವಾದದ್ದು. ಕನ್ನಡ ಭಾಷೆಯನ್ನು, ಸಾಹಿತ್ಯವನ್ನು ಶ್ರೀಮಂತಗೊಳಿಸಿದ, ಪರಂಪರೆಯನ್ನು ಬೆಳೆಸಿದ ಅವರು ನಿಜಾರ್ಥದಲ್ಲಿ ರಾಷ್ಟ್ರಕವಿ. ಕನ್ನಡವನ್ನು ಕಟ್ಟುವ, ಬೆಳೆಸುವ ಕೆಲಸವೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ.