ಸ್ವಾತಂತ್ರ್ಯ ಹೋರಾಟಕ್ಕೆ ಬೆಳಗಾವಿ ಅಧಿವೇಶನ ಹೊಸ ಬೆಳಕು

Belgaum Conference
Published on

ಬೆಳಗಾವಿ: ಮಹಾತ್ಮಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಕೈಗೊಂಡ ನಿರ್ಣಯ, ಒಪ್ಪಂದಗಳು ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಚಳವಳಿಯ ದಿಕ್ಕನ್ನೇ ಬದಲಿಸಿದವು. ಅಲ್ಲಿಂದ ರಾಷ್ಟ್ರಾದ್ಯಂತ ಸ್ವಾತಂತ್ರ್ಯ ಹೋರಾಟದ ಕಾವು ತೀವ್ರವಾಗತೊಡಗಿತು.

ಬೆಳಗಾವಿಯ ಟಿಳಕವಾಡಿಯಲ್ಲಿ 1924 ಡಿಸೆಂಬರ್ 26, 27ರಂದು ಮಹಾತ್ಮಗಾಂಧಿ ಅಧ್ಯಕ್ಷತೆಯಲ್ಲಿ ನಡೆದ 39ನೇ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಅವಿಸ್ಮರಣೀಯ ಘಟನೆಗಳು ನಡೆದವು. ಶಾಂತಿ, ಸತ್ಯ ಅಹಿಂಸೆಗಳ ಮೂಲಕ ದೇಶದಲ್ಲಿ ಸ್ವಾತಂತ್ರ್ಯ ಚಳವಳಿಗೆ ಹೊಸ ರೂಪ ಕೊಟ್ಟಿತು. ಅಧಿವೇಶನದ ಬಳಿಕ ಶಿವಪುರ ಧ್ವಜ ಸತ್ಯಾಗ್ರಹ, ಅಂಕೋಲಾ ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ ಸೇರಿ ನಾನಾ ಹೋರಾಟಗಳು ಗಾಂಧೀಜಿ ನೇತೃತ್ವದಲ್ಲಿ ನಡೆದವು.

ರಾಷ್ಟ್ರೀಯ ನೇತಾರರು ಭಾಗಿ: ಬೆಳಗಾವಿ ಅಧಿವೇಶನಕ್ಕೆ ಮಹಾತ್ಮಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ಬಾಬು ರಾಜೇಂದ್ರ ಪ್ರಸಾದ್, ರಾಜಾಜಿ, ಮೋತಿಲಾಲ ನೆಹರು, ಜವಾಹರಲಾಲ್ ನೆಹರು, ಸರೋಜಿನಿ ನಾಯ್ಡು, ಲಾಲಾ ಲಜಪತರಾಯ್, ಅಲಿ ಸಹೋದರರು ಸೇರಿ ಗಣ್ಯರು ಭಾಗವಹಿಸಿದ್ದರು. ದೇಶದ ವಿವಿಧ ರಾಜ್ಯಗಳಿಂದ ಒಟ್ಟು 6,234 ಜನಪ್ರತಿನಿಧಿಗಳು ಬರುವ ನಿರೀಕ್ಷೆ ಇತ್ತು. ಆದರೆ 1844 ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಅಧಿವೇಶನದಲ್ಲಿ ಭಾಷಣ ಮಾಡಿದವರು: ಅಧಿವೇಶನ ಉದ್ದೇಶಿಸಿ ಮಾತನಾಡಲು ಪ್ರತಿನಿಧಿಗಳಾಗಿ ಬಂದಿದ್ದ ಎಸ್.ಎ.ಎಸ್. ತ್ಯಾಬಜಿ ಮತ್ತು ವಿ.ಮದನ್​ಜಿತ್, ರಾಷ್ಟ್ರೀಯ ನೇತಾರರಾದ ಮೋತಿಲಾಲ ನೆಹರು, ಮೌಲಾನಾ ಜಾಫರ್ ಅಲಿಖಾನ್, ಎಲ್.ಬಿ. ಬೋಪಟಕರ್, ಬಾಬು ಸೆಲ್ವನಾಥಬಿಸಿ, ಸರೋಜಾ ನಾಯ್ಡು, ಆರ್.ಕೆ. ಷಣ್ಣುಗಂ ಚೆಟ್ಟಿಯಾರ್, ಎಸ್.ಶ್ರೀನಿವಾಸ ಐಯ್ಯಂಗಾರ, ಡಾ. ಅನಿಬೆಸೆಂಟ್, ಚಿ.ಪೋಶನಿ, ಸರ್ದಾರ್ ಮಂಗಲಸಿಂಗ್ ಮುಂತಾದವರು ಮಾತನಾಡಿದರು.

ಗಾಂಧಿ ಭಾರತ ಸ್ವರೂಪ: ಕರ್ನಾಟಕದ ಇತಿಹಾಸದಲ್ಲಿ ಸದಾಕಾಲ ನೆನೆಯಬಹುದಾದ ಮಹತ್ವದ ಸನ್ನಿವೇಶವೆಂದರೆ ಅದು 1924ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ. ಈ ಅಧಿವೇಶನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಪಾತ್ರ ವಹಿಸಿತ್ತು. ಈಗ ಈ ಅಧಿವೇಶನಕ್ಕೆ ಶತಮಾನದ ಸಂಭ್ರಮ. ಇದರ ಸವಿನೆನಪಿಗಾಗಿಯೇ ಕಾಂಗ್ರೆಸ್ ಹಾಗೂ ಕರ್ನಾಟಕ ಸರ್ಕಾರ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಸಂಭ್ರಮಾಚರಣೆ ಮಾಡಲು ಉದ್ದೇಶಿಸಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ಡಿ.26 ಮತ್ತು 27ರಂದು ಅಭೂತಪೂರ್ವ ಕಾರ್ಯಕ್ರಮ ನಡೆಸಲಾಗುತ್ತಿದೆ. ದೇಶದ ವಿವಿಧ ಭಾಗಗಳಿಂದ ಆಗಮಿಸುವ ಅತಿಥಿಗಳನ್ನು ಸತ್ಕರಿಸಲಾಗುತ್ತಿದ್ದು, ಬೆಳಗಾವಿ ಮಿರಿಮಿರಿ ಮಿಂಚುತ್ತಿದೆ. ಮೈಸೂರು ದಸರಾ ಸಂಭ್ರಮದಂತೆ ಕಂಗೊಳಿಸುತ್ತಿದೆ. ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಲು ಪ್ರದೇಶ ಕಾಂಗ್ರೆಸ್ ಸಮಿತಿ ಟೊಂಕಕಟ್ಟಿ ನಿಂತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಎಲ್ಲ ರಾಜ್ಯಗಳ ಶಾಸಕಾಂಗ ಪಕ್ಷದ ನಾಯಕರು, ಸಂಸದರು ಆಗಮಿಸಲಿದ್ದಾರೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮಿತಿಯ ಸದಸ್ಯರು ಮಾತ್ರ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಪಕ್ಷದ ಮುಂದಿನ ಕಾರ್ಯಚಟುಟಿಕೆ ಬಗ್ಗೆ ವಿಚಾರ ಮಂಥನ ನಡೆಯುವುದು. ಹೋರಾಟವನ್ನು ರೂಪಿಸುವ ಕುರಿತು ನಿರ್ಣಯವನ್ನೂ ಕೈಗೊಳ್ಳಲಾಗುತ್ತಿದೆ.

ಎರಡು ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆಗಳನ್ನು ನಡೆಸಿದ್ದಾರೆ. ಸಚಿವರು, ಶಾಸಕರು, ಪದಾಧಿಕಾರಿಗಳಿಗೆ ವಿವಿಧ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಪ್ರಮುಖವಾಗಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕ ವಾಧ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿ ಹಲವು ಪ್ರಮುಖ ನಾಯಕರು ಪಾಲ್ಗೊಳ್ಳುವರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕಾನೂನು ಸಚಿವ ಎಚ್.ಕೆ.ಪಾಟೀಲ್ ಅಧ್ಯಕ್ಷತೆಯಲ್ಲಿ ಶತಮಾನೋತ್ಸವ ಸಮಿತಿ ರಚನೆಯಾಗಿದ್ದು, ಕಾರ್ಯಕ್ರಮದ ಸ್ವರೂಪ ನಿರ್ಧರಿಸಲಾಗಿದೆ.

DK Surjewala

ಗಾಂಧೀಜಿ ಭಾಷಣ ಹೇಗಿತ್ತು?: ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಮಹಾತ್ಮಗಾಂಧಿ ಅವರು, ಧರ್ಮಗಳನ್ನು ರಾಷ್ಟ್ರಗಳಂತೆ ತೂಗಿ ಅಳೆಯಬೇಕು. ಅನ್ಯಾಯ, ಅಧರ್ಮ ಮತ್ತು ಹಿಂಸೆಗಳನ್ನು ಆಚರಿಸುವ ರಾಷ್ಟ್ರಗಳು ಮತ್ತು ಧರ್ಮಗಳು ಅಳಿಸಿ ಹೋಗುತ್ತವೆ. ದೇವರ ಕೃಪೆ ಮತ್ತು ದಿವ್ಯಜ್ಞಾನವು ದೇಶ ಅಥವಾ ಜನಾಂಗದ ಸ್ವತ್ತಲ್ಲ. ದೇವರನ್ನು ನಂಬುವ ಎಲ್ಲರಿಗೂ ಅವು ಸಮಾನವಾಗಿ ದೊರೆಯುತ್ತವೆ. ದೇವರು ಬೆಳಕು ಹೊರತು ಕತ್ತಲೆಯಲ್ಲ. ಸತ್ಯವೇ ಹೊರತು ಅಸತ್ಯವಲ್ಲ. ಆತ ಸರ್ವಶಕ್ತ. ನಾವು ಅವನ ಸೃಷ್ಟಿಯ ಕಣಗಳು, ನಾವು ವಿನೀತರಾಗೋಣ. ದೀನರನ್ನು ಮಾನ್ಯ ಮಾಡೋಣ. ದಯವೇ ಧರ್ಮದ ಮೂಲ. ಹೀಗೆ ಗಾಂಧೀಜಿ ಅವರು ಭಾಷಣದಲ್ಲಿ ಅಸ್ಪಶ್ಯತೆ ಆಚರಣೆ ವಿರುದ್ಧ ಎಚ್ಚರಿಸುತ್ತ ಸ್ವರಾಜ್ಯ ಸ್ಥಾಪನೆಗೆ ಅಸ್ಪಶ್ಯತೆಯೂ ಅಡ್ಡಿ. ಹಿಂದು ಮುಸ್ಲಿಮರ ಐಕ್ಯತೆ ಎಷ್ಟು ಮಹತ್ವವೋ ಅಸ್ಪಶ್ಯತೆ ನಿವಾರಣೆಯೂ ಅಷ್ಟೇ ಮಹತ್ವದ್ದು ಎಂದು ಹೇಳಿದರು.

ಅಧಿವೇಶನದಿಂದಾದ ಪ್ರಯೋಜನಗಳು: ಅಧಿವೇಶನವು ಕಾಂಗ್ರೆಸಿನೊಂದಿಗೆ ಮುನಿಸಿಕೊಂಡಿದ್ದ ಸ್ವರಾಜ್ಯ ಪಕ್ಷದವರನ್ನೂ ಮತ್ತು ಮುಸ್ಲಿಮರನ್ನು ಕಾಂಗ್ರೆಸ್​ನೊಂದಿಗೆ ಒಂದುಗೂಡಿಸುವುದರ ಮೂಲಕ ಐಕ್ಯತಾ ಸಮ್ಮೇಳನವೆಂಬ ಖ್ಯಾತಿಗೆ ಪಾತ್ರವಾಯಿತು. ಸಿ.ಆರ್.ದಾಸ ಅವರಿಗೆ ಸ್ವರಾಜ್ಯ ಪಕ್ಷ ಕಟ್ಟಲು ಗಾಂಧೀಜಿ ಅನುಮತಿ ನೀಡಿದರು. ಕರ್ನಾಟಕದ ಕಾಂಗ್ರೆಸ್ ಹೋರಾಟಗಾರರಿಗೆ ಈ ಅಧಿವೇಶನ ಉತ್ತೇಜನ ನೀಡಿತು. ಈ ಅಧಿವೇಶನದಲ್ಲಿಯೇ ಕರ್ನಾಟಕ ಏಕೀಕರಣ ಎಂಬ ಸಂಸ್ಥೆ ಸ್ಥಾಪಿಸಲಾಯಿತು. ಇದೇ ಮುಂದೆ ಕರ್ನಾಟಕ ಏಕೀಕರಣ ಸಂಘವಾಗಿ ಸ್ವಾತಂತ್ರ್ಯದ ಜೊತೆಗೆ ಕರ್ನಾಟಕದ ಏಕೀಕರಣಕ್ಕಾಗಿಯೂ ಹೋರಾಡಿತು.

ಏನೇನು ಅಂಗೀಕಾರ?: 39ನೇ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧಿ-ದಾಸ-ನೆಹರು ಒಪ್ಪಂದ ಅಂಗೀಕರಿಸಲಾಯಿತು. ಅಸ್ಪಶ್ಯತೆ ಮತ್ತು ವೈಕಂ ಸತ್ಯಾಗ್ರಹ, ಪಾನೀಯ ಮತ್ತು ಅಫೀಮು ಮಾರಾಟ ನಿರ್ಣಯ, ಕೊಹಾಟ್​ನಿಂದ ಹಿಂದುಗಳ ನಿರ್ಗಮನ ಖಂಡಿಸಲಾಯಿತು. ಕೊಹಾಟ್​ನ ಮುಸ್ಲಿಮರು ಹಿಂದು ಸಹೋದರರಿಗೆ ಜೀವ ಮತ್ತು ಆಸ್ತಿಯ ಸಂಪೂರ್ಣ ರಕ್ಷಣೆಯ ಭರವಸೆ ನೀಡುವಂತೆ ಉತ್ತೇಜಿಸಲಾಯಿತು. ಕೊಹಾಟ್ ಮುಸ್ಲಿಮರ ಆಹ್ವಾನದ ಮೇರೆಗೆ ಹಿಂದು ನಿರಾಶ್ರಿತರಿಗೆ ಹಿಂತಿರುಗದಂತೆ ಸೂಚಿಸಲಾಯಿತು. ನಿಜಾಮರ ಆಳ್ವಿಕೆಯಲ್ಲಿ ಗುಲ್ಬರ್ಗದಲ್ಲಿ ನೊಂದವರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಲಾಯಿತು.

ಅಂದಿನ ಅಧಿವೇಶನದ ನಿರ್ಣಯಗಳು

  1. ಕಾಂಗ್ರೆಸ್ ಸಂಸ್ಥೆಗೆ ಆಯ್ಕೆಗೊಂಡ ಸದಸ್ಯರು ಪ್ರತಿ ತಿಂಗಳು ಆರು ಸಾವಿರ ಅಡಿ ನೂಲನ್ನು ನೂಲಬೇಕು ಮತ್ತು ಕಾಂಗ್ರೆಸಿಗರೆಲ್ಲ ಮುಂದೆ ಖಾದಿ ಬಟ್ಟೆಯನ್ನೇ ಧರಿಸಬೇಕು.
  2. 1924ರಲ್ಲಿ ಗಾಂಧೀಜಿ ಮೋತಿಲಾಲ ನೆಹರು ಮತ್ತು ಚಿತ್ತರಂಜನ್ ದಾಸ್ ಅವರ ನಡುವೆ ಪಾಟ್ನಾದಲ್ಲಿ ಆದ ಒಪ್ಪಂದದಂತೆ ಕಾಂಗ್ರೆಸನ್ನು ಸ್ವರಾಜ್ಯ ಪಕ್ಷದವರ ಕಡೆಗೆ ಕೊಡಬೇಕು ಎಂಬುದನ್ನು ದೃಢೀಕರಿಸಲಾಯಿತು.
  3. ಕೊಹಾಟ್​ನಲ್ಲಿ ಹಿಂದು ಜನರ ಮೇಲೆ ನಡೆದ ದಬ್ಬಾಳಿಕೆ ಖಂಡಿಸಲಾಯಿತು ಮತ್ತು ಅಲ್ಲಿನ ಹಿಂದುಗಳಿಗೆ ಮುಸ್ಲಿಮರು ಸಂರಕ್ಷಣೆ ನೀಡಬೇಕು.
  4. ಅಸ್ಪಶ್ಯತೆ ಹೋಗಲಾಡಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಮತ್ತು ಅದು ನಮ್ಮಿಂದಲೇ ಪ್ರಾರಂಭವಾಗಬೇಕು.
  5. ರಾಷ್ಟ್ರೀಯ ಹಾಗೂ ಸಾರ್ವಜನಿಕ ಸೇವೆಗಾಗಿ ಸಂಬಳ ಪಡೆದರೆ ತಪ್ಪಲ್ಲ.
  6. ಸರೋಜಿನಿ ನಾಯ್ಡು, ಬನಾರಸಿದಾಸ್, ಚತುರ್ವೆದಿ ಇವರು ವಿದೇಶಗಳಲ್ಲಿ ನಮ್ಮ ದೇಶದ ಸ್ವಾತಂತ್ರ್ಯ ಚಳವಳಿ ಪ್ರಚಾರ ಮಾಡಿದ್ದಕ್ಕೆ ಅವರನ್ನು ಅಭಿನಂದಿಸಲಾಯಿತು.

2 ದಿನ ಏನೇನು?

ಡಿ.26 ಗುರುವಾರ: ಬೆಳಗ್ಗೆ 10 ಗಂಟೆ: ಸಿಎಂ ಸಿದ್ದರಾಮಯ್ಯ ಅವರಿಂದ ಗಾಂಧಿ ಪ್ರತಿಮೆ ಅನಾವರಣ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ಫೋಟೋ ಗ್ಯಾಲರಿ ಅನಾವರಣ, ಸ್ಥಳ: ವೀರ ಸೌಧ (ತಿಲಕ್​ವಾಡಿ)

ಬೆಳಗ್ಗೆ 10.45: ಸಿದ್ದರಾಮಯ್ಯ ಅವರಿಂದ ಖಾದಿ ಮೇಳ ಉದ್ಘಾಟನೆ, ಡಿ.ಕೆ.ಶಿವಕುಮಾರ್ ಅವರಿಂದ ಪ್ರದರ್ಶನ ಉದ್ಘಾಟನೆ, ಸ್ಥಳ: ಸರ್ದಾರ್ ಮೈದಾನ

ಬೆಳಗ್ಗೆ 11.15: ಗಂಗಾಧರ ರಾವ್ ದೇಶಪಾಂಡೆ ಪುತ್ಥಳಿ ಹಾಗೂ ಸಂಸ್ಮರಣಾ ಭವನ ಉದ್ಘಾಟನೆ, ಡಿ.ಕೆ.ಶಿವಕುಮಾರ್ ಅವರಿಂದ ಗಂಗಾಧರ ರಾವ್ ದೇಶಪಾಂಡೆ ಫೋಟೋ ಗ್ಯಾಲರಿ ಉದ್ಘಾಟನೆ, ಸ್ಥಳ: ರಾಮತೀರ್ಥ ನಗರ

ಮಧ್ಯಾಹ್ನ 3 ಗಂಟೆ: ಎಐಸಿಸಿ ಕಾರ್ಯಕಾರಿ ಸಮಿತಿ ಮುಂದುವರಿದ ಸಭೆ, ಸ್ಥಳ: ವೀರಸೌಧ

ರಾತ್ರಿ 7 ಗಂಟೆ: ಎಐಸಿಸಿ ಅಧ್ಯಕ್ಷರಿಂದ ಭೋಜನಕೂಟ

ಡಿ.27 ಶುಕ್ರವಾರಬೆಳಗ್ಗೆ 10.30: ಗಾಂಧಿ ಪ್ರತಿಮೆ ಅನಾವರಣ, ಸುವರ್ಣಸೌಧ

ಮಧ್ಯಾಹ್ನ 12: ಸಿದ್ದರಾಮಯ್ಯ ಅವರಿಂದ ಭೋಜನಕೂಟ, ಸುವರ್ಣಸೌಧ

ಮಧ್ಯಾಹ್ನ 1: ಸಾರ್ವಜನಿಕ ಸಭೆ, ಸಿಪಿಇಡಿ ಮೈದಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net