ಬೆಳಗಾವಿ, ಕನಕಪುರ ಅಂದರೆ ಬನಾನಾ ರಿಪಬ್ಲಿಕ್ಕಾ ?: ಸಿ.ಟಿ.ರವಿ ಪ್ರಶ್ನೆ

IMG_20241221_141743
Published on

ಬೆಂಗಳೂರು: ಬೆಳಗಾವಿಯಿಂದ ಸಿ.ಟಿ.ರವಿ ಬದುಕಿ ಬಂದಿದ್ದೇ ಪುಣ್ಯವೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಳಗಾವಿ ಹಾಗೂ ಕನಕಪುರ ಅಂದರೆ ಬನಾನಾ ರಿಪಬ್ಲಿಕ್ಕಾ ? ಕರ್ನಾಟಕದಲ್ಲಿ ಬನಾನಾ ರಿಪಬ್ಲಿಕ್ ಆಡಳಿತ ಇದೆಯೆ ? ಎಂದು ವಿಧಾನ ಪರಿಷತ್ ಸದಸ್ಯ ಬಿಜೆಪಿಯ ಸಿ.ಟಿ.ರವಿ ಪ್ರಶ್ನಿಸಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್ ಸಭಾಂಗಣದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಏಕವಚನದಲ್ಲಿ ನಿಂದಿಸಿ ನೇರವಾಗಿ ಕೊಲೆ ಬೆದರಿಕೆ ಹಾಕಿದ್ದಾರೆ.

ಅಲ್ಲದೆ ಸುವರ್ಣ ವಿಧಾನಸೌಧದ ಕಾರಿಡಾರ್ ನಲ್ಲಿ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪೀಸ್ ಪೀಸ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದು, ನನಗೆ ಜೀವ ಬೆದರಿಕೆಯಿರುವ ಕಾರಣ ನನ್ನ ರಕ್ಷಣೆ ಸರ್ಕಾರದ ಹೊಣೆಯಾಗಿದೆ. ಏನೇ ಆದರೂ ಸರ್ಕಾರವೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಸಿ.ಟಿ.ರವಿ ಹೇಳಿದರು‌.

ನ್ಯಾಯಾಂಗ ತನಿಖೆಗೆ ಒತ್ತಾಯ

ಪೊಲೀಸರ ನಡೆಸಿದ ದೌರ್ಜನ್ಯ ನ್ಯಾಯಾಂಗ ತನಿಖೆಯಾಗಬೇಕು. ಎಲ್ಲ ಪೊಲೀಸ್ ಅಧಿಕಾರಿಗಳ ಖಾಸಗಿ, ಅಧಿಕೃತ ಮೊಬೈಲ್ ಗಳ ಕಾಲ್ ರಿಕಾರ್ಡ್ ಗಳು ತನಿಖೆಗೆ ಒಳಪಡಿಸುವ ಜತೆಗೆ ಅಮಾನವೀಯವಾಗಿ ವರ್ತಿಸಿದ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ನನ್ನ ಮೊಬೈಲ್ ಕರೆಗಳನ್ನು ಕದ್ದಾಲಿಸುತ್ತಿರುವ ಅನುಮಾನವಿದೆ. ನಾನು ಪೊಲೀಸ್ ಸುಪರ್ದಿಯಲ್ಲಿದ್ದಷ್ಟು ಯಾರದೋ ನಿರ್ದೇಶನ, ಕರೆಗಳ ಪ್ರಕಾರ ಪೊಲೀಸ್ ಅಧಿಕಾರಿಗಳು ನಡೆಸಿಕೊಂಡಿದ್ದು, ನಿಗೂಢ ಹಾಗೂ ಷಡ್ಯಂತ್ರದ ಭಾಗವಾಗಿ ಈ ಕೃತ್ಯ‌ನಡೆದಿರುವ ಸಂಶಯವಿದೆ ಎಂದರು.

ಪೊಲೀಸರ ದೌರ್ಜನ್ಯ, ಅರೆಸ್ಟ್ ಬಗ್ಗೆ ಕಾನೂನುಬಾಹಿರ ನಡವಳಿಕೆ ಮತ್ತಿತರ ಬೆಳವಣಿಗೆ ಕುರಿತು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆ ಸೇರಿ, ಮುಂದಿನ ನಡೆಯ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಿ.ಟಿ.ರವಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net