ಒಳ ಮೀಸಲಾತಿ ಜಾರಿಗೊಳಿಸದಿರಲು ಒತ್ತಾಯಿಸಿ ಬೆಳಗಾವಿ ಚಲೋ

banjara student union
Published on

ಶಿವಮೊಗ್ಗ: ವಾಸ್ತವ ಮತ್ತು ವಸ್ತುನಿಷ್ಠ ದತ್ತಾಂಶವೇ ಇಲ್ಲದೆ ಸರ್ಕಾರ ತರಾತುರಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಡಿ.17ರಂದು ಬೆಳಗಾವಿ ಸುವರ್ಣ ಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ಗಿರೀಶ್ ಹೇಳಿದರು.

ಭೋವಿ, ಕೊರಚ, ಕೊರಮ, ಬಂಜಾರರ ಮಹಾ ಒಕ್ಕೂಟ ಒಳ ಮೀಸಲಾತಿ ಜಾರಿಗೆ ತರದಂತೆ ಹೋರಾಟಕ್ಕೆ ಕರೆ ನೀಡಿದೆ. ಸರ್ಕಾರದ ಬಳಿ 2011ರ ಜನಗಣತಿ ಅಂಕಿ ಅಂಶಗಳ ಮಾಹಿತಿ ಮಾತ್ರ ಲಭ್ಯವಿದ್ದು ಅದರಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳ ದತ್ತಾಂಶವಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗಕ್ಕೆ ನೀಡಿರುವ 2 ತಿಂಗಳ ಕಾಲಾವಕಾಶದಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳ ದತ್ತಾಂಶ ಸಂಗ್ರಹಣೆ ಅಸಾಧ್ಯವಾಗಿದೆ. 2015ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್.ಕಾಂತರಾಜ್ ನೀಡಿದ್ದ ವರದಿಯನ್ನೂ ಸರ್ಕಾರ ಒಪ್ಪಿಕೊಂಡಿಲ್ಲ. ಅಲ್ಲದೆ, ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಿ ಸದಾಶಿವ ಆಯೋಗದ ವರದಿಯನ್ನು ಅಪ್ರಸ್ತುತವೆಂದು ತಿರಸ್ಕರಿಸಿದೆ. ಹಾಗಾಗಿ ಸರ್ಕಾರ ಇದೀಗ ತರಾತುರಿಯಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸಬಾರದು ಎಂದು ಮನವಿ ಮಾಡಿದರು. ಪ್ರಮುಖರಾದ ಮಂಜುನಾಥ ನಾಯ್ಕ, ಉಮಾ ಮಹೇಶ್ವರ ನಾಯ್ಕ, ಹೇಮೇಶ್ ನಾಯ್ಕ, ಪುಷ್ಪಾ ಬಾಯಿ, ಮಂಜುನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net