ಬೆಳಗಾವಿ ಚಿರತೆ ಸೆರೆಗೆ ಸಕ್ರೆಬೈಲು ಆನೆಗಳ ಬಳಕೆ

elephant
Published on

ಶಿವಮೊಗ್ಗ: ಸಕ್ರೆಬೈಲು ಬಿಡಾರದ ಆನೆಗಳು ಮತ್ತೊಂದು ಸಾಹಸಕ್ಕೆ ಅಣಿಯಾಗಿ ಹೊರಟಿವೆ. ಇದುವರೆಗೆ ಅನೇಕ ಕಾಡಾನೆ ಸೆರೆ ಆಪರೇಷನ್‌ನಲ್ಲಿ ಯಶಸ್ಸು ಕಂಡಿರುವ ಬಿಡಾರದ ಆನೆಗಳು ಈ ಬಾರಿ ಚಿರತೆ ಹಿಡಿಯುವ ಕಾರ್ಯಾಚರಣೆಗೆ ಬೆನ್ನುಲುಬಾಗಿ ನಿಲ್ಲಲಿವೆ.

ಹೌದು. ಹಲವು ದಿನಗಳಿಂದ ದೂರದ ಬೆಳಗಾವಿಯಲ್ಲಿ ಜನರ ನಿದ್ದೆಗೆಡಿಸಿರುವ ಚಿರತೆ ಹಿಡಿಯಲು ಶತಪ್ರಯತ್ನ ಮುಂದುವರಿದಿದೆ. ಈ ಕಾರ್ಯಾಚರಣೆಗೆ ಎರಡು ಆನೆಗಳನ್ನು ಕಳುಹಿಸುವಂತೆ ಸ್ವತಃ ಅರಣ್ಯ ಸಚಿವ ಉಮೇಶ್ ಕತ್ತಿ ಸೂಚನೆ ನೀಡಿದ್ದ ಕೆಲವೇ ಗಂಟೆಗಳಲ್ಲಿ ಸಕ್ರೆಬೈಲು ಬಿಡಾರದಿಂದ ಎರಡು ಆನೆಗಳನ್ನು ಕಳುಹಿಸಲಾಗಿದೆ.

ಬಿಡಾರದಿಂದ ಅರ್ಜುನ್ ಹಾಗೂ ಆಲೆ ಎಂಬ ಎರಡು ಆನೆಗಳು ಮಂಗಳವಾರ ಬೆಳಗಾವಿಯತ್ತ ಪ್ರಯಾಣ ಬೆಳೆಸಿದವು. ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ವಿನಯ್ ನಿಗಾದಲ್ಲಿ ಈ ಆನೆಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಲಿವೆ. ಮಂಗಳವಾರ ಆನೆಗಳ ಆರೋಗ್ಯ ತಪಾಸಣೆ ನಡೆಸಿ, ನಿತ್ಯದಂತೆ ನಿಗದಿತ ಆಹಾರ ನೀಡಿ ದೀರ್ಘ ಪ್ರಯಾಣಕ್ಕೆ ಅವುಗಳನ್ನು ಬಿಡಾರದ ಸಿಬ್ಬಂದಿ ಬೀಳ್ಕೊಟ್ಟರು.

ಮೊದಲ ಅನುಭವ

ಅರ್ಜುನ ಹಾಗೂ ಆಲೆ ಇಬ್ಬರೂ ಸಕ್ರೆಬೈಲು ಬಿಡಾರದ ಪ್ರಮುಖ ಆಕರ್ಷಣೆಗಳಾಗಿವೆ. ಬಿಡಾರ ಹಾಗೂ ಸಕ್ರೆಬೈಲು ದಟ್ಟಾರಣ್ಯದಲ್ಲಿ ಆಹಾರ, ತುಂಗಾನದಿಯಲ್ಲಿ ವಿಹಾರ ನಡೆಸಿದ್ದನ್ನು ಬಿಟ್ಟರೆ ಈ ಎರಡೂ ಆನೆಗಳು ಬೇರೆ ಕಡೆ ಹೋಗಿಯೇ ಇಲ್ಲ. ವನ್ಯಜೀವಿ ಸೆರೆ ಕಾರ್ಯಾಚರಣೆ ಇವರೆಡಕ್ಕೂ ಹೊಸದು.

ಆದರೆ ಚುರುಕು ಸ್ವಭಾವದ, ಮಾವುತನ ಆಜ್ಞೆಯನ್ನು ಶಿರಸಾ ಪಾಲಿಸುವ ಕ್ಲಿಷ್ಟಕರ ಸನ್ನಿವೇಶದಲ್ಲಿ ಧೈರ್ಯಗೆಡದೇ ಕಾರ್ಯನಿರ್ವಹಿಸುವ ಗುಣ ಆಲೆ ಹಾಗೂ ಅರ್ಜುನ ಇಬ್ಬರಿಗೂ ಇದೆ. ಈ ಕಾರಣದಿಂದ ಇವುಗಳನ್ನೇ ಚಿರತೆ ಸೆರೆ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಈ ಆಪರೇಷನ್ ಪೂರೈಸಿದರೆ ಮುಂದಿನ ದಿನಗಳಲ್ಲಿ ಇವುಗಳ ಜವಾಬ್ದಾರಿ ಮತ್ತಷ್ಟು ಹೆಚ್ಚಲಿದೆ.

ಆಪರೇಷನ್ ಸ್ಪೆಷಲಿಸ್ಟ್ ಆನೆಗಳು

ಸಕ್ರೆಬೈಲು ಆನೆ ಬಿಡಾರಕ್ಕೆ ಎರಡು ದಶಕಗಳಿಗೂ ಹೆಚ್ಚಿನ ಹಿನ್ನೆಲೆಯಿದೆ. ಕಳೆದೊಂದು ದಶಕದಲ್ಲಿ ವನ್ಯಜೀವಿ, ಮಾನವ ಸಂಘರ್ಷ ಹೆಚ್ಚಿದ ಬಳಿಕವಂತೆ ಬಿಡಾರಕ್ಕೆ ಮತ್ತಷ್ಟು ಮಹತ್ವ ಸಿಕ್ಕಿದೆ. ಇಲ್ಲಿ ಪಳಗಿದ ಆನೆಗಳು ಅನೇಕ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿವೆ. ಕಾಡಿನಲ್ಲಿ ಸೆರೆ ಸಿಕ್ಕ ಆನೆಗಳು ಇಲ್ಲಿಗೆ ಬಂದು ಪಳಗಿವೆ. ಇಲ್ಲಿ ಪಾಠ ಕಲಿತ ಕಾಡಾನೆಗಳು ಕೂಡಾ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿವೆ.

ಬಾಲಣ್ಣ, ಸೋಮಣ್ಣ, ಸಾಗರ್, ಬಹದ್ದೂರ್, ಭಾನುಮತಿ ಮುಂತಾದ ಆನೆಗಳು ಆಪರೇಷನ್ ಸ್ಪೆಷಲಿಸ್ಟ್ ಎಂದೇ ಗುರುತಿಸಲ್ಪಟ್ಟಿವೆ. ಎಂತಹ ಸಂಕಷ್ಟದ, ಕಠಿಣ ಪರಿಸ್ಥಿತಿಯಲ್ಲೂ ಇವು ಗುರಿ ತಲುಪದೇ ಮರಳಿದ ನಿದರ್ಶನಗಳಿಲ್ಲ. ಈಗ ಇವುಗಳ ಸಾಲಿಗೆ ಸೇರಲು ಅರ್ಜುನ ಹಾಗೂ ಆಲೆ ಸಿದ್ಧವಾಗಿ ಬೆಳಗಾವಿಗೆ ತೆರಳಿವೆ.

ಹಲವು ಯಶಸ್ವಿ ಕಾರ್ಯಾಚರಣೆ

ಚನ್ನಗಿರಿ, ಚಿತ್ರದುರ್ಗ, ಆರು ತಿಂಗಳ ಹಿಂದೆ ಹಾವೇರಿಯ ಗುತ್ತಲ, ಚಿಕ್ಕಮಗಳೂರು ಸಮೀಪದಲ್ಲಿ ಕಾಡಾನೆಗಳನ್ನು ಸೆರೆ ಹಿಡಿದಿರುವುದು ಸಕ್ರೆಬೈಲು ಬಿಡಾರದ ಆನೆಗಳ ಸಾಧನೆ. ಉಂಬ್ಳೆಬೈಲು ಭಾಗದಲ್ಲಿ ಕಾಡಾನೆಯನ್ನು ಹಿಮ್ಮೆಟ್ಟಿಸುವಲ್ಲಿ ಸಾಗರ ಮತ್ತಿತರ ಆನೆಗಳು ಯಶಸ್ವಿಯಾಗಿದ್ದವು. ಈ ವರ್ಷ ಬೇಸಿಗೆಯಲ್ಲಿ ತುಂಗಾ ನದಿ ದಾಟಿ ಭದ್ರಾ ಅಭಯಾರಣ್ಯದಿಂದ ಮಂಡಗದ್ದೆ ಭಾಗದಲ್ಲಿ ಸಂಚರಿಸುತ್ತಿದ್ದ ಕಾಡಾನೆಗಳನ್ನೂ ಮತ್ತೆ ನದಿ ದಾಟಿಸಿದ್ದು ಇದೇ ಬಿಡಾರದ ಆನೆಗಳು.

ಮೆರವಣಿಗೆಗೂ ಸೈ-ಕೆಲಸಕ್ಕೂ ಜೈ

ಸಕ್ರೆಬೈಲು ಆನೆ ಬಿಡಾರದ ಆನೆಗಳ ವೈಶಿಷ್ಟೃವೇ ಅದು. ಅವು ದಸರಾದಲ್ಲಿ ಭಾಗವಹಿಸಿ ಅಂಬಾರಿ ಹೊತ್ತು ಮೆರವಣಿಗೆಯಲ್ಲೂ ಹೆಜ್ಜೆ ಹಾಕಬಲ್ಲವು. ಅಗತ್ಯ ಬಿದ್ದರೆ ಕಾಡಿನಾಳಕ್ಕೆ ಇಳಿದು ಒಂಟಿ ಸಲಗವನ್ನೂ ಹಿಮ್ಮೆಟ್ಟಿಸಬಲ್ಲವು. ಬಿಡಾರದ ಮೆಚ್ಚಿನ ಆನೆ ಸಾಗರ ಶಿವಮೊಗ್ಗದ ದಸರಾದಲ್ಲಿ ಹಲವು ವರ್ಷಗಳಿಂದ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿದ್ದಾನೆ. ಬೇರೆ ಸಮಯದಲ್ಲಿ ಕಾರ್ಯಾಚರಣೆಗೆ ಕರೆದೊಯ್ದರೆ ಅಲ್ಲೂ ತನ್ನ ಪರಾಕ್ರಮ ತೋರುತ್ತಿದ್ದಾನೆ.

ಜಯಪುರದಲ್ಲಿ ಆಪರೇಷನ್ ವಿಳಂಬ

ಆರು ತಿಂಗಳ ಹಿಂದೆ ಹಾವೇರಿಯ ಗುತ್ತಲದಲ್ಲಿ ಒಂಟಿ ಸಲಗವೊಂದನ್ನು ಭಾನುಮತಿ ಮೂಲಕ ಹನಿಟ್ರಾೃಪ್ ಮಾಡಿಸಿ ಖೆಡ್ಡಾಕ್ಕೆ ಕೆಡವಲಾಗಿತ್ತು. ಬಳಿಕ ಆ ಕಾಡಾನೆಯನ್ನು ಭದ್ರಾ ಅಭಯಾರಣ್ಯದಲ್ಲಿ ಬಿಡಲಾಗಿತ್ತು. ಆದರೆ ಅದು ಕಾಡನೊಳಗಿನಿಂದ ನಿಧಾನವಾಗಿ ಕಾಫಿ ಎಸ್ಟೇಟ್ ಸೇರಿಕೊಂಡಿದೆ.

ಗುತ್ತಲದಲ್ಲಿ ಸೆರೆ ಹಿಡಿದಿದ್ದ ಕಾಡಾನೆಗೆ ವನ್ಯಜೀವಿ ವಿಭಾಗದ ವೈದ್ಯ ಡಾ.ವಿನಯ್ ಕಾಲರ್‌ಐಡಿ ಅಳವಡಿಸಿದ್ದರು. ಈ ಆ ಆನೆ ಶೃಂಗೇರಿ ತಾಲೂಕಿನ ಜಯಪುರ ಸಮೀಪ 1,500 ಎಕರೆ ವಿಸ್ತೀರ್ಣದ ಕಾಫಿ ಎಸ್ಟೇಟ್‌ನಲ್ಲಿ ಸೇರಿಕೊಂಡಿರುವುದು ದೃಢಪಟ್ಟಿದೆ. ಹಗಲಿನ ವೇಳೆ ಕಾಫಿ ಎಸ್ಟೇಟ್ ಪಕ್ಕದಲ್ಲಿರುವ ಅರಣ್ಯದೊಳಕ್ಕೆ ತೆರಳುವ ಈ ಕಾಡಾನೆ ರಾತ್ರಿ ಸಮಯದಲ್ಲಿ ಎಸ್ಟೇಟ್‌ನೊಳಗೆ ಬರುತ್ತಿದೆ. ಅಲ್ಲಿರುವ ಕಾಫಿ, ಅಡಕೆ, ಬಾಳೆ, ಹಲಸು ತಿಂದು ಅದಕ್ಕೆ ಆಕರ್ಷಿತವಾಗಿ ಬಿಟ್ಟಿದೆ.

ಈ ಆನೆ ಸೆರೆ ಹಿಡಿಯಲು ಬಾಲಣ್ಣ, ಸಾಗರ, ಸೋಮಣ್ಣ, ಬಹದ್ದೂರ್ ಎಂಬ ಆನೆಗಳನ್ನು ಜಯಪುರಕ್ಕೆ ಕೊಂಡೊಯ್ಯಲಾಗಿದೆ. ಈಗ ಡಾ.ವಿನಯ್ ಬೆಳಗಾವಿಗೆ ತೆರಳಿರುವುದರಿಂದ ಜಯಪುರದ ಕಾರ್ಯಾಚರಣೆ ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net