

ಬೆಳಗಾವಿ: ಜೀವನದಲ್ಲಿ ಜಿಗುಪ್ಸೆ ಹೊಂದಿ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಸಂಚಾರಿ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ತಮ್ಮ ಪ್ರಾಣವನ್ನು ಲೆಕ್ಕಿಸದೇ ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಬೆಳಗಾವಿಯ ಕೋಟೆ ಕೆರೆ (ಕಿಲ್ಲಾ ಕೆರೆ) ಬಳಿ ನಿನ್ನೆ (ಜು.22) ಸಂಜೆ 4.45ರ ಸುಮಾರಿಗೆ ನಡೆದಿದೆ.
ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ 44 ವರ್ಷದ ಶೀವಲೀಲಾ ಎಂಬಾಕೆ ಕೆರೆಗೆ ಹಾರಿದನ್ನು ಗಮನಿಸಿ, ಸ್ಥಳದಲ್ಲಿದ್ದ ಸ್ಥಳೀಯರು ಕೂಡಲೇ ಉತ್ತರ ಸಂಚಾರ ಠಾಣೆಯ ಕಾನ್ಸ್ಟೆಬಲ್ ಕಾಶಿನಾಥ ಈರಿಗಾರಗೆ ಮಾಹಿತಿ ನೀಡಿದರು. ಈ ವೇಳೆ ಈರಿಗಾರ ಅರು ಲೆಕ್‌ವ್ಯೂ ಆಸ್ಪತ್ರೆ ಪಾಯಿಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಓಡೋಡಿ ಬಂದ ಈರಿಗಾರ ಅವರು ಪೊಲೀಸ್ ಸಮವಸ್ತ್ರದಲ್ಲೇ ಕೆರೆಗೆ ಹಾರಿ, ಮುಳುಗುತ್ತಿದ್ದ ಮಹಿಳೆಯನ್ನು ದಡಕ್ಕೆ ಎಳೆದುತರುವ ಮೂಲಕ ರಕ್ಷಣೆ ಮಾಡಿದ್ದಾರೆ. ಕರೆಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸುಮಾರು ಐದು ಅಡಿ ಎತ್ತರದ ಬ್ಯಾರಿಕೇಡ್ ಮೇಲಿಂದ ಜಿಗಿದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ಈರಿಗಾರ ಅವರು ಈ ಹಿಂದೆ ಮಾರ್ಕೆಟ್ ಠಾಣೆಯ ಪಿಸಿ ಆಗಿದ್ದಾಗಲೂ ಇದೇ ಕೆರೆಗೆ ಹಾರಿ ಇಬ್ಬರನ್ನು ರಕ್ಷಣೆ ಮಾಡಿದ್ದರು. 2015ರಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್‌ನಲ್ಲಿ ನೇಮಕವಾಗಿರುವ ಈರಿಗಾರ, ಕಳೆದ ಆರು ವರ್ಷಗಳಿಂದ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದವರು.
ಕೆರೆಗೆ ಬಿದ್ದ ಮಹಿಳೆಯನ್ನು ಈರಿಗಾರ ಅವರು ರಕ್ಷಣೆ ಮಾಡಿರುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೇದೆಯ ಕರ್ತವ್ಯ ಪ್ರಜ್ಞೆ ಮತ್ತು ಮಾನವೀಯ ಗುಣಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಸಹ ಈರಿಗಾರರನ್ನು ಹೊಗಳಿದ್ದಾರೆ. ಅಲ್ಲದೆ, ಪೇದೆಗೆ 5 ಸಾವಿರ ರೂ. ನಗದು ಬಹುಮಾನವನ್ನು ಘೋಷಿಸಿದ್ದಾರೆ. ಮುಖ್ಯಮಂತ್ರಿ ಪದಕಕ್ಕೂ ಈರಿಗಾರ ಹೆಸರು ಶಿಫಾರಸು ಮಾಡುವುದಾಗಿ ಆಯುಕ್ತರು ಮಾಹಿತಿ ನೀಡಿದ್ದಾರೆ.
ಇಂದು (ಜುಲೈ 22) ಸಂಜೆ 4.45ಕ್ಕೆ ಬೆಳಗಾವಿ ಕೋಟೆ ಕೆರೆ (ಕಿಲ್ಲಾ ಕೆರೆ)ಯಲ್ಲಿ ಒಬ್ಬ ಮಹಿಳೆ ನೀರಲ್ಲಿ ಮುಳುಗುತ್ತಿದ್ದ ಸಮಯದಲ್ಲಿ ಅಲ್ಲೇ ಹತ್ತಿರದಲ್ಲಿದ್ದ ಕರ್ತವ್ಯ ನಿರತ ಉತ್ತರ ಸಂಚಾರಿ ಠಾಣೆಯ ಪೊಲೀಸ್ ಕಾನ್ಸ್ಟೆಬಲ್ ಕಾಶಿನಾಥ್ ಈರಗಾರ ಅವರು ತಮ್ಮ ಜೀವವನ್ನು ಪಣಕ್ಕಿಟ್ಟು ಮಹಿಳೆಯನ್ನು ರಕ್ಷಿಸಿ ಇಡೀ ಪೊಲೀಸ್ ಇಲಾಖೆಗೆ ಹೆಮ್ಮೆಯನ್ನು ತಂದಿರುತ್ತಾರೆ. ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎಂದು ಬೆಳಗಾವಿ ಪೊಲೀಸರು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್)