More

    ಭಾಷಾ ಮಾಧ್ಯಮ ಚರ್ಚೆ ಮತ್ತೆ ಮುನ್ನೆಲೆಗೆ; ಪ್ರಾದೇಶಿಕ ಭಾಷೆಯಲ್ಲಿ ಬೋಧನೆಗೆ ಹತ್ತಾರು ಸವಾಲುಗಳು

    | ಎನ್.ಎಲ್. ಶಿವಮಾದು ಬೆಂಗಳೂರು

    ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) ಅನುಷ್ಠಾನದಿಂದ ಪ್ರಾದೇಶಿಕ ಭಾಷೆಗಳಿಗೆ ಬಲ ಬರಲಿದೆ ಎಂಬ ಸಂಗತಿ ಸ್ಪಷ್ಟವಾಗುತ್ತ ಸಾಗುತ್ತಿದೆ. ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣ ಶಿಕ್ಷಣದವರೆಗೂ ಪ್ರಾದೇಶಿಕ ಭಾಷಾ ಬಳಕೆ ಎನ್​ಇಪಿ ಆದ್ಯತೆ ನೀಡುತ್ತಿದೆ. ತಾಂತ್ರಿಕ, ವೈದ್ಯ ಕೋರ್ಸ್​ಗಳನ್ನು ಸ್ಥಳೀಯ ಭಾಷೆಗಳಲ್ಲಿ ಬೋಧಿಸಲು ಎನ್​ಇಪಿ ಅವಕಾಶ ನೀಡಿದೆ. ಇದರೊಂದಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್​ಇ) ತನ್ನ ಅಧೀನದ ಶಾಲೆಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಶಿಕ್ಷಣ ಮಾಧ್ಯಮವಾಗಿ ಬಳಸಬಹುದು ಎಂದು ಸೂಚಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ಆದರೆ, ಇದರ ಅನುಷ್ಠಾನದ ಹಂತದಲ್ಲಿರುವ ಸವಾಲುಗಳು ಒಟ್ಟಾರೆ ಆಶಯವನ್ನು ಸಾಕಾರಗೊಳಿಸುತ್ತದೆಯೇ ಎಂಬ ಪ್ರಶ್ನೆ ಮತ್ತೆ ಎದುರಾಗಿದೆ. ಅಂತೆಯೇ ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳದ್ದು ಮಹತ್ವದ ಪಾತ್ರವಿದೆ ಎನ್ನುತ್ತಾರೆ ಶಿಕ್ಷಣ ತಜ್ಞರು. ಶಿಕ್ಷಣ ಭಾಷೆ ಆಯ್ಕೆ ವಿಚಾರ ಕೇವಲ ಸರ್ಕಾರ ಆದೇಶ ಹೊರಡಿಸಿದ ಮಾತ್ರಕ್ಕೆ ಅನುಷ್ಠಾನವಾಗುವುದಿಲ್ಲ.

    ಅದನ್ನು ಪಾಲಿಸಬೇಕಾದ ಶಾಲಾ ಆಡಳಿತ ಮಂಡಳಿ, ಪಾಲಕರು, ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ. ಇವರೆಲ್ಲರನ್ನೂ ಒಳಗೊಂಡಂತೆ ಅದಕ್ಕಾಗಿ ನೂತನ ನಿಯಮಗಳನ್ನು ರೂಪಿಸಬೇಕಾದ ಅಗತ್ಯವಿದೆ.

    ಭಾಷಾ ವಿಚಾರವಾಗಿ ರಾಜ್ಯದಲ್ಲಿ ಎಲ್ಲ ಶಾಲೆಗಳಲ್ಲಿಯೂ ಕನ್ನಡ ಭಾಷಾ ಕಲಿಕೆ ನಿಯಮಗಳು- 2017ರ ಪ್ರಕಾರ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕೆಂಬ ನಿಯಮವಿದೆ. ವಾಸ್ತವವಾಗಿ ಹೆಚ್ಚಿನ ಶಾಲೆಗಳು ಇದನ್ನೇ ಪಾಲಿಸುತ್ತಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಸರ್ಕಾರಕ್ಕೆ ಸುಳ್ಳು ವರದಿಗಳನ್ನು ನೀಡುವ ಮೂಲಕ ಆಂಗ್ಲ ಭಾಷೆಯನ್ನೇ ಬೋಧಿಸುತ್ತಿವೆ. ಇಂತಹ ಸಮಯದಲ್ಲಿ ‘ಕನ್ನಡ ಮಾಧ್ಯಮ’ ಎಂಬುದು ವಾಸ್ತವಕ್ಕೆ ದೂರಾದ ಸಂಗತಿಯೇ ಆಗಿರುತ್ತದೆ.

    ಅನುಷ್ಠಾನಕ್ಕಿರುವ ಸವಾಲುಗಳೇನು?

    – ಸಿಬಿಎಸ್​ಇ ಶಾಲೆಗಳು ಇಂಗ್ಲಿಷ್ ಮಾಧ್ಯಮ ಬೋಧನೆ ಮಾಡುತ್ತಿರುವುದರಿಂದ ಮೊದಲನೆಯದಾಗಿ ಮಾನವ ಸಂಪನ್ಮೂಲ ಕೊರತೆ ಎದುರಾಗಲಿದೆ. ಇದನ್ನು ಭರ್ತಿ ಮಾಡಲು ನುರಿತ ಶಿಕ್ಷಕರನ್ನು ರೂಪಿಸಬೇಕಾಗುತ್ತದೆ.

    – ಸಾಮಾನ್ಯವಾಗಿ ಕೇಂದ್ರ ಪಠ್ಯಕ್ರಮ ಶಾಲೆಗಳಲ್ಲಿನ ಮಕ್ಕಳ ಪಾಲಕರು ಕನ್ನಡೇತರರು ಅಥವಾ ಆರ್ಥಿಕವಾಗಿ ಸದೃಢರಾಗಿರುವವರು, ಕೇಂದ್ರ/ರಾಜ್ಯ ಸರ್ಕಾರಿ ಅಧಿಕಾರಿಗಳ ಮಕ್ಕಳೇ ಆಗಿರುತ್ತಾರೆ. ಇವರನ್ನು ಕನ್ನಡ ಮಾಧ್ಯಮಕ್ಕೆ ಒಪ್ಪಿಸುವುದು ಸುಲಭದ ವಿಷಯವಲ್ಲ.

    – ರಾಜ್ಯದಲ್ಲಿ ಪ್ರಸ್ತುತ 6ರಿಂದ 10ನೇ ತರಗತಿವರೆಗೂ ಸಿಬಿಎಸ್​ಇ ಪಠ್ಯಕ್ರಮವನ್ನೇ ಬೋಧನೆ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್​ನಿಂದ ಕನ್ನಡಕ್ಕೆ ಭಾಷಾಂತರಿಸಿದ ಪುಸ್ತಕಗಳಿದ್ದರೆ, ಖಾಸಗಿಯಲ್ಲಿ ಇಂಗ್ಲಿಷ್ ಮಾಧ್ಯಮ ಬೋಧಿಸಲಾಗುತ್ತಿದೆ. ಆದರೆ, ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕೇವಲ ‘ಇಂಗ್ಲಿಷ್’ ಭಾಷೆ ಎಂಬ ಕಾರಣಕ್ಕೆ ಪಾಲಕರಿಂದ ಲಕ್ಷಾಂತರ ರೂ. ಶುಲ್ಕ ಪಡೆಯುತ್ತಿದ್ದಾರೆ. ಈ ಕಾರಣದಿಂದ ಖಾಸಗಿ ಶಾಲೆಗಳನ್ನು ಒಪ್ಪಿಸುವುದು ಕಷ್ಟದ ಕೆಲಸ.

    – ಬಹುತೇಕ ಪಾಲಕರು ತಮ್ಮ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿಯೇ ಕಲಿಯಲಿ ಎಂದು ಆಸಕ್ತಿ ತೋರಿಸುತ್ತಿದ್ದಾರೆ. ಇವರಿಗೆ ಮನವರಿಕೆ ಮಾಡಿಕೊಡುವುದು ಸುಲಭವಲ್ಲ

    ಪಾಲಕರ ಮನವೊಲಿಕೆ: ಕೇಂದ್ರ ಪಠ್ಯಕ್ರಮವೆಂದು ಹೇಳಿಕೊಂಡು ಪಾಲಕರಿಂದ ಮನಬಂದಂತೆ ಶುಲ್ಕ ಪಡೆಯುತ್ತಿರುವ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಒಂದಡೆಯಾದರೆ, ಇಂಗ್ಲಿಷ್​ನಲ್ಲಿ ಓದಿದರೆ ಮಾತ್ರ ತಮ್ಮ ಮಗುವಿಗೆ ಉತ್ತಮ ಭವಿಷ್ಯವೆಂದು ಹೇಳುತ್ತಿರುವ ಪಾಲಕರು ಮತ್ತೊಂದೆಡೆ. ಇವರ ಮನವೊಲಿಸುವುದು ಸವಾಲಿನ ಸಂಗತಿ. ಕನ್ನಡ ಬಾರದ ಹೊರ ರಾಜ್ಯದ ಮಕ್ಕಳ ಪಾಲಕರ ಸಮಸ್ಯೆ ಮತ್ತೊಂದು ಹಾದಿಗೆಳೆಯುತ್ತದೆ.

    ರಾಜ್ಯ ಭಾಷೆ/ಮಾತೃ ಭಾಷಾ ಗೊಂದಲ

    ಶಾಲೆಗಳಲ್ಲಿ ಕನ್ನಡ ಮಾಧ್ಯಮ ವಿಚಾರ ಪ್ರಸ್ತಾಪವಾದಾಗಲೂ ಎದುರಾಗುವ ಮೊದಲ ತಾಂತ್ರಿಕ ಸಮಸ್ಯೆ ಎಂದರೆ ಮಾತೃ ಭಾಷೆ. ಆದ್ದರಿಂದ ಶಿಕ್ಷಣ ನೀಡುವ ವಿಚಾರದಲ್ಲಿ ಮಾತೃ ಭಾಷೆ ಬದಲಾಗಿ ರಾಜ್ಯ ಭಾಷೆ ಎಂದು ಘೋಷಣೆಯಾಗಬೇಕು. ಒಂದು ಶಾಲೆಯಲ್ಲಿ ಹತ್ತಾರು ಭಾಷಿಕರ ಮಕ್ಕಳು ಕಲಿಯುತ್ತಿರುತ್ತಾರೆ. ಅವರ ಮಾತೃ ಭಾಷೆ ಬೇರೆ ಬೇರೆ ಆಗಿರುತ್ತವೆ. ಹೀಗಾಗಿ, ‘ಮಾಧ್ಯಮ’ ಬೋಧನೆ ವಿಚಾರ ಬಂದಾಗ ತೊಡಕಾಗುತ್ತವೆ. ಇದನ್ನು ಬಗೆಹರಿಸುವ ಕೆಲಸವಾಗಬೇಕಿದೆ ಎನ್ನುತ್ತಾರೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್್ಸ) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್. ಕರ್ನಾಟಕದಲ್ಲಿ ಕನ್ನಡವಷ್ಟೇ ಅಲ್ಲದೆ ಕೊಂಕಣಿ, ತುಳು, ಮರಾಠಿ, ತಮಿಳು, ತೆಲುಗು ಸಹಿತ ಹಲವು ಭಾಷೆಗಳನ್ನು ಮಾತೃಭಾಷೆಯಾಗಿ ಬಳಸುವ ಜನರಿದ್ದಾರೆ. ಹೀಗಾಗಿ ರಾಜ್ಯದ ಅಧಿಕೃತ ಭಾಷೆಯಾದ ಕನ್ನಡವನ್ನೇ ಮಾಧ್ಯಮವಾಗಿ ಬಳಸುವ ನಿಟ್ಟಿನಲ್ಲಿ ರಾಜ್ಯಭಾಷೆ ಎಂದು ಘೋಷಣೆ ಆಗಬೇಕಿದೆ.

    ರೂಪಿಸಬೇಕಾದ ನಿಯಮಗಳೇನು?

    • ಸಿಬಿಎಸ್​ಇ ಶಾಲೆಗಳು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುವುದಿಲ್ಲ. ಸಿಬಿಎಸ್​ಇ ಮಂಡಳಿಗಳಿಂದ ಅನುಮತಿ ಪಡೆಯಲು ಸ್ಥಳೀಯವಾಗಿ ಬೇಕಾದ ಎನ್​ಒಸಿಗಳನ್ನು ಮಾತ್ರ ರಾಜ್ಯ ಶಿಕ್ಷಣ ಇಲಾಖೆ ನೀಡುತ್ತಿದೆ. ಇದರ ಹೊರತಾಗಿ ಯಾವುದೇ ನಿಯಂತ್ರಣವಿಲ್ಲ. ಹೀಗಾಗಿ ರಾಜ್ಯ ಕೆಲಮಟ್ಟಿಗಿನ ನಿಯಂತ್ರಣವನ್ನಾದರೂ ಹೊಂದಬೇಕು.
    • ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿರುವುದರಿಂದ ಭಾಷಾ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭಾಷೆ ಆಯ್ಕೆ, ಪರೀಕ್ಷೆ, ಪಠ್ಯಕ್ರಮ ಬೋಧನೆ, ಸಂಪನ್ಮೂಲ ಇತ್ಯಾದಿಗಳ ಬಗ್ಗೆ ತನ್ನದೇ ಆದ ನಿಯಮಗಳನ್ನು ರೂಪಿಸಬೇಕಾಗುತ್ತದೆ.

    ಪ್ರಾದೇಶಿಕ ಭಾಷೆಗಳ ಸ್ಥಾನಮಾನ ಮತ್ತು ಸ್ಥಳೀಯ ಭಾಷೆಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಸಿಬಿಎಸ್​ಇ ಆದೇಶ ಉತ್ತಮವಾಗಿದೆ. ಇದರ ಜತೆಗೆ ಆಯಾ ರಾಜ್ಯದಲ್ಲಿ ಅಲ್ಲಿನ ಆಡಳಿತ ಭಾಷೆಯೇ ಶಾಲೆಗಳಲ್ಲಿನ ಪ್ರಥಮ ಭಾಷೆ ಎಂಬ ನಿಯಮವನ್ನೂ ಜಾರಿಗೊಳಿಸಬೇಕಿದೆ. ಸ್ಥಳೀಯ ಭಾಷಾ ಕಲಿಕೆ ಕಡ್ಡಾಯ ಎಂದು ಸಿಬಿಎಸ್​ಇ ಮಂಡಳಿಯೇ ಆದೇಶ ಹೊರಡಿಸಿದಾಗ ಮಾತ್ರ ‘ಪ್ರಾದೇಶಿಕ ಮಾಧ್ಯಮ’ ಆದೇಶಕ್ಕೆ ಅರ್ಥ ಸಿಗಲಿದೆ. ಇದರ ಹೊರತಾಗಿ ಯಾವುದೇ ಪ್ರಯೋಜನವಾಗುವುದಿಲ್ಲ.

    | ಎಸ್.ಜಿ. ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts