ಲಕ್ಷ್ಮೀ ಪೂಜೆ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಪಟಾಕಿ ಕಿಡಿ: ದಾವಣಗೆರೆ, ಬೆಳಗಾವಿಯಲ್ಲಿ ಧಗಧಗಿಸಿದ ಅಂಗಡಿಗಳು

fire accident
Published on

ದಾವಣಗೆರೆ: ದೀಪಾವಳಿ ಹಬ್ಬದ ಹಿನ್ನೆಲೆ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ಮಾಡೋದು ಸಾಮಾನ್ಯ. ಪೂಜೆಯ ಸಂಭ್ರಮದಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುವಾಗ ತಮ್ಮ ಅಂಗಡಿಗೆ ಮಾತ್ರವಲ್ಲ, ಅಕ್ಕಪಕ್ಕದವರ ಅಂಗಡಿಗಳಿಗೂ ಕಿಡಿ ಹೊತ್ತಿ ಉರಿದಿದೆ.

ದಾವಣಗೆರೆ ನಗರದ ಎಂವಿಕೆ ರಸ್ತೆಯಲ್ಲಿನ ಎಂಸಿಬಿ ಫಾರ್ಮಾದಲ್ಲಿ ಸೋಮವಾರ ಬಹಳ ಸಂಭ್ರಮದಿಂದ ಲಕ್ಷ್ಮೀ ಪೂಜೆ ಮಾಡಲಾಗಿತ್ತು. ಇದಾದ ಕೆಲ ಸಮಯದಲ್ಲೇ ಪಟಾಕಿ ಕಿಡಿ ಭಾರೀ ಅನಾಹುತ ಉಂಟು ಮಾಡಿದೆ. ಪೂಜೆ ಬಳಿಕ ಸಿಬ್ಬಂದಿ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಮೊದಲ ಮಹಡಿಯ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಬಯೋ ಕೆಮಿಕಲ್ಸ್​ಗೆ ಪಟಾಕಿ ಕಿಡಿ ಸಿಡಿದು, ಗೋದಾಮು ಹೊತ್ತಿ ಉರಿದಿದೆ. ಬೆಂಕಿ ಅವಘಡದಿಂದ ಸ್ಥಳೀಯರಲ್ಲಿ ಕೆಲ ಕಾಲ ಆತಂಕ ಮನೆ ಮಾಡಿತ್ತು. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಕ್ಷಾಂತರ ರೂ. ಮೌಲ್ಯದ ಬಯೋಕೆಮಿಕಲ್ ಬೆಂಕಿಗಾಹುತಿಯಾಗಿದೆ.

ಬೆಳಗಾವಿಯಲ್ಲಿ ಪಕ್ಕದ ಅಂಗಡಿಗೆ ಬೆಂಕಿ: ಬೆಳಗಾವಿ ಜಿಲ್ಲೆ ಕಿತ್ತೂರು ಪಟ್ಟಣದಲ್ಲಿ ಸೋಪಾ, ಗಾದಿ ತಯಾರಿಕಾ ಅಂಗಡಿಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿವೆ. ಪಕ್ಕದ ಅಂಗಡಿಯವರು ಲಕ್ಷ್ಮೀ ಪೂಜೆ ಮಾಡಿ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ಪಕ್ಕದ ಸೋಪಾ ಅಂಗಡಿಗೆ ಬೆಂಕಿ ಬಿದ್ದಿದೆ. ಬೆಂಕಿ ನಂದಿಸಲು ಹೋದ ಅಂಗಡಿ ಮಾಲೀಕನಿಗೂ ಸುಟ್ಟ ಗಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net