

ಕರೊನಾ ನಿಯಂತ್ರಣ ಸಲುವಾಗಿ ವಿಧಿಸಲಾಗಿದ್ದ ದಿಗ್ಬಂಧನ ಈಗ ಬಹುತೇಕ ಸಡಿಲವಾಗಿದ್ದು, ಸೋಮವಾರದಿಂದ ಜನಜೀವನ ಮೊದಲಿನ ಸ್ಥಿತಿಗೆ ಮರಳುವುದಕ್ಕೆ ವೇದಿಕೆ ಸಜ್ಜಾದಂತಾಗಿದೆ. ಈ ನಡುವೆ, ನಿರೀಕ್ಷೆಯಂತೆಯೇ ಕರೊನಾ ಸೋಂಕು ವೇಗದಲ್ಲಿ ಹರಡುತ್ತಿದ್ದು, ಸೋಂಕಿತರ ಸಂಖ್ಯೆ ದಿನದಿನವೂ ಹೆಚ್ಚುತ್ತಿದೆ. ಈ ಆತಂಕದ ನಡುವೆಯೇ, ವಿವಿಧ ಕ್ಷೇತ್ರಗಳಲ್ಲಿ ಚಟುವಟಿಕೆ ಪುನರಾರಂಭಿಸುವುದು ಅನಿವಾರ್ಯವೂ ಹೌದು. ಏಕೆಂದರೆ ಆರ್ಥಿಕ ಚಟುವಟಿಕೆಯನ್ನು ದೀರ್ಘಕಾಲ ಸ್ಥಗಿತ ಸ್ಥಿತಿಯಲ್ಲಿಡಲು ಸಾಧ್ಯವಿಲ್ಲ. ಅದರಿಂದ ದೇಶ ಮತ್ತು ಜನರ ಮೇಲೆ ಅನೇಕ ದುಷ್ಪರಿಣಾಮಗಳಾಗುತ್ತವೆ.
ಈ ಹಿಂದೆ ಹಂತಹಂತವಾಗಿ ಲಾಕ್ಡೌನ್ ಸಡಿಲ ಮಾಡಲಾಗಿತ್ತು. ಇದೀಗ, ದೇವಸ್ಥಾನ, ಹೋಟೆಲ್-ರೆಸ್ಟೊರೆಂಟ್ ಮತ್ತು ಷಾಪಿಂಗ್ ಮಾಲ್ಗಳು ಪುನರಾರಂಭವಾಗುತ್ತಿವೆ. ಅಂದರೆ, ದೊಡ್ಡ ಪ್ರಮಾಣದಲ್ಲಿ ಚಟುವಟಿಕೆ ಶುರುವಾಗುತ್ತಿದ್ದು, ಜನರ ಓಡಾಟವೂ ಸಹಜವಾಗಿಯೇ ಹೆಚ್ಚಲಿದೆ. ದೇಗುಲ, ಮಾಲ್, ಹೋಟೆಲ್ ಮುಂತಾದೆಡೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಆ ಪ್ರಕಾರ ಸಿದ್ಧತೆ ನಡೆದಿದೆ. ಜನರು ಸಹ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಕಡೆಗೆ ಗಮನ ಕೊಡಬೇಕು. ಏಕೆಂದರೆ ಕರೊನಾ ವೈರಸ್ ಇನ್ನೂ ಅನೇಕ ಕಾಲ ಇದ್ದೇ ಇರುತ್ತದೆ ಎಂದು ವಿಶ್ವಸಂಸ್ಥೆಯಾದಿಯಾಗಿ ಅನೇಕ ತಜ್ಞರು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಜನರು ಈಗ ಹೆಚ್ಚು ಜಾಗರೂಕತೆ ವಹಿಸಬೇಕಾಗಿದೆ. ವೈರಸ್ ಸ್ವರೂಪವೇ ಹಾಗೆ, ಅದು ಹಬ್ಬಲು ಶುರುವಾದಾಗ ನಿಯಂತ್ರಣಕ್ಕೆ ಕ್ರಮಗಳಾಗಬೇಕಾಗುತ್ತದೆ. ಅದಕ್ಕೆ ಲಾಕ್ಡೌನ್ನಂಥ ಕ್ರಮಗಳು ಅಗತ್ಯ. ಆದರೆ ಇಡೀ ಜನಜೀವನವನ್ನೇ ಸ್ತಬ್ಧಗೊಳಿಸುವಂಥ ಕ್ರಮಗಳನ್ನು ಬಹುಕಾಲ ಮುಂದುವರಿಸಲಾಗದು. ಒಂದು ಹಂತದ ನಂತರ ದಿಗ್ಬಂಧನವನ್ನು ಸಡಿಲಮಾಡುತ್ತ ಬರಬೇಕಾಗುತ್ತದೆ.
ಹೀಗೆ ಲಾಕ್ಡೌನ್ ತೆರವು ಮಾಡುವಾಗ ಸೋಂಕು ಮತ್ತಷ್ಟು ವೇಗವಾಗಿ ಹಬ್ಬುತ್ತದೆ. ಈಗ ನಮ್ಮಲ್ಲಿ ಅದೇ ಆಗುತ್ತಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ಎರಡೂವರೆ ಲಕ್ಷ ದಾಟಿದ್ದು, ವಿಶ್ವದಲ್ಲಿ ಸೋಂಕಿತ ದೇಶಗಳಲ್ಲಿ ಆರನೇ ಸ್ಥಾನಕ್ಕೆ ಬಂದಿದೆ. ಮಹಾರಾಷ್ಟ್ರ, ದೆಹಲಿ ಮುಂತಾದ ಕಡೆಗಳಲ್ಲಿ ವಿಪರೀತ ಪ್ರಮಾಣದಲ್ಲಿ ಪ್ರಕರಣಗಳು ವರದಿಯಾಗುತ್ತಿವೆ. ಹೊರರಾಜ್ಯದಿಂದ ಬರುತ್ತಿರುವವರ ಕಾರಣದಿಂದಾಗಿ ಕರ್ನಾಟಕದಂಥ ರಾಜ್ಯಗಳಲ್ಲೂ ಪ್ರಕರಣ ಏರುಗತಿಯಲ್ಲಿದೆ. ಇನ್ನೊಂದೆಡೆ, ಗುಣಮುಖರಾಗುವವರ ಪ್ರಮಾಣವೂ ಹೆಚ್ಚಳವಾಗಿರುವುದು ಸ್ವಲ್ಪ ಸಮಾಧಾನದ ಸಂಗತಿ. ಸಮುದಾಯದಲ್ಲಿ ವೈರಸ್ ಪ್ರತಿರೋಧಕ ಶಕ್ತಿ ಬೆಳೆದಹಾಗೆ ಸೋಂಕು ಪ್ರಮಾಣ ಪ್ರಮಾಣ ತಗ್ಗುತ್ತ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಇದರರ್ಥ ಸ್ಪಷ್ಟ- ಇನ್ನು ಸರ್ಕಾರಗಳ ಜವಾಬ್ದಾರಿ ಕಡಿಮೆಯಾಗುತ್ತ ಬರುತ್ತದೆ; ಸಮುದಾಯದ ಹೊಣೆಗಾರಿಕೆ ಹೆಚ್ಚುತ್ತದೆ. ಹೀಗಾಗಿ ಸರ್ಕಾರ ನೀಡಿರುವ ನಿಯಮಾವಳಿಗಳನ್ನು ಆದಷ್ಟು ಪಾಲಿಸುತ್ತ, ಅದೇ ಸಂದರ್ಭದಲ್ಲಿ ದೈನಂದಿನ ಜೀವನವನ್ನೂ ನಿರ್ವಹಿಸುವ ಸಮತೋಲನದ ದಾರಿಯನ್ನು ಜನರು ಅನುಸರಿಸಬೇಕಾಗುತ್ತದೆ. ಹಾಗೆಯೇ, ಆಹಾರವಿಹಾರ ಮತ್ತು ಜೀವನಶೈಲಿಯಲ್ಲಿಯೂ ಕೆಲ ಶಿಸ್ತು ಪಾಲನೆ ಮಾಡುವುದು ಈ ಪರಿಸ್ಥಿತಿಯಲ್ಲಿ ಅನಿವಾರ್ಯ. ಅಮೆರಿಕದಂತಹ ಕೆಲ ದೇಶಗಳಲ್ಲಿ ಲಾಕ್ಡೌನ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದ್ದರಿಂದ ವೈರಸ್ ಪ್ರಮಾಣ ವಿಪರೀತವಾಗಿ ಹೆಚ್ಚಿದ ನಿದರ್ಶನ ನಮ್ಮೆದುರಿಗಿದೆ. ಸರ್ಕಾರ ಮತ್ತು ಸಮಾಜ ಒಟ್ಟಾಗಿ ಕಾರ್ಯನಿರ್ವಹಿಸಿದರೆ ಕರೊನಾ ಮಾರಿಯನ್ನು ಕಟ್ಟಿಹಾಕುವತ್ತ ಮುನ್ನಡೆಯಬಹುದು.