ಹಣ ಮಾಡಲು ತೆರೆಮರೆಯ ದಾರಿ

Behind the scenes way to make money
Behind the scenes way to make money
Published on
ಇಂದಿನ ಡಿಜಿಟಲ್ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್- ಎಐ) ಎಂಬುದು ಒಂದು ತಂತ್ರಜ್ಞಾನವಾಗಿ ಮಾತ್ರ ಉಳಿದಿಲ್ಲ. ಅದು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ವಿವಿಧ ಕಂಪನಿಗಳ ಎಐ ಟೂಲ್​ಗಳು ನಮ್ಮ ಕೆಲಸಗಳನ್ನು ಸುಲಭಗೊಳಿಸುತ್ತಿವೆ ನಿಜ. ಆದರೆ, ಈ ಉಚಿತ ಅಥವಾ ಸಬ್​ಸ್ಕ್ರಿಪ್ಷನ್ ಆಧಾರಿತ ಸೇವೆಗಳ ಹಿಂದೆ ಒಂದು ಬೃಹತ್ ಆರ್ಥಿಕ ಜಾಲ ಅಡಗಿದೆ. ನಾವು ಜ್ಞಾನಾರ್ಜನೆಗೆ ಅಥವಾ ಮನರಂಜನೆಗೆ ಬಳಸುವ ಎಐ ಸಾಧನಗಳು, ವಾಸ್ತವದಲ್ಲಿ ನಮ್ಮದೇ ಖಾಸಗಿ ಮಾಹಿತಿಯನ್ನು (ಡೇಟಾ) ಬಳಸಿಕೊಂಡು ತೆರೆಮರೆಯಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿವೆ. ಡೇಟಾ ಈಸ್ ದಿ ನ್ಯೂ ಆಯಿಲ್ (ಈ ಕಾಲದಲ್ಲಿ ಮಾಹಿತಿಯೇ ಸಂಪತ್ತು) ಎಂಬ ಮಾತು ಎಐ ಯುಗದಲ್ಲಿ ಅಕ್ಷರಶಃ ನಿಜವಾಗುತ್ತಿದೆ. ಬಳಕೆದಾರರ ಖಾಸಗಿ ವಿವರಗಳನ್ನು ಬಂಡವಾಳವಾಗಿಸಿಕೊಂಡು ಜಾಗತಿಕ ತಂತ್ರಜ್ಞಾನ ಕಂಪನಿಗಳು ತಮ್ಮ ಆರ್ಥಿಕ ಸಾಮ್ರಾಜ್ಯವನ್ನು ಹೇಗೆ ವಿಸ್ತರಿಸುತ್ತಿವೆ ಮತ್ತು ಇದರ ಹಿಂದಿರುವ ಕಹಿ ಸತ್ಯಗಳೇನು ಎಂಬುದರ ವಿವರವಾದ ಮಾಹಿತಿ ಇಲ್ಲಿದೆ.

ನೀವೇ ಇಲ್ಲಿ ಉತ್ಪನ್ನ!

ಉಚಿತ ಸೇವೆಯ ಹಿಂದಿರುವ ಅಸಲಿಯತ್ತೇ ಬೇರೆ. ಇಂಟರ್ನೆಟ್ ಜಗತ್ತಿನಲ್ಲಿ ಒಂದು ಸಾಮಾನ್ಯ ನಿಯಮ ಇದೆ- ‘ನೀವು ಯಾವುದಾದರೂ ಉತ್ಪನ್ನಕ್ಕೆ ಹಣ ಪಾವತಿಸುತ್ತಿಲ್ಲ ಎಂದರೆ, ಅಲ್ಲಿ ನೀವೇ ಉತ್ಪನ್ನ ಎಂದರ್ಥ’ (If you are not paying for the product, you are the product). ನಾವು ಎಐ ಚಾಟ್​ಬಾಟ್​ಗಳಿಗೆ ಕೇಳುವ ಪ್ರತಿಯೊಂದು ಪ್ರಶ್ನೆ, ಅಪ್​ಲೋಡ್ ಮಾಡುವ ಫೋಟೋಗಳು, ಬರೆಯುವ ಇಮೇಲ್​ಗಳು ಮತ್ತು ಹುಡುಕುವ ಮಾಹಿತಿಗಳನ್ನು ಈ ಕಂಪನಿಗಳು ಸೂಕ್ಷ್ಮವಾಗಿ ಗಮನಿಸುತ್ತವೆ ಮತ್ತು ದಾಖಲಿಸಿಕೊಳ್ಳುತ್ತವೆ. ಈ ಉಚಿತ ಸೇವೆಗಳು ಕೇವಲ ಜನೋಪಕಾರಕ್ಕಾಗಿ ಸೃಷ್ಟಿಯಾದವುಗಳಲ್ಲ. ಬಳಕೆದಾರರಿಂದ ಅಪಾರ ಪ್ರಮಾಣದ ‘ಡೇಟಾ’ ಸಂಗ್ರಹಿಸಲು ಹೂಡಿದ ಬಲೆಗಳಿವು. ನಾವು ನೀಡುವ ದೈನಂದಿನ ಮಾಹಿತಿ ಎಐ ಕಂಪನಿಗಳ ಪಾಲಿಗೆ ಅತ್ಯಮೂಲ್ಯ ಕಚ್ಚಾ ವಸ್ತು ಇದ್ದಂತೆ.
ಎಐನ ಮಾದರಿಗಳು (Large Language Models) ಬುದ್ಧಿವಂತಿಕೆಯನ್ನು ರೂಢಿಸಿಕೊಳ್ಳಬೇಕೆಂದರೆ, ಅವುಗಳಿಗೆ ನಿರಂತರವಾಗಿ ಮನುಷ್ಯನ ಭಾಷೆ, ನಡವಳಿಕೆ ಮತ್ತು ಜ್ಞಾನವನ್ನು ಫೀಡ್ ಮಾಡುತ್ತಿರಬೇಕಾಗುತ್ತದೆ. ತರಬೇತಿಯನ್ನೂ ನೀಡಬೇಕಾಗುತ್ತದೆ. ಇದನ್ನು ಯಾರೋ ಕಲಿತು ಅವುಗಳಿಗೆ ತರಬೇತಿ ನೀಡಬೇಕೆಂದೇನಿಲ್ಲ. ನಾವು ದಿನನಿತ್ಯ ಟೈಪ್ ಮಾಡುವ ಮಾಹಿತಿಯನ್ನು ಬಳಸಿಕೊಂಡು ಎಐ ಮಾದರಿಗಳು ಸ್ವತಃ ತರಬೇತುಗೊಳ್ಳುತ್ತವೆ.
ಖಾಸಗಿ ಸಂಭಾಷಣೆಗಳ ಸಂಗ್ರಹಣೆ: ನಾವು ಧ್ವನಿ ಮಾದರಿಯಲ್ಲಿ ಅಥವಾ ಟೈಪಿಂಗ್ ಮೂಲಕ ಎಐ ಜತೆ ನಡೆಸುವ ಸಂಭಾಷಣೆಗಳು, ಕಚೇರಿಯ ರಹಸ್ಯ ಯೋಜನೆಗಳು ಮುಂತಾದವುಗಳ ವಿಶ್ಲೇಷಣೆಯನ್ನು ಎಐ ಕಂಪನಿಗಳು ತಮ್ಮ ಸರ್ವರ್​ಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತವೆ.
ಅವುಗಳಿಗೆ ನಾವೇ ಶಿಕ್ಷಕರು!: ಕೆಲವೊಮ್ಮೆ ಎಐ ನೀಡಿದ ಉತ್ತರ ತಪ್ಪು ಎಂಬುದು ನಮಗೇ ಮೇಲ್ನೋಟಕ್ಕೆ ತಿಳಿಯುವಂತಿರುತ್ತದೆ. ಅದನ್ನು ನಾವು ತಿದ್ದಿ ಹೇಳಿದಾಗ, ಅದು ಆ ತಪ್ಪುಗಳಿಂದ ಕಲಿಯುತ್ತದೆ. ಅಂದರೆ, ನಾವೇ ಸ್ವಯಂಪ್ರೇರಿತರಾಗಿ ಯಾವುದೇ ವೇತನವಿಲ್ಲದೆ ಆ ಕಂಪನಿಗಳ ತಂತ್ರಜ್ಞಾನವನ್ನು ಸುಧಾರಿಸಲು ಕೆಲಸ ಮಾಡುತ್ತಿದ್ದೇವೆ!.

ನೇಪಥ್ಯದಲ್ಲಿ ನಡೆಯುತ್ತದೆ ವ್ಯಾಪಾರ

ಮೂರನೇ ವ್ಯಕ್ತಿಗಳಿಗೆ ಡೇಟಾ ಮಾರಾಟ (Data Monetization) ಬಳಕೆ ದಾರರಿಂದ ಸಂಗ್ರಹಿಸಿದ ಬೃಹತ್ ಡೇಟಾವನ್ನು ಎಐ ಕಂಪನಿಗಳು ಕೇವಲ ತಮ್ಮ ಎಲ್​ಎಲ್​ಎಂಗಳ ತರಬೇತಿಗೆ ಬಳಸುವುದಿಲ್ಲ. ಅದನ್ನು ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಕೋಟ್ಯಂತರ ರೂ.ಗೆ ಇತರ ದೊಡ್ಡ ಕಾರ್ಪೆರೇಟ್ ಕಂಪನಿಗಳಿಗೆ ಪೂರ್ತಿಯಾಗಿ ಮಾರಾಟ ಮಾಡುತ್ತವೆ ಅಥವಾ ಅವುಗಳನ್ನು ಭಾಗಶಃ ಹಂಚಿಕೊಳ್ಳುತ್ತವೆ.
ಟಾರ್ಗೆಟೆಡ್ ಅಡ್ವರ್ಟೆಸಿಂಗ್: ನಿಮ್ಮ ಮನಸ್ಥಿತಿ, ಅಗತ್ಯಗಳು, ಆರೋಗ್ಯದ ಸಮಸ್ಯೆಗಳು ಮತ್ತು ಆರ್ಥಿಕ ಸ್ಥಿತಿಯನ್ನು ಎಐ ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತದೆ. ಉದಾಹರಣೆಗೆ, ನೀವು ಎಐ ಚಾಟ್​ಬಾಟ್​ನಲ್ಲಿ ‘ನನಗೆ ಸಾಲ ತೀರಿಸಲು ಉತ್ತಮ ದಾರಿ ಯಾವುದು?’ ಅಥವಾ ‘ಉತ್ತಮ ಕ್ಯಾನ್ಸರ್ ಆಸ್ಪತ್ರೆ ಯಾವುದು?’ ಎಂದು ಕೇಳಿ ಆ ಬಗ್ಗೆ ಚರ್ಚೆ ಮಾಡಿದರೆ, ಆ ಡೇಟಾವನ್ನು ಎಐ ಕಂಪನಿಗಳು ಜಾಹೀರಾತು ಕಂಪನಿಗಳಿಗೆ ತಲುಪಿಸುತ್ತವೆ. ಇದರ ಬೆನ್ನಲ್ಲೇ ನಿಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸಾಲ ನೀಡುವ ಬ್ಯಾಂಕುಗಳ ಮತ್ತು ಆಸ್ಪತ್ರೆಗಳ ಜಾಹೀರಾತುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

ಕಾರ್ಪೆರೇಟ್ ವಲಯದಲ್ಲಿ ಖಾಸಗಿತನದ ಉಲ್ಲಂಘನೆ, ಅಪಾಯಗಳು

ಈಗ ಬಹುತೇಕ ಎಲ್ಲ ಕಂಪನಿಗಳ ಉದ್ಯೋಗಿಗಳು ತಮ್ಮ ದೈನಂದಿನ ಕೆಲಸವನ್ನು ಸುಲಭ ಮಾಡಿಕೊಳ್ಳಲು ಎಐ ಟೂಲ್​ಗಳನ್ನು ಬಳಸುತ್ತಿದ್ದಾರೆ. ಇದು ಜಾಗತಿಕ ಮಟ್ಟದಲ್ಲಿ ದೊಡ್ಡ ಭದ್ರತಾ ಭೀತಿಯನ್ನು ಹುಟ್ಟುಹಾಕಿದೆ.
ಸ್ಯಾಮ್ಸ್ಂಗ್​​ ತರಹದ ಘಟನೆಗಳು: ಈ ಹಿಂದೆ ಸ್ಯಾಮ್ಸ್ಂಗ್ ಕಂಪನಿಯ ಉದ್ಯೋಗಿಯೊಬ್ಬರು ತಮ್ಮ ಕಂಪನಿಯ ರಹಸ್ಯ ಸೋರ್ಸ್ ಕೋಡ್ ಅನ್ನು ಪರಿಶೀಲಿಸಲು ಚಾಟ್​ಜಿಪಿಟಿಗೆ ಅಪ್​ಲೋಡ್ ಮಾಡಿದ್ದರು. ಅದು ನೇರವಾಗಿ ಎಐನ ಸರ್ವರ್ ಸೇರಿತು. ಇಂತಹ ರಹಸ್ಯ ಮಾಹಿತಿಗಳು ಎಐ ಡೇಟಾ ಬೇಸ್ ಸೇರಿದಾಗ, ಅದನ್ನು ಮರಳಿ ಪಡೆಯುವುದು ಅಸಾಧ್ಯ.
ಬೌದ್ಧಿಕ ಆಸ್ತಿಗೆ ಕನ್ನ: ಲೇಖಕರು, ಕಲಾವಿದರು ಮತ್ತು ಸಂಶೋಧಕರು ತಮ್ಮ ಮೂಲ ಕೃತಿಗಳನ್ನು ಎಐನಲ್ಲಿ ಹಾಕಿದಾಗ, ಆ ಕೃತಿಗಳ ಶೈಲಿಯನ್ನು ಎಐ ಕದಿಯುತ್ತದೆ. ಬೇರೆಯವರಿಗೆ ಉತ್ತರ ನೀಡುವಾಗ ಅದನ್ನು ಬಳಸಿಕೊಳ್ಳುತ್ತದೆ.

ಸಬ್​ಸ್ಕ್ರಿಪ್ಷನ್ ಪಡೆದರೂ ತಪ್ಪದ ಲೂಟಿ

ಅನೇಕ ಬಳಕೆದಾರರು ‘ನಾವು ಹಣ ನೀಡಿ ಪ್ರೀಮಿಯಂ ಅಥವಾ ಪ್ಲಸ್ ಸಬ್​ಸ್ಕ್ರಿಪ್ಷನ್ ಪಡೆದಿದ್ದೇವಲ್ಲ, ನಮ್ಮ ಡೇಟಾ ಕೂಡ ಮಾರಾಟ ಮಾಡುತ್ತಾರಾ?’ ಎಂದು ಪ್ರಶ್ನಿಸುತ್ತಾರೆ. ಕಂಪನಿಗಳ ನಿಯಮ ಮತ್ತು ನಿಬಂಧನೆಗಳ ಪುಟ ನಮ್ಮೆದುರು ಸ್ಕ್ರೀನ್ ಮೇಲೆ ಕಾಣಿಸಿಕೊಂಡಾ, ಅತ್ಯಂತ ಸಣ್ಣ ಅಕ್ಷರಗಳಲ್ಲಿ ಬರೆಯಲಾಗಿರುವ ನಿಯಮಗಳನ್ನು ನಾವು ಓದದೆ ‘Agree' ಬಟನ್ ಮೇಲೆ ಬೆರಳು ಒತ್ತಿಬಿಡುತ್ತೇವೆ. ಸಬ್​ಸ್ಕ್ರಿಪ್ಷನ್ ಪಡೆದಾಗಲೂ ನಮ್ಮ ಡೇಟಾವನ್ನು ಭದ್ರತೆಯ ಹೆಸರಿನಲ್ಲಿ ಅಥವಾ ಸಿಸ್ಟಮ್ ಸುಧಾರಣೆಯ ಹೆಸರಿನಲ್ಲಿ ಬಳಸುವ ಹಕ್ಕನ್ನು ಈ ಕಂಪನಿಗಳು ಕಾಯ್ದಿರಿಸಿಕೊಂಡಿರುತ್ತವೆ. ಅಂದರೆ ಬಳಕೆದಾರರಿಂದ ಹಣವನ್ನೂ ಪಡೆದು, ಅವರ ಮಾಹಿತಿಯನ್ನೂ ಪಡೆದು ಎರಡೂ ಕಡೆಯಿಂದ ಕಂಪನಿಗಳು ಲಾಭ ಮಾಡಿಕೊಳ್ಳುತ್ತಿವೆ.

ಎಐ ಕಂಪನಿಗಳ ಆರ್ಥಿಕ ಸಾಮ್ರಾಜ್ಯ

ಮೈಕ್ರೋಸಾಫ್ಟ್, ಗೂಗಲ್, ಮೆಟಾ ಮತ್ತು ಆಪಲ್​ನಂತಹ ದೈತ್ಯ ತಂತ್ರಜ್ಞಾನ ಕಂಪನಿಗಳು ಎಐ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿವೆ. ಇವುಗಳ ಮಾರುಕಟ್ಟೆ ಮೌಲ್ಯ ಇಂದು ಟ್ರಿಲಿಯನ್ ಡಾಲರ್ ಲೆಕ್ಕದಲ್ಲಿದೆ. ಬಳಕೆದಾರರ ಪ್ರತಿಯೊಂದು ಕ್ಲಿಕ್, ಸರ್ಚ್ ಮತ್ತು ಟೈಪಿಂಗ್ ಕೂಡ ಈ ಕಂಪನಿಗಳ ಷೇರು ಮೌಲ್ಯವನ್ನು ಹೆಚ್ಚಿಸುತ್ತವೆ. ನೀವೇ ನಿಮಗೆ ಗೊತ್ತಿಲ್ಲದಂತೆ ನೀಡುವ ನಿಮ್ಮ ಉಚಿತ ಡೇಟಾವನ್ನು ಈ ಕಂಪನಿಗಳು ಬಳಸಿಕೊಂಡು ಹೊಸ ಉದ್ಯಮಗಳಿಗೆ ಜೀವ ನೀಡುತ್ತವೆ, ಭವಿಷ್ಯದ ತಂತ್ರಜ್ಞಾನ ಗಳನ್ನು ರೂಪಿಸುತ್ತವೆ, ಜಾಗತಿಕ ಮಾರುಕಟ್ಟೆಯನ್ನು ನಿಯಂತ್ರಿಸುತ್ತವೆ.
ಎಚ್ಚರವೇ ಏಕೈಕ ದಾರಿ ಕೃತಕ ಬುದ್ಧಿಮತ್ತೆ ಎಂಬುದು ಒಂದು ಅದ್ಭುತ ಆವಿಷ್ಕಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅದರ ಹಿಂದಿರುವ ಉದ್ಯಮ ಮಾದರಿ (ಬಿಜಿನೆಸ್ ಮಾಡೆಲ್) ಬಳಕೆದಾರರ ಶೋಷಣೆಯ ಉದ್ದೇಶವನ್ನೇ ಹೊಂದಿದೆ. ತಂತ್ರಜ್ಞಾನ ಕಂಪನಿಗಳಿಗೆ ನಮ್ಮ ಆಲೋಚನೆಗಳು, ನಮ್ಮ ಇಷ್ಟ-ಕಷ್ಟಗಳ ಬಗ್ಗೆ ಯಾವುದೇ ಭಾವನಾತ್ಮಕ ಸಂಬಂಧ ಇರುವುದಿಲ್ಲ. ಅವೆಲ್ಲವೂ ಆ ಕಂಪನಿಗಳ ಪಾಲಿಗೆ ಲಾಭ ತರುವ ಅಂಕಿ-ಅಂಶಗಳು ಮಾತ್ರ. ನಾವು ಜಾಗೃತರಾಗದಿದ್ದರೆ, ತೆರೆಮರೆಯಲ್ಲಿ ನಡೆಯುವ ಈ ಡೇಟಾ ವ್ಯಾಪಾರ ನಮ್ಮ ಖಾಸಗಿ ಬದುಕನ್ನು ಸಂಪೂರ್ಣವಾಗಿ ಮಾರುಕಟ್ಟೆಯ ವಸ್ತುವನ್ನಾಗಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಎಐ ಅನ್ನು ಕೇವಲ ಒಂದು ಸಹಾಯಕನಾಗಿ ಬಳಸಿ, ನಿಮ್ಮ ಬದುಕಿನ ರಹಸ್ಯಗಳನ್ನು ಅದರ ಕೈಗೆ ಕೊಡಬೇಡಿ.

ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಈಗಿನ ದಿನಗಳಲ್ಲಿ ಎಐ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಸಾಧ್ಯವಿಲ್ಲ. ಆದರೆ ನಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು ಕೆಲವು ಕ್ರಮಗಳನ್ನು ಕೈಗೊಳ್ಳಬಹುದು.
ಖಾಸಗಿ ಮಾಹಿತಿ ಹಂಚಿಕೊಳ್ಳಬೇಡಿ: ನಿಮ್ಮ ಬ್ಯಾಂಕ್ ಖಾತೆ ವಿವರ, ಪಾಸ್​ವರ್ಡ್, ಆಧಾರ್ ಕಾರ್ಡ್ ನಂಬರ್ ಷೇರ್ ಮಾಡ ಬೇಡಿ; ಪ್ರೀತಿ-ಪ್ರೇಮ-ದಾಂಪತ್ಯ ಮುಂತಾದ ವೈಯಕ್ತಿಕ ಭಾವನಾತ್ಮಕ ವಿಚಾರಗಳನ್ನು ಎಂದಿಗೂ ಎಐ ಚಾಟ್​ಬಾಟ್​ಗಳ ಬಳಿ ತೆರೆದಿಡಬೇಡಿ.
ಚಾಟ್ ಹಿಸ್ಟರಿ ಆಫ್ ಮಾಡಿ: ಬಹುತೇಕ ಎಐ ಸಾಧನಗಳಲ್ಲಿ ‘ಡೇಟಾ ಟ್ರೈನಿಂಗ್ ಆಫ್’ ಮಾಡುವ ಅಥವಾ ‘ಚಾಟ್ ಹಿಸ್ಟರಿ ಸೇವ್’ ಆಗದಂತೆ ತಡೆ ಯುವ ಆಯ್ಕೆ ಇರುತ್ತದೆ. ಸೆಟಿಂಗ್ಸ್​ಗೆ ಹೋಗಿ ಅದನ್ನು ಸಕ್ರಿಯಗೊಳಿಸಿ.
ನಿಯಮಗಳನ್ನು ಓದಿ: ಯಾವುದೇ ಹೊಸ ಎಐ ಆಪ್ ಇನ್​ಸ್ಟಾಲ್ ಮಾಡುವ ಮುನ್ನ ಅದು ನಿಮ್ಮ ಗ್ಯಾಲರಿ, ಕಾಂಟ್ಯಾಕ್ಟ್ ಮತ್ತು ಲೊಕೇಶನ್​ಗೆ ಅನುಮತಿ ಕೇಳುತ್ತಿದ್ದರೆ ಎಚ್ಚರ ವಹಿಸಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net