ಅಮಿತ್ ಷಾ ಬರುವ ಮುನ್ನ, ಬಿಎಸ್ ವೈ ಯಶಸ್ವೀ ಸಂಧಾನ

IMG-20240401-WA0053
Published on

ಬೆಂಗಳೂರು: ಸೋಮವಾರ ಒಂದೇ ರಾತ್ರಿ ಅಪ್ಪ, ಮಗ ಪಟ್ಟಾಗಿ ಕುಳಿತು. ತಮ್ಮೆಲ್ಲ ತಂತ್ರಗಳು, ಸಂಧಾನದ ಮಾರ್ಗೋಪಾಯ ಬಳಸಿ ಚಿತ್ರದುರ್ಗ, ಚಿಕ್ಕಬಳ್ಳಾಪುರ ಹಾಗೂ ಹಾಸನ ಕ್ಷೇತ್ರಗಳ ಟಿಕೆಟ್ ತಳಮಳ, ಮೈತ್ರಿ ಕಸಿವಿಸಿಯನ್ನು ಬಗೆಹರಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಸೋಮವಾರ ರಾತ್ರಿ ಬೆಂಗಳೂರಿಗೆ ಕಾಲಿಡುವ ಮುನ್ನ ಮಾಜಿ ಸಿಎಂ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೂರು ಸಂಧಾನದ ಗೋಲುಗಳನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ

ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿಯಲ್ಲಿ ರೋಷಾವೇಶ ತಣ್ಣಗಾಗಿದೆ. ಮಾಜಿ ಸಿಎಂ ಬಿ‌ಎಸ್.ಯಡಿಯೂರಪ್ಪ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದೆ. ಶಾಸಕ ಎಂ.ಚಂದ್ರಪ್ಪ, ಅವರ ಪುತ್ರ ಟಿಕೆಟ್ ಆಕಾಂಕ್ಷಿ ರಘುಚಂದನ್ ಸಮಾಧಾನಗೊಂಡು, ಮೋದಿಯವರ ಕೈಬಲಪಡಿಸಲು ಪಕ್ಷದ ಅಭ್ಯರ್ಥಿ ಗೋವಿಂದ ಕಾರಜೋಳ ಪರವಾಗಿ ಕೆಲಸ ಮಾಡಲು ಸೋಮವಾರ ಒಪ್ಪಿಕೊಂಡಿದ್ದಾರೆ.

ಮಾಜಿ ಸಚಿವ ಗೋವಿಂದ ಕಾರಜೋಳ ಅವರಿಗೆ ಪಕ್ಷದ ಟಿಕೆಟ್ ಖಚಿತಪಟ್ಟು, ಸ್ಪರ್ಧೆ ಕೈತಪ್ಪಿದ್ದಕ್ಕೆ ರಘುಚಂದನ್ ಮತ್ತು ಅವರ ತಂದೆ ಎಂ.ಚಂದ್ರಪ್ಪ ಕುಪಿತರಾಗಿದ್ದರು.

ಬೆಂಬಲಿಗರ ಒತ್ತಾಸೆ ಮೇರೆಗೆ ರಘುಚಂದನ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಹೇಳಿಕೆ ನೀಡಿದ್ದರು. ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಚಿತ್ರದುರ್ಗಕ್ಕೆ ತೆರಳಿ ಎರಡು ಬಾರಿ ಅಸಮಾಧಾನ ಶಮನಗೊಳಿಸಲು ಪ್ರಯತ್ನಿಸಿ ವಿಫಲರಾಗಿದ್ದರು.

ತುರ್ತು ಬುಲಾವ್

ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಭೇಟಿಗೆ ಮುನ್ನ ಅತೃಪ್ತಿ, ಅಸಮಾಧಾನ ನಿವಾರಿಸಲು ಬಿಎಸ್‌ವೈ ನಿರಂತರ ಪ್ರಯತ್ನ ಮುಂದುವರಿಸಿದ್ದರು. ಚಿತ್ರದುರ್ಗ ಬೆಳವಣಿಗೆ ಮಾಹಿತಿ ಅರಿತು, ಪರಿಸ್ಥಿತಿ ಉಲ್ಬಣಿಸುವ ಮುನ್ನ ಎಚ್ಚೆತ್ತರು.

ಅಪ್ಪ-ಮಗ ಇಬ್ಬರಿಗೆ ತುರ್ತಾಗಿ ಬೆಂಗಳೂರಿಗೆ ಬರುವಂತೆ ಬುಲಾವ್ ನೀಡಿದರು. ಶಾಸಕ ಚಂದ್ರಪ್ಪ, ರಘುಚಂದನ್ ಮತ್ತವರ 30ಕ್ಕೂ ಹೆಚ್ಚು ಬೆಂಬಲಿಗರು ಧಾವಿಸಿದರು.

ಖಾಸಗಿ ಹೋಟೆಲ್ ನಲ್ಲಿ ನಡೆದ ಈ ಮಾತುಕತೆ ವೇಳೆ, ಕಳೆದ ಟಿಕೆಟ್ ಭರವಸೆಯ ಮೇರೆಗೆ ಐದು ವರ್ಷಗಳಿಂದ ಪಕ್ಷದ ಸಂಘಟನೆಗೆ ಕ್ಷೇತ್ರದಲ್ಲಿ ಶ್ರಮಿಸುತ್ತಿರುವೆ. ಪಕ್ಷದ ಸಮೀಕ್ಷೆಗಳು, ಕಾರ್ಯಕರ್ತರ ಅಭಿಪ್ರಾಯಗಳಲ್ಲೂ ನನ್ನ ಹೆಸರೇ ಪ್ರಸ್ತಾಪವಾಗಿತ್ತು. ಆದರೂ ಟಿಕೆಟ್ ಕೈತಪ್ಪಿದೆ ಎಂದು ರಘುಚಂದನ್ ನೋವು ತೋಡಿಕೊಂಡರು.

ಶಾಸಕ ಎಂ.ಚಂದ್ರಪ್ಪ ಮಗನ ಮಾತಿಗೆ ಧ್ವನಿಗೂಡಿಸಿದರು. ಮಧ್ಯೆಪ್ರವೇಶಿಸಿದ ಬಿಎಸ್‌ವೈ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದು ನಮ್ಮ ಮುಂದಿರುವ ಏಕೈಕ ಗುರಿಯಾಗಿದೆ. ಪಕ್ಷದ ವರಿಷ್ಠರು ತೀರ್ಮಾನಿಸಿಯಾಗಿದೆ, ಮುಂದೆ ಉತ್ತಮ ಭವಿಷ್ಯವಿದೆ. ರಾಜಕೀಯ ನಿಮ್ಮ ಬೆಳವಣಿಗೆ ಕಾರಣವಾದ ನಾನೇ ನಿಮ್ಮ ರಕ್ಷಣೆಗಿರುವೆ ಎಂಬ ಭರವಸೆ ನೀಡಿದ್ದಾರೆ.

ಪಕ್ಷದ ಅಭ್ಯರ್ಥಿ ಗೆಲುವಿಗೆ ಒಮ್ಮತದಿಂದ ದುಡಿಯಿರಿ, ಮುಂದಿನ ದಿನಗಳಲ್ಲಿ ಪಕ್ಷ ನಿಮ್ಮನ್ನು ಖಂಡಿತ ಗುರುತಿಸುತ್ತದೆ, ಎಲ್ಲ ಒಳ್ಳೆಯದಾಗುತ್ತದೆ ಎನ್ನುವ ಅಭಯ ನೀಡಿದರು ಎಂದು ಮೂಲಗಳು ತಿಳಿಸಿವೆ.

ಬಿಎಸ್‌ವೈ ಮಾತು, ಭರವಸೆಗೆ ಎಂ.ಚಂದ್ರಪ್ಪ ಹಾಗೂ ರಘುಚಂದನ್ ಒಪ್ಪಿದರು. ಸ್ಪರ್ಧಿಸುವ ನಿರ್ಧಾರ ಕೈಬಿಟ್ಟು, ಪಕ್ಷದ ಅಭ್ಯರ್ಥಿ ಗೋವಿಂದ ಕಾರಜೋಳ ಪರವಾಗಿ ಕೆಲಸ ಮಾಡುವುದಾಗಿ ಒಪ್ಪಿಗೆ ನೀಡಿದರು.

ಸಂಧಾನಕ್ಕೆ ಸಮ್ಮತಿ

ಸಭೆಯ ನಂತರ ಎಂ.ಚಂದ್ರಪ್ಪ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ ,ಹಿರಿಯರಾದ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಮಗೆ ಯಾವತ್ತೂ ಅನ್ಯಾಯ ಮಾಡಿಲ್ಲ. ನಮ್ಮ ಬೆಂಬಲಿಗರೊಂದಿಗೆ ಚರ್ಚಿಸಿದರು, ಅವರ ಮಾತಿಗೆ ಗೌರವ, ಮರ್ಯಾದೆ ಕೊಟ್ಟು ನನ್ನ ಮಗ ಸ್ಪರ್ಧೆ ಮಾಡಲ್ಲ, ಪಕ್ಷದ ಪರ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಈ ಮಾತಿಗೆ ರಘು ಚಂದನ್ ಧ್ವನಿಗೂಡಿಸಿ,  ಯಡಿಯೂರಪ್ಪ ನಮಗೆ ಗಾಡ್ ಫಾದರ್, ಅವರ ನೆರಳಲ್ಲೇ ರಾಜಕೀಯಕ್ಕೆ ಬಂದವರು. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ, ಮತ್ತೆ ಬಿಜೆಪಿಗೆ ಬಂದಾಗ ಅಚಲವಾಗಿ ನಿಂತಿದ್ದೆವು. ತಂದೆ ಸ್ಥಾನದಲ್ಲಿರುವ ಅವರ ಮಾತು ಕೇಳುತ್ತೇವೆ. ಮೋದಿಯವರ ಕೈಬಲಪಡಿಸಲು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

ಮತ್ತೊಂದು ಪ್ರಯತ್ನವೂ ಫಲಪ್ರದ

ಚಿತ್ರದುರ್ಗ ಬಿಕ್ಕಟ್ಟು ಬಗೆಹರಿಸುವಲ್ಲಿ ಯಶಸ್ವಿಯಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಚಿಕ್ಕಬಳ್ಳಾಪುರ ಸಮಸ್ಯೆ ಬಗೆಹರಿಸಲು ಪ್ರಯತ್ನವನ್ನೂ ಫಲಪ್ರದ ಮಾಡಿದ್ದಾರೆ. ಖಾಸಗಿ ಹೋಟೆಲ್ ಗೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ಕರೆಯಿಸಿಕೊಂಡು ಮುಖಾಮುಖಿ ಚರ್ಚಿಸಿದರು.

ಮತ್ತೊಂದು ಕಡೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹಾಸನ ಮಾಜಿ ಶಾಸಕ ಪ್ರೀತಂ ಗೌಡ ಹಾಗೂ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಜತೆಗೆ ರಾಜಿ ಸಂಧಾನದ ಮಾತುಕತೆ ನಡೆಸಿದರು. ಬಿಎಸ್ ವೈ ಹಾಗೂ ವಿಜಯೇಂದ್ರ ಮನವೊಲಿಕೆ ಪ್ರಯತ್ನ ತಡರಾತ್ರಿವರೆಗೂ ನಡೆಸಿ, ಅದರಲ್ಲಿ ಯಶಸ್ಸನ್ನೂ ಸಾಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net