ಹಳೇ ಹಾಸಿಗೆಯನ್ನು ಮಾರಲು ಹೋದ ಯುವತಿಯರಿಗೆ ಕಾದಿತ್ತು ಗಂಡಾಂತರ!

bed
Published on

ಬೆಂಗಳೂರು: ಹಳೇ ಹಾಸಿಗೆಗಳನ್ನು ಮಾರಾಟ ಮಾಡಲು ಹೋದ ಯುವತಿಯರಿಬ್ಬರು ವಂಚಕರ ಜಾಲಕ್ಕೆ ಸಿಲುಕಿ ನಷ್ಟ ಅನುಭವಿಸಿದ್ದಾರೆ.

ಕಸವನಹಳ್ಳಿ ನಿವಾಸಿ ತೇಜಸ್ವಿ ಸಿಂಗ್​ ಮತ್ತು ಸಪ್ನಾ ವಂಚನೆಗೊಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಕನ್ಹಯ್ಯ ಕುಮಾರ್​ ಮತ್ತು ಉದಯ್​ಭಾನ್​ ಸಿಂಗ್​ ಎಂಬುವರ ವಿರುದ್ಧ ವೈಟ್​ಫೀಲ್ಡ್​ ವಿಭಾಗದ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ತೇಜಸ್ವಿ ಸಿಂಗ್​ ಮತ್ತು ಸಪ್ನಾ ಅವರು ಹಳೇ ಹಾಸಿಗೆಗಳನ್ನು ಮಾರಾಟ ಮಾಡಲು ಒಎಲ್​ಎಕ್ಸ್​ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಇದನ್ನು ಗಮನಿಸಿ ಕರೆ ಮಾಡಿದ್ದ ಅಪರಿಚಿತರು, ಹಾಸಿಗೆಗಳನ್ನು ಖರೀದಿಸುತ್ತೇವೆ. ಆನ್​ಲೈನ್​ ಮೂಲಕ ಹಣ ಸಂದಾಯ ಮಾಡುತ್ತೇವೆ ಎಂದೇಳಿ ಮೊಬೈಲ್​ಗೆ ಕ್ಯೂಆರ್​ ಕೋಡ್​ ಕಳುಹಿಸಿದ್ದರು.

ಅದನ್ನು ಸ್ಕ್ಯಾನ್​ ಮಾಡಿದ ತೇಜಸ್ವಿ ಸಿಂಗ್​ರ ಬ್ಯಾಂಕ್​ ಖಾತೆಯಿಂದ ಹಂತಹಂತವಾಗಿ 46,900 ರೂ. ಬೇರೆ ಖಾತೆಗೆ ವರ್ಗಾವಣೆಯಾಗಿದೆ. ಇದೇ ರೀತಿ ಸಪ್ನಾರ ಬ್ಯಾಂಕ್​ ಖಾತೆಯಿಂದಲೂ 60 ಸಾವಿರ ರೂ. ಕಡಿತವಾಗಿದೆ. ಈ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ ವಂಚಕರು ಸಂಪರ್ಕಕ್ಕೆ ಸಿಕ್ಕಿಲ್ಲ. ಸೈಬರ್​ ವಂಚನೆ ಎಂಬುದು ಗೊತ್ತಾಗಿ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net