

ಮಂಗಳೂರು: ಬ್ಯಾರಿ ಮುಸ್ಲಿಂ ಸಮಾಜದಲ್ಲಿ 1980ರ ಬಳಿಕ ಶೈಕ್ಷಣಿಕ ಕ್ರಾಂತಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾರಿ ವಿದ್ಯಾರ್ಥಿನಿಯರು ಶಿಕ್ಷಣದಲ್ಲಿ ನಿರೀಕ್ಷೆಗೂ ಮೀರಿ ಸಾಧನೆಗೈಯ್ಯುತ್ತಿದ್ದಾರೆ. ಅದರ ಪರಿಣಾಮವೇ ಇಂದು ಅಧಿಕ ಸಂಖ್ಯೆಯಲ್ಲಿ ಬ್ಯಾರಿ ಲೇಖಕಿಯರು ಬರೆಯುವಂತಾಗಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಹೇಳಿದರು.
ಬ್ಯಾರಿ ಎಲ್ತ್‌ಗಾರ್ತಿಮಾರೊ ಕೂಟ’ದ ವತಿಯಿಂದ ನಗರದ ಸಹೋದಯ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ ‘ಸಾಹಿತ್ಯತ್ತೊ ಒಸರ್ 2024’ (ಸಾಹಿತ್ಯದ ಒರತೆ) ಕಾರ್ಯಕ್ರಮವನ್ನು ದಫ್ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯಾರಿ ಭಾಷೆಯಲ್ಲಿ ಮಹಾಪ್ರಾಣ ಇಲ್ಲ. ಪದಪ್ರಯೋಗ ಮಾಡುವಾಗ ಅಲ್ಪಪ್ರಾಣವನ್ನು ಬಳಸಿದರೆ ಮಾತ್ರ ಭಾಷೆಯ ಮೂಲಸತ್ವ ಉಳಿಯಬಲ್ಲುದು ಎಂದು ಅವರು ಅಭಿಪ್ರಾಯಪಟ್ಟರು.
‘ಪಾಟೆಲ್ತ್‌ರೊ ಒಸರ್’ ಶೀರ್ಷಿಕೆಯಡಿ 14 ಬ್ಯಾರಿ ಲೇಖಕಿಯರು ಬ್ಯಾರಿ, ತುಳು, ಕನ್ನಡದಲ್ಲಿ ಕವನಗಳನ್ನು ವಾಚಿಸಿದರು. ‘ಪಲಕತ್ತೊ ಒಸರ್’ ಶೀರ್ಷಿಕೆಯಡಿ ನಾಲ್ವರು ಲೇಖಕಿಯರು ಪ್ರಚಲಿತ ವಿದ್ಯಮಾನಗಳ ಬಗ್ಗೆ ವಿಚಾರ ಮಂಡಿಸಿ ಮುಕ್ತವಾಗಿ ಚರ್ಚಿಸಿದರು.
ಹಿರಿಯ ಲೇಖಕಿ ಝುಲೇಖಾ ಮುಮ್ತಾಝ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕಿ ಫಾತಿಮಾ ರಲಿಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುನೀರಾ ತೊಕ್ಕೊಟ್ಟು ಸ್ವಾಗತಿಸಿದರು. ಶಹೀಮಾ ಇಸ್ಮತ್ ಪಜೀರ್ ಕಿರಾಅತ್ ಪಠಿಸಿದರು. ಅಸ್ಮತ್ ವಗ್ಗ ಕಾರ್ಯಕ್ರಮ ನಿರೂಪಿಸಿದರು.
ಪಾಟೆಲ್ತ್‌ರೊ ಒಸರ್-ಬಹುಭಾಷಾ ಕವಿಗೋಷ್ಠಿಯಲ್ಲಿ ಆಯಿಶಾ ಯು.ಕೆ., ಮರಿಯಂ ಇಸ್ಮಾಯೀಲ್, ಸಾರಾ ಅಲಿ ಪರ್ಲಡ್ಕ, ಶಾಹಿದಾ, ರಮ್ಲತ್, ರಹ್ಮತ್ ಪುತ್ತೂರು, ತನ್ಸೀರಾ ಆತೂರು, ನಝ್ಮತುನ್ನಿಸಾ ಲೈಝ್, ಫೌಝಿಯಾ ಹರ್ಷದ್ ಮೂಡುಬಿದಿರೆ, ರಮೀಝಾ ಎಂಬಿ ಕುಕ್ಕಾಜೆ, ರೈಹಾನಾ ವಿ.ಕೆ. ಸಚರಿಪೇಟೆ, ಡಾ. ಜುವೈರಿಯಾ ಮುಫೀದಾ, ಸಲ್ಮಾ ಮಂಗಳೂರು, ಆಮಿಷಾ ತಶಿ ಉಳ್ಳಾಲ್ ಕವನಗಳನ್ನು ವಾಚಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಿಸ್ರಿಯಾ ಐ. ಪಜೀರ್ ಯಾವುದೇ ಬರಹವಾಗಲಿ, ಅದು ಓದುಗರ ಮನವನ್ನು ಸದಾ ಕಾಡಬೇಕು. ತಲ್ಲಣನ್ನೂ ಸೃಷ್ಟಿಸಬೇಕು, ಜಾಗೃತಿ ಮೂಡಿಸಬೇಕು. ಆವಾಗ ಅದು ಸಶಕ್ತವಾಗಿರುತ್ತದೆ. ಕೇವಲ ಬರೆದರೆ ಸಾಲದು, ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬ್ಯಾರಿ ಲೇಖಕಿಯರು ಮುಂದೆ ಬರಬೇಕು ಎಂದರು. ಉಮೈರತ್ ಕುಮೇರ್ ಕಾರ್ಯಕ್ರಮ ನಿರೂಪಿಸಿದರು.
ಪಲಕತ್ತೊ ಒಸರ್: ‘ಕೆಲಸ ಮಾಡುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ’ ಎಂಬ ವಿಷಯದಲ್ಲಿ ತಾಹಿರಾ ಸಿರಾಜ್, ‘ಮಹಿಳೆ ಮತ್ತು ಶಿಕ್ಷಣ’ ಎಂಬ ವಿಷಯದಲ್ಲಿ ಸಾರಾ ಮಸ್ಕರುನ್ನೀಸಾ, ‘ಆತ್ಮಹತ್ಯೆ’ ವಿಷಯದಲ್ಲಿ ನಸೀಬಾ ಗಡಿಯಾರ್, ‘ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ’ ವಿಷಯದಲ್ಲಿ ಫಾತಿಮಾ ರಲಿಯಾ ವಿಚಾರ ಮಂಡಿಸಿದರು. ಲೇಖಕಿ ಶಮೀಮಾ ಕುತ್ತಾರ್ ಸಂವಾದ ಗೋಷ್ಠಿ ನಿರ್ವಹಿಸಿದರು.