ಉಡುಪಿ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೋಟ ಡಾ.ಕಾರಂತ ಪ್ರತಿಷ್ಠಾನದ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬ್ಯಾರಿ ಭಾಷಿಕರ ವರ್ಣನಾತ್ಮಕ ವ್ಯಾಕರಣ ಮತ್ತು ತೌಲನಕ ಅಧ್ಯಯನ ಗ್ರಂಥ ರಚಿಸಿ ಪಿಎಚ್‌ಡಿ ಪಡೆದ ಹಾಗೂ ಅಕಾಡೆಮಿಯ ಪ್ರಥಮ ಅವಧಿಯ ಸದಸ್ಯೆ ಡಾ.ಪಿ.ಸುಶೀಲ ಉಪಾಧ್ಯಾಯ ಅವರ ಸಂಸ್ಮರಣೆ ಮಾ.20ರಂದು ಅಪರಾಹ್ನ 2ಗಂಟೆಗೆ ಕೋಟ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಯಲಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಸಹಾಯಕ ಅಭಿಯೋಗ ನಿರ್ದೇಶಕಿ ಮಮ್ತಾಝ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ವಹಿಸಲಿರುವರು. ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ನಿಕೇತನ, ಸುಶೀಲ ಉಪಾಧ್ಯಾಯರವರ ಸಂಸ್ಮರಣ ಕುರಿತು ವಿಶೇಷ ಉಪನ್ಯಾಸ ನೀಡಲಿರುವರು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕೋಟತಟ್ಟು ಗ್ರಾಪಂ ಅಧ್ಯಕ್ಷೆ ಅಶ್ವಿನಿ ದಿನೇಶ್, ಡಾ. ಕಾರಂತ ಪ್ರತಿಷ್ಠಾನದ ಟ್ರಸ್ಟಿ ಇಬ್ರಾಹಿಂ ಕೋಟ, ಕಾರ್ಯದರ್ಶಿ ನರೇಂದ್ರ ಕೋಟ, ಕರ್ನಾಟಕ ಹಜ್ ಸಮಿತಿಯ ಮಾಜಿ ಸದಸ್ಯ ಸಲೀಂ ಅಂಬಾಗಿಲು ಭಾಗವಹಿಸಲಿದ್ದಾರೆ.
ಸಂಜೆ 4 ಗಂಟೆಗೆ ಮಹಿಳಾ ಸಾಧಕಿಯರಾದ ಮಮ್ತಾಜ್(ಸಾಮಾಜಿಕ ಸ್ಪಂದನೆ), ಡಾ.ವಾರಿಜ ಎನ್.(ಶೈಕ್ಷಣಿಕ ಕ್ಷೇತ್ರ), ಸುಶೀಲ ಸೋಮಶೇಖರ್ (ಸಂಘಟನೆ), ಡಾ.ಫಿರ್ದೋಸ್(ಶೈಕ್ಷಣಿಕ ಕ್ಷೇತ್ರ), ಡಾ.ಅಪ್ಸರಿ ಬಾನು ಎಂ. (ವೈದ್ಯಕೀಯ ಕ್ಷೇತ್ರ), ಮೀನಾ ಪಿಂಟೊ ಕಲ್ಯಾಣಪುರ(ಸಮಾಜ ಸೇವೆ), ಫರ್ಝಾನ ಎಂ.(ಸಾಮಾಜಿಕ ಸ್ಪಂದನೆ), ಲಲಿತಾ ಪೂಜಾರಿ ಕೊರವಡಿ (ಕರಕುಶಲ ಕಲೆ), ಸುಜಾತಾ ಅಂದ್ರಾದೆ(ಸಿನಿಮಾ, ರಂಗಭೂಮಿ ನಟಿ), ಶೈಲಾ ಎಸ್.ಪೂಜಾರಿ(ಸಾಮಾಜಿಕ ಸ್ಪಂದನೆ), ಮಂಜುಶ್ರೀ ರಾಕೇಶ್ (ಪತ್ರಿಕೋದ್ಯಮ) ಅವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ಜಿಲ್ಲಾ ಮಟ್ಟದ ಮೆಹಂದಿ ಸ್ಪರ್ಧೆ ಮತ್ತು ಸಂಗೀತ ಕುರ್ಚಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯ ನಝೀರ್ ಪೊಲ್ಯ ಉಪಸ್ಥಿತರಿದ್ದರು.