

ಮುಂಬೈ: ವಾರದ ವಹಿವಾಟಿನ ಎರಡನೇ ದಿನವೂ (ಮಂಗಳವಾರ) ಷೇರುಪೇಟೆ ಕುಸಿತಕ್ಕೆ ಸಾಕ್ಷಿಯಾಯಿತು. ಮುಂಬೈ ಷೇರು ಸೂಚ್ಯಂಕ (ಬಿಎಸ್ಇ) ಸೆನ್ಸೆಕ್ಸ್ 1064 ಅಂಶಗಳ ಭಾರಿ ಇಳಿಕೆಯನ್ನು ದಾಖಲಿಸಿತು.
ಈ ಮೂಲಕ 1.30%ರಷ್ಟು ಕುಸಿತ ಕಂಡ ಸೆನ್ಸೆಕ್ಸ್ 80,684 ಅಂಶಗಳಿಗೆ ದಿನದ ವಹಿವಾಟು ಮುಗಿಸಿತು. ರಾಷ್ಟ್ರೀಯ ಷೇರು ಸೂಚ್ಯಂಕ (ಎನ್ಎಸ್ಇ) ನಿಫ್ಟಿ 332 ಅಂಶ ಇಳಿಕೆಯಾಗಿ (1.35%), 24,336ಕ್ಕೆ ಸ್ಥಿರಗೊಂಡಿತು. ಸೋಮವಾರ ಏರಿಕೆ ಕಂಡಿದ್ದ ಬಿಎಸ್ಇಯ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕೂಡ ಮಂಗಳವಾರ ಕುಸಿತ ದಾಖಲಿಸಿದವು. ಮಿಡ್ ಕ್ಯಾಪ್ 311 ಅಂಶಗಳ ಇಳಿಕೆ ಕಂಡು (0.65%), 47,816ಕ್ಕೆ ತಲುಪಿತು. ಸ್ಮಾಲ್ ಕ್ಯಾಪ್ 299 ಅಂಶ ಕುಸಿತವಾಗಿ (0.52%) 56,929ಕ್ಕೆ ಸ್ಥಿರಗೊಂಡಿತು.
ಸೆನ್ಸೆಕ್ಸ್ನ 30 ಷೇರುಗಳ ಗುಚ್ಛದಲ್ಲಿ 29 ನಷ್ಟ ಅನುಭವಿಸಿದರೆ, 1 ಮಾತ್ರ ಲಾಭ ಕಂಡಿತು. ನಿಫ್ಟಿಯ 50 ಷೇರುಗಳಲ್ಲಿ 49 ನಷ್ಟ ಅನುಭವಿಸಿದರೆ, ಒಂದು ಏರಿಕೆ ಕಂಡಿತು. ನಿಫ್ಟಿಯಲ್ಲಿ ಸಾರ್ವಜನಿಕ ರಂಗದ ಬ್ಯಾಂಕುಗಳು 1.88% ಕುಸಿತದೊಂದಿಗೆ, ಮೆಟಲ್, ಖಾಸಗಿ ಬ್ಯಾಂಕ್, ಫಾರ್ವ, ಆಟೋ ವಲಯಗಳು ಶೇ.2 ಕುಸಿತದೊಂದಿಗೆ ವಹಿವಾಟು ಮುಗಿಸಿದವು.
ಎನ್ಎಸ್ಇ ಅಂಕಿಅಂಶಗಳ ಪ್ರಕಾರ ಸೋಮವಾರದಮದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು 278.70 ಕೋಟಿ ರೂ.ಗಳ ಷೇರು ಮಾರಾಟ ಮಾಡಿದರು. ದೇಶೀಯ ಸಾಂಸ್ಥಿಕ ಹೂಡಿಕೆದಾರರು 234.25 ಕೋಟಿ ರೂ.ಗಳ ಷೇರು ಮಾರಾಟ ಮಾಡಿದರು. ಮಂಗಳವಾರ ಜಪಾನ್, ಕೊರಿಯಾ ಹಾಗೂ ಚೀನಾ ಮಾರುಕಟ್ಟೆಗಳು ಸಹ ಕುಸಿತದೊಂದಿಗೆ ದಿನದ ವಹಿವಾಟು ಮುಗಿಸಿದವು.
ಇಲ್ಲಿಯ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನದ ದರ ತುಟ್ಟಿಯಾಗಿದ್ದರೆ, ಬೆಳ್ಳಿಯ ದರ ಕೊಂಚ ತಗ್ಗಿದೆ. 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 950 ರೂ. ಏರಿಕೆಯಾಗಿದ್ದು, 79,300 ರೂ.ಗೆ ತಲುಪಿದೆ. ಸೋಮವಾರ 78,350 ರೂ. ಇತ್ತು. ಒಂದು ಕೆ.ಜಿ ಬೆಳ್ಳಿಯ ದರದಲ್ಲಿ 1 ಸಾವಿರ ರೂ. ಇಳಿಕೆಯಾಗಿದ್ದು, 91,500 ರೂ.ಗೆ ತಲುಪಿದೆ. ಸೋಮವಾರ 92,500 ರೂ.ಗೆ ಮಾರಾಟಗೊಂಡಿತ್ತು ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.