ಕರಡಿ ದಾಳಿ ಗಾಯಾಳುಗೆ ಎಂಪಿ ನೆರವು

30 smg 12
Published on

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಸಿಡುಗಿನಾಳ್ ಮರಾಠಿ ಕ್ಯಾಂಪ್‌ನಲ್ಲಿ ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಜಯಣ್ಣ ಅವರ ಆರೋಗ್ಯವನ್ನು ಮಂಗಳವಾರ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ವಿಚಾರಿಸಿದರು.

ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚಿಸಿದ ಬಿ.ವೈ.ರಾಘವೇಂದ್ರ ಅವರು ಘಟನೆ ಬಗ್ಗೆ ಜಯಣ್ಣ ಅವರಿಂದ ಮಾಹಿತಿ ಪಡೆದರು. ಬಳಿಕ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು.

ಕಳೆದ ಭಾನುವಾರ ಸಂಜೆ ಜಯಣ್ಣ ಹೊಲದಲ್ಲಿ ಕೆಲಸ ಮಾಡುವಾಗ ಕರಡಿ ಏಕಾಏಕಿ ದಾಳಿ ಮಾಡಿತ್ತು. ತಲೆ, ಮುಖ ಮತ್ತು ಮೈ-ಕೈಗಳನ್ನು ಗಾಯಗೊಳಿಸಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮೆಗ್ಗಾನ್‌ಗೆ ದಾಖಲಿಸಲಾಗಿತ್ತು. ಈ ವಿಚಾರ ತಿಳಿದು ರಾಘವೇಂದ್ರ ಅವರು ಆಸ್ಪತ್ರೆಗೆ ಭೇಟಿ ನೀಡಿ ಧೈರ್ಯ ತುಂಬಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಮುಖಂಡರಾದ ಕಲ್ಮನೆ ರಾಜೇಶ್, ದಿವಾಕರ್ ಶೆಟ್ಟಿ, ಬಳ್ಳೆಕೆರೆ ಸಂತೋಷ್, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಶ್ರೀಧರ್, ಜಿಲ್ಲಾ ಸರ್ಜನ್ ಡಾ. ಸಿದ್ಧನ ಗೌಡ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net