

ಕೆ.ಆರ್.ಪೇಟೆ: ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸಿದರೆ ತಾಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಶಾಸಕರಿಗೆ ಹೊರೆ ಕಡಿಮೆಯಾಗುತ್ತದೆ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.
ತಾಲೂಕಿನ ಶೀಳನೆರೆ ಹೋಬಳಿಯ ಸಿಂಧಘಟ್ಟ ಗ್ರಾಮಪಂಚಾಯಿತಿ ಆವರಣದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮ ಮಟ್ಟದಲ್ಲಿ ನಡೆಯುವ ಗ್ರಾಮ ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಾಗುವುದು ಕಡ್ಡಾಯವಾಗಿದ್ದು, ತಮ್ಮ ತಮ್ಮ ಇಲಾಖೆಗಳ ಪ್ರಗತಿಯನ್ನು ಕಡ್ಡಾಯವಾಗಿ ಹಾಜರಾಗಿ ಅಗತ್ಯ ಮಾಹಿತಿಗಳನ್ನು ಒದಗಿಸಿಕೊಡಬೇಕು. ಅಲ್ಲದೆ ಸರ್ಕಾರದ ಕಾರ್ಯಕ್ರಮಗಳು ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ ಎಂಬುದನ್ನು ಪರಿಶೀಲನೆ ಮಾಡಿ ವಿಳಂಬವಾಗದಂತೆ ಅನುಷ್ಠಾನ ಮಾಡುವ ದೃಷ್ಟಿಯಿಂದ ಪ್ರಗತಿ ಪರಿಶೀಲನಾ ಸಭೆಗಳನ್ನು ಆಯೋಜಿಸಲಾಗುತ್ತದೆ. ಪೊಲಿಸ್ ಸೇರಿದಂತೆ ಕೆಲವು ಇಲಾಖೆಗಳು ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಂಥಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಎಕರೆ ಸರ್ಕಾರಿ ಸ್ಥಳ ಗುರುತಿಸಿ ವಸತಿ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಬೇಕು. ಪೌತಿ ಖಾತೆ ಮಾಡಿಕೊಡಲು ಹಣದ ಆಮಿಷ ಒಡ್ಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಗ್ರಾಮಾಡಳಿತಾಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರಿಗೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಸಮರ್ಪಕವಾಗಿಲ್ಲ ಎಂದು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದು ಶೀಳನೆರೆ ವಿಭಾಗದ ಜೆಇ ಕೂಡಲೇ ಕ್ರಮ ವಹಿಸದಿದ್ದರೆ ಶಿಸ್ತು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಿಂಧಘಟ್ಟ ಪ್ರೌಢಶಾಲೆಯು ಈ ಬಾರಿ ತೀರಾ ಕಳಪೆ ಫಲಿತಾಂಶವನ್ನು ಪಡೆದಿದ್ದು, ಶಿಕ್ಷಕರು ಹಾಗೂ ಮುಖ್ಯಶಿಕ್ಷಕರು ತಮ್ಮ ಪಾಲಿನ ಕೆಲಸಗಳನ್ನು ಸರಿಯಾಗಿ ಮಾಡಿಲ್ಲ ಎಂಬುದನ್ನು ತೋರಿಸುತ್ತದೆ. ಸರ್ಕಾರಿ ಶಾಲೆಗಳ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ವೃದ್ಧಿಸಲು ಶ್ರಮಿಸಬೇಕು. ಮೀನುಗಾರಿಕೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದ್ದು, ಸಮರ್ಥವಾಗಿ ಕೆಲಸ ಮಾಡಲಾಗದಿದ್ದರೆ ವರ್ಗಾವಣೆ ಮಡೆದುಕೊಂಡು ಹೋಗಬಹುದು ಎಂದರು.
ಕಾರ್ಯಕ್ರಮದಲ್ಲಿ ಸಿಂಧಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಾವಣ್ಯಕುಮಾರ್, ತಾಪಂ ಇಒ ಸುಷ್ಮಾ, ಪಿಡಿಒ ವಾಣಿ, ತಾಲೂಕು ಯೋಜನಾಧಿಕಾರಿ ಶ್ರೀನಿವಾಸ್ ಇತರರಿದ್ದರು.