ಸಮಸ್ಯೆಗಳ ವಿವರವಾದ ಪ್ರಸ್ತಾವ ಸಲ್ಲಿಸಲು ಸಿದ್ಧರಾಗಿರಿ

HUN-OCT-28-1(MLA MEETING WITH OFFICIALS)
ಹುಣಸೂರು ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿದರು. ತಹಸೀಲ್ದಾರ್ ಜೆ.ಮಂಜುನಾಥ್, ಇಒ ಕೆ.ಹೊಂಗಯ್ಯ ಇದ್ದರು.
Published on

ಹುಣಸೂರು: ನ.5ರಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಾಲೂಕಿನ ಅಭಿವೃದ್ಧಿಗೆ ತೊಡಕಾಗಿರುವ ಸಮಸ್ಯೆಗಳ ಕುರಿತು ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಲು ಅಧಿಕಾರಿಗಳು ಸಿದ್ಧರಾಗಬೇಕೆಂದು ಶಾಸಕ ಜಿ.ಡಿ.ಹರೀಶ್‌ಗೌಡ ಸೂಚಿಸಿದರು.

ಇಲ್ಲಿನ ನಗರಸಭೆಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ಶಾಸಕ ನೇತೃತ್ವದಲ್ಲಿ ಆಯೋಜಿಸಿದ್ದ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸರ್ವೇ ಇಲಾಖೆ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದರು.

ತಾಲೂಕಿನಲ್ಲಿ ಪ್ರಮುಖವಾಗಿ ರೈತರ ಜಮೀನುಗಳಿಗೆ ರಸ್ತೆ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಕೆರ ಒತ್ತುವರಿ, ಸ್ಮಶಾನ ಒತ್ತುವರಿ, ಅಭಿವೃದ್ಧಿ ಮತ್ತು ಜಾಗ ಗುರುತಿಸುವ ಕಾರ್ಯ, ಸರ್ಕಾರಿ ಜಾಗಗಳ ಒತ್ತುವರಿ, ಗ್ರಾಮೀಣ ಭಾಗಗಳಲ್ಲಿ ಆಸ್ತಿಯ ಖಾತೆ ಮಾಡಿಕೊಡುವ ಸಮಸ್ಯೆಗಳು, ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು ಮತು ಜನಪ್ರತಿನಿಧಿಗಳ ನಡುವಿನ ಹೊಂದಾಣಿಕೆ ಕೊರತೆ, ನಿವೇಶನಗಳ ಕೊರತೆ, ಸ್ವಚ್ಛತೆ, ಕಂದಾಯ ಗ್ರಾಮಗಳ ಸ್ಥಾಪನೆ ಇವೆ ಮುಂದಾದ ಸಮಸ್ಯೆಗಳು ದಶಕಗಳಿಂದ ಕಾಡುತ್ತಿವೆ. ಇದು ಮುಖ್ಯವಾಗಿ ತಾಲೂಕಿನ ಅಭಿವೃದ್ಧಿಗೆ ಮಾರಕವಾಗಿದೆ. ಈ ಮೂರು ಇಲಾಖೆಗಳಲ್ಲಿನ ಸಮನ್ವಯದ ಕೊರತೆಯೂ ಅಭಿವೃದ್ಧಿಗೆ ಹಿನ್ನಡೆಯನ್ನುಂಟು ಮಾಡಿದೆ ಎಂದರು.

ಜಿಲ್ಲಾಧಿಕಾರಿಗಳೊಂದಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಲಿದ್ದು, ಸಭೆ ದಿನದಂದು ತಾಲೂಕಿನ ಮೂರು ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಕಾರ್ಯವ್ಯಾಪ್ತಿಯ ಸಮಸ್ಯೆಗಳ ಕುರಿತು ಸಂಪೂರ್ಣ ಮಾಹಿತಿಯೊಂದಿಗೆ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಬೇಕು. ಈ ಹಿಂದೆ ಪ್ರಸ್ತಾವನೆಗಳನ್ನು ಸಲ್ಲಿಸಿದ್ದರೆ ಅದನ್ನು ಮನವರಿಕೆ ಮಾಡಿಕೊಡುವ ಕಾರ್ಯವನ್ನು ಅಧಿಕಾರಿಗಳು ನಿರ್ವಹಿಸಬೇಕು. ಸಮಸ್ಯೆಗಳ ಪ್ರಾಮುಖ್ಯತೆ ಅರಿಯುವಂತೆ ಜಿಲ್ಲಾಧಿಕಾರಿ ಗಮನಕ್ಕೆ ತರುವ ಕಾರ್ಯವನ್ನು ನೀವೆಲ್ಲರೂ ಮಾಡಬೇಕು. ಆ ಮೂಲಕ ಆಗಬೇಕಾದ ಕಾರ್ಯಗಳ ಕುರಿತು ಚರ್ಚಿಸೋಣವೆಂದರು.

ಸಭೆಯಲ್ಲಿ ತಹಸೀಲ್ದಾರ್ ಜೆ.ಮಂಜುನಾಥ್, ತಾ.ಪಂ.ಇಒ ಕೆ.ಹೊಂಗಯ್ಯ, ಎಡಿಎಲ್‌ಆರ್ ಜಗನ್ನಾಥ್, ಸರ್ವೇಯರ್ ವಿಜಯಕುಮಾರ್, ವಿಎಗಳಾಧ ಶ್ರೀವತ್ಸ, ಶ್ರೀನಿವಾಸ್, ಚೈತ್ರ, ಸುನಿಲ್, ಸುಮಂತ್, ಸುಬ್ರಮಣ್ಯ ಸೇರಿದಂತೆ 41 ಗ್ರಾಪಂ.ಗಳ ಪಿಡಿಒಗಳು, ಆರ್‌ಐಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net