ಕೆಲಸದ ವಿಚಾರದಲ್ಲಿ ಬದ್ಧತೆ ಇರಲಿ

klr dc meeting
ಕೋಲಾರದ ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷಾ ಮಾತನಾಡಿದರು. ಮಂಗಳಾ ಇದ್ದರು.
Published on

ಕೋಲಾರ: ಇಲಾಖೆ ಅಧಿಕಾರಿಗಳು ತಮ್ಮ ಕೆಲಸದ ವಿಚಾರದಲ್ಲಿ ಬದ್ಧತೆ ಇಟ್ಟುಕೊಂಡಾಗ ಮಾತ್ರ ಗುರಿ ಸಾಽಸಬಹುದು. ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಏಕೆ ಬರುತ್ತಾರೆ ಎಂಬುದನ್ನು ಅರಿತು ಸಮಸ್ಯೆಗಳಿಗೆ ಸ್ಪಂದಿಸಿ ಗೌರವ ಉಳಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರ ಪರ ಕಾಳಜಿಯಿಂದ ಕೆಲಸ ಮಾಡಬೇಕು. ಕಚೇರಿಗೆ ಆಗಮಿಸಿದ ಕೂಡಲೇ ಆ ದಿನದ ಕೆಲಸ ಮುಗಿಸಲು ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ರೈತರು ತಮ್ಮ ಜಮೀನುಗಳ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳುವ ಮೂಲಕ ಬರ ಪರಿಹಾರ, ವಿಮಾ ಪರಿಹಾರಗಳಂತಹ ಸೌಲಭ್ಯಗಳನ್ನು ಕಲ್ಪಿಸುವಂತಾಗಬೇಕು. ಆ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಂದು ಜಮೀನನ್ನು ಫ್ರೂಟ್ ತಂತ್ರಾಂಶದ ವ್ಯಾಪ್ತಿಗೆ ತರಬೇಕು ಎಂದು ಸೂಚಿಸಿದರು.

ಪ್ರಕೃತಿ ವಿಕೋಪಗಳ ಸಮಯದಲ್ಲಿ ರೈತರ ಬೆಳೆಗಳು ಹಾನಿ ಆದಾಗ ಪರಿಹಾರ ಮೊತ್ತ ಕಲ್ಪಿಸಲು ಸರ್ಕಾರ ಕ್ರಮವಹಿಸುತ್ತದೆ. ಅದನ್ನು ರೈತರಿಗೆ ಖಾತೆಗೆ ನೇರ ಜಮೆ ಮಾಡಲು ಫ್ರೂಟ್‌ ತಂತ್ರಾಂಶ ಬಳಸಲಾಗುತ್ತಿದೆ. ರೈತರೆಲ್ಲರೂ ಜಮೀನಿನ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸಬೇಕು. ಬಾಕಿ ಉಳಿದ ರೈತರು ನೋಂದಣಿ ಕಾರ್ಯ ತಿಂಗಳ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಇ-ಆಫೀಸ್ ಮೂಲಕವೇ ಕಡತ ವಿಲೇ ಮಾಡಿ: ಕಂದಾಯ ಇಲಾಖೆ ಕೆಲಸ ಕಾರ್ಯಗಳೆಲ್ಲವೂ ಚುರುಕುಗೊಳಿಸುವ ನಿಟ್ಟಿನಲ್ಲಿ ಇ-ಆಫೀಸ್‌ನ ವ್ಯವಸ್ಥೆ ಅಳವಡಿಸಲಾಗಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಂಪೂರ್ಣ ಬಳಸಿಕೊಳ್ಳುವ ಮೂಲಕ ಇ-ಆಫೀಸ್ ಮೂಲಕವೇ ಕಡತಗಳ ವಿಲೇ ಮಾಡಬೇಕು. ಇದರಿಂದ ವಿಳಂಭಕ್ಕೆ ವಿದಾಯ ದೊರೆಯುತ್ತದೆ. ಸರ್ಕಾರದ ಜನಪರ ಹಾಗೂ ಪಾರದರ್ಶಕ ಆಡಳಿತದ ಉದ್ದೇಶ ಸಾಕಾರಗೊಳ್ಳಲಿದೆ ಎಂದರು.

ದಾಖಲೆ ರೂಂನಲ್ಲಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಶಾಶ್ವತವಾಗಿ ದಾಖಲೆಗಳನ್ನು ಉಳಿಸಲು ಡಿಜಿಟಲಿಕರಣ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ರಾಜ್ಯ ಮಟ್ಟದಲ್ಲಿ ದಾಖಲೆಗಳ ಸೂಕ್ತ ರಕ್ಷಣೆಗೆ ಉತ್ತಮ ತಂತ್ರಾಂಶ ಅಭಿವೃದ್ಧಿಪಡಿಸಿ ರಕ್ಷಣೆ ಮಾಡಲಾಗುತ್ತಿದೆ. ಭೂ ಪರಿವರ್ತನೆ ಅರ್ಜಿಗಳಲ್ಲಿ 166 ಉಳಿದಿವೆ. ಜನಸಾಮಾನ್ಯರಿಗೆ ಸಲೀಸಾಗಿ ಅವರಿಗೆ ಸಂಬಂಧಿಸಿದ ದಾಖಲೆಗಳು ಸಿಗುವಂತೆ ಮಾಡುವುದು ಅಧಿಕಾರಿಗಳ ಕೆಲಸ ಆಗಬೇಕು ಎಂದು ಕಿವಿಮಾತು ಹೇಳಿದರು.

* ಸಾಗುವಳಿ ಚೀಟಿಗೆ ಡಿಜಿಟಲ್ ಸಹಿ

ಬಗರ್ ಹುಕುಂ ಅಡಿ ದುರ್ಬಳಕೆ ತಡೆಗಟ್ಟಲು ಮಂಜೂರಾತಿಗೆ ಡಿಜಿಟಲ್ ಸಹಿಗೆ ಅವಕಾಶ ಮಾಡಿಕೊಟ್ಟು ಸಾಗುವಳಿ ಚೀಟಿ ನೀಡಲಾಗುತ್ತದೆ. ಈ ಹಿಂದೆ ನೀಡಿದ ಸಾಗುವಳಿ ಚೀಟಿ ನೀಡಿದ ನೈಜತೆಯ ಬಗ್ಗೆ ರಾಜ್ಯದಲ್ಲಿ ಲಕ್ಷಾಂತರ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಡಿಜಿಟಲಿಕರಣ ಮಾಡಲಾಗುತ್ತಿದ್ದು ಸಿಬ್ಬಂದಿ, ಅಧಿಕಾರಿಗಳು ಕಾರ್ಯ ಹೊಂದಾಣಿಕೆಗೆ ಮುಂದಾಗಬೇಕು ಎಂದು ಡಿಸಿ ಸೂಚಿಸಿದರು.

ಜಿಲ್ಲೆಯಲ್ಲಿ 68,691 ಅರ್ಜಿ ಸಲ್ಲಿಕೆಯಾಗಿದ್ದು, 28,182 ಅರ್ಜಿಗಳು ಗ್ರಾಮ ಆಡಳಿತಧಿಕಾರಿಗಳ ಬಳಿ, 150 ಅರ್ಜಿ ಆರ್‌ಐ ಹಂತದಲ್ಲಿ, 34 ಅರ್ಜಿಗಳು ಎಸ್‌ಐಗಳ ಬಳಿ, 44 ಅರ್ಜಿಗಳು ತಹಸೀಲ್ದಾರ್ ಬಳಿ ಹಾಗೂ 62 ಅರ್ಜಿ ಸಮಿತಿಯಲ್ಲಿ ಬಾಕಿ ಇದೆ, ಅವುಗಳನ್ನು ಇತ್ಯರ್ತಗೊಳಿಸಿ ವರದಿ ನೀಡಬೇಕು ಎಂದು ತಾಕೀತು ಮಾಡಿದರು.

* ಸರ್ಕಾರಿ ಜಮೀನು ರಕ್ಷಣೆಗೆ ಆ್ಯಪ್

ಜಿಲ್ಲೆಯಲ್ಲಿ 10,34,061 ಭೂ ಮಾಲೀಕರಿದ್ದು ಅವುಗಳಲ್ಲಿ 5,70,335,೩೩೫ ಖಾಸಗಿ ಜಮೀನುಗಳ ಮಾಲೀಕರ ಆಧಾರ್ ಸೀಡಿಂಗ್ ಶೇ 91.28ರಷ್ಟು ಆಗಿದ್ದು, ಉಳಿದ ಸ್ವತ್ತುಗಳಿಗೆ ಶೀಘ್ರದಲ್ಲಿ ಆಧಾರ್ ಸೀಡಿಂಗ್ ಮಾಡಬೇಕು ಎಂದು ತಿಳಿಸಿದರು. ಸರ್ಕಾರಿ ಜಮೀನುಗಳ ರಕ್ಷಣೆಗೆ ಆ್ಯಪ್ ಸಿದ್ಧಪಡಿಸಿದ್ದು, ಸರ್ಕಾರಿ ಜಮೀನುಗಳನ್ನು ಆ್ಯಪ್ ಮೂಲಕ ಡಾಟಾಬೇಸ್‌ಅನ್ನು ಸಿದ್ಧಪಡಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಜಾಗಗಳಿಗೆ ಗ್ರಾಮ ಲೆಕ್ಕಿಗರು ಭೇಟಿ ನೀಡಿ ಭೂಮಿ ಒತ್ತುವರಿ ಆಗಿದೆಯೋ, ಇಲ್ಲವೋ ಎಂಬುವುದನ್ನು ಪರಿಶೀಲನೆ ನಡೆಸಿ ಆ್ಯಪ್ ಮೂಲಕ ಆ ಸ್ಥಳದಿಂದಲೇ ದೃಢಿಕರಿಸಿ ವರದಿ ಅಪ್‌ಲೋಡ್ ಮಾಡಬೆಕು. ಒಂದು ವೇಳೆ ಸರ್ಕಾರಿ ಜಮೀನು ಒತ್ತುವರಿ ಆಗಿದ್ದಲ್ಲಿ ಆ್ಯಪ್ ಬಳಸಿ ಆನ್‌ಲೈನ್ ಮೂಲಕವೇ ತಹಸೀಲ್ದಾರರಿಗೆ ವರದಿ ನೀಡಬೇಕು. ಇದರಿಂದಾಗಿ ಸರ್ಕಾರಿ ಆಸ್ತಿ ಉಳಿಸಬಹುದು ಎಂದು ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಂಗಳಾ, ಉಪ ವಿಭಾಗಾಽಕಾರಿ ಡಾ.ಮೈತ್ರಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net