ಆಸ್ತಿ ವಿವರ ಕೊಡುವಾಗ ಎಚ್ಚರವಹಿಸಿ

15-68d2e61a0ec83
Published on

ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮನೆ ಬಳಿ ಬರುವ ಶಿಕ್ಷಕರಿಗೆ ಕುಟುಂಬದ ಆಸ್ತಿ ವಿವರ, ಸಾಲ ಮತ್ತು ವಿದ್ಯಾಭ್ಯಾಸದ ವಿವರವನ್ನು ಸರಿಯಾಗಿ ನೀಡುವಂತೆ ರಾಜ್ಯ ಒಕ್ಕಲಿಗರ ಸಂಘ ಕರೆ ನೀಡಿದೆ. ಕುಟುಂಬದಲ್ಲಿ ಯಾರ ಹೆಸರಿಗೆ ಚರಾಸ್ತಿ ಮತ್ತು ಸ್ಥಿರಾಸ್ತಿ ದಾಖಲಾತಿಗಳು ಇವೆಯೋ ಅವರ ಹೆಸರಿಗೆ ಮಾತ್ರ ಬರೆಸಬೇಕು. ಒಟ್ಟು ಕುಟುಂಬದ ಆಸ್ತಿಯನ್ನು ಪದೇಪದೆ ಕುಟುಂಬದ ಸದಸ್ಯರ ಹೆಸರಿನಲ್ಲಿ ಬರೆಸಬಾರದು.

ಇದಲ್ಲದೆ, ಕುಟುಂಬದ ಎಲ್ಲ ಸದಸ್ಯರು ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳಿಂದ ಮತ್ತು ಬ್ಯಾಂಕಿಂಗ್​ಗೇತರ ಮೂಲಗಳಿಂದ ಪಡೆದಿರುವ ಸಾಲದ ಮಾಹಿತಿಯನ್ನು ಸಮೀಕ್ಷೆಯಲ್ಲಿ ಬರೆಸಬೇಕೆಂದು ಸಂಘ ಒಕ್ಕಲಿಗ ಸಮುದಾಯಕ್ಕೆ ಜಾಗೃತಿ ಮೂಡಿಸಿದೆ. ಕುಟುಂಬದ ಸದಸ್ಯರು ಸರ್ಕಾರಿ, ಖಾಸಗಿ ಶಿಕ್ಷಣ ವಿದ್ಯಾಸಂಸ್ಥೆಗಳಿಂದ ಕನ್ನಡ, ಆಂಗ್ಲ ಮಾಧ್ಯಮದಲ್ಲಿ ಉತ್ತೀರ್ಣವಾಗಿರುವ ವಿದ್ಯಾಭ್ಯಾಸದ ಬಗ್ಗೆ ಮಾತ್ರ ನಮೂದಿಸಬೇಕು. ಸಮೀಕ್ಷೆಗೆ ಆಧಾರ್ ಕಡ್ಡಾಯ ಆಗಿರುವ ಹಿನ್ನೆಲೆಯಲ್ಲಿ ಒಟಿಪಿ ಬರುವಂತೆ ಮಾಡಿಕೊಳ್ಳಬೇಕು. ಪ್ರವರ್ಗ 3ಎ ಅಡಿಯಲ್ಲಿ ಬರುವ ಎಲ್ಲ ಒಕ್ಕಲಿಗರು ಜಾತಿಯ ಕಾಲಂನಲ್ಲಿ ಮತ್ತು ಉಪಜಾತಿ ಕಾಲಂನಲ್ಲಿ ಸಹ ಒಕ್ಕಲಿಗ ಎಂದು ಬರೆಸಿ ಒಗ್ಗಟ್ಟು ಪ್ರದರ್ಶಿಸಬೇಕು. ಸಮೀಕ್ಷೆಯಲ್ಲಿ 60 ಪ್ರಶ್ನಾವಳಿ ಇರಲಿದ್ದು, ಎಲ್ಲ ಪ್ರಶ್ನೆಗಳಿಗೆ ಕುಟುಂಬ ಸದಸ್ಯರು ಮಾಹಿತಿ ನೀಡಬೇಕೆಂದು ಒಕ್ಕಲಿಗ ಸಂಘ ಸಲಹೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net