ಮಲೇರಿಯಾ ಬಗ್ಗೆ ಎಚ್ಚರಿಕೆಯಿರಲಿ

bhr maleria
ಬಾಳೆಹೊನ್ನೂರು ಸಮೀಪದ ಅಂಡವಾನೆಯಲ್ಲಿ ಮಾಗುಂಡಿಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಯಿತು. ಡಾ.ಮಂಜೇಶ್, ಪಿಂಟೋ ಭರತ್, ಭಗವಾನ್ ಇದ್ದರು.
Published on

ಬಾಳೆಹೊನ್ನೂರು: ಮಳೆಗಾಲದ ಸಂದರ್ಭದಲ್ಲಿ ಹರಡುವ ಮಲೇರಿಯಾ ರೋಗದ ಕುರಿತು ಸಾರ್ವಜನಿಕರು ಭಯಪಡದೆ ಎಚ್ಚರಿಕೆಯಿಂದ ಇರಬೇಕು ಎಂದು ಮಾಗುಂಡಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಂಜೇಶ್ ಹೇಳಿದರು.
ಸಮೀಪದ ಅಂಡವಾನೆಯ ಸಮುದಾಯ ಭವನದಲ್ಲಿ ಮಾಗುಂಡಿ ಆರೋಗ್ಯ ಕೇಂದ್ರದಿಂದ ಸೋಮವಾರ ಆಯೋಜಿಸಿದ್ದ ಮಲೇರಿಯಾ ವಿರೋಧಿ ಮಾಸಾಚರಣೆಯಲ್ಲಿ ಅವರು ಮಾತನಾಡಿದರು.
ಮಲೇರಿಯಾ ರೋಗವು ಪಾಸ್ಮೋಡಿಯಂ ಎಂಬ ಸೂಕ್ಷ್ಮಾಣುವಿನಿಂದ ಉಂಟಾಗುವ ರೋಗವಾಗಿದ್ದು ಅನಾಫಿಲಿಸ್ ಹೆಣ್ಣು ಸೊಳ್ಳೆಯಿಂದ ಒಬ್ಬರಿಂದ ಒಬ್ಬರಿಗೆ ಹರಡಲಿದೆ. ಈ ಸೊಳ್ಳೆ ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದರೆ 5ರಿಂದ 15 ದಿನದೊಳಗೆ ಆ ವ್ಯಕ್ತಿಗೆ ಚಳಿಜ್ವರ ಆರಂಭವಾಗಲಿದೆ.
ಯಾವುದೇ ಜ್ವರವಿದ್ದರೂ ಸಹ ರೋಗಿಯ ರಕ್ತ ಪರೀಕ್ಷೆಯ ನಂತರವೇ ಮಲೇರಿಯಾ ಎಂದು ದೃಢಪಡಿಸಲು ಸಾಧ್ಯವಿದೆ. ಮಲೇರಿಯಾ ರೋಗ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡು ರೋಗಿಯ ವಯಸ್ಸಿಗನುಗುಣವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು.
ವೈದ್ಯಾಧಿಕಾರಿ ಪಿಂಟೋ ಭರತ್ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮನೆಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಕೀಟನಾಶಕಗಳನ್ನು ಸಿಂಪಡಿಸುವುದು. ಸೊಳ್ಳೆ ಬತ್ತಿಗಳನ್ನು ಉಪಯೋಗಿಸುವ ಮೂಲಕ ಮಲೇರಿಯಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು. ಹಿರಿಯ ಆರೋಗ್ಯ ನಿರೀಕ್ಷಕ ಭಗವಾನ್, ಪ್ರಮುಖರಾದ ಶಿಲ್ಪಾ, ರೂಪಾ, ಅಜಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net