ಕ್ಷಯರೋಗ ಹರಡದಂತೆ ಜಾಗ್ರತೆ ವಹಿಸಿ

tb
ಶಿವಮೊಗ್ಗದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಾಥಾಕ್ಕೆ ಡಿಎಚ್‌ಒ ಡಾ. ಕೆ.ಎಸ್.ನಟರಾಜ್ ಚಾಲನೆ ನೀಡಿದರು. ಡಾ. ಎಸ್.ಶ್ರೀಧರ್, ಬಿ.ಪಿ.ನಾಗೇಶ್, ಡಾ. ರಾಜೀವ್, ಎಸ್.ಕುಮಾರ್, ಡಾ. ಚಂದ್ರಶೇಖರ್ ಇದ್ದರು.
Published on

ಶಿವಮೊಗ್ಗ: ಕ್ಷಯರೋಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಎಲ್ಲರೂ ಜಾಗ್ರತೆ ವಹಿಸಬೇಕು. ಭಾರತದಲ್ಲಿ ಪ್ರತಿದಿನ ಆರು ಸಾವಿರ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ದಿನಕ್ಕೆ 600 ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ಡಿಎಚ್‌ಒ ಡಾ. ಕೆ.ಎಸ್.ನಟರಾಜ್ ಹೇಳಿದರು.

ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಸೈಕಲ್ ಹಾಗೂ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಮ್ಮುವಾಗ, ಸೀನಿದಾಗ ಗಾಳಿ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಕ್ಷಯರೋಗ ಹರಡುತ್ತದೆ. ಸತತ ಎರಡು ವಾರಗಳ ಕಾಲ ಕೆಮ್ಮು ಮತ್ತು ಕಫ, ಸಂಜೆ ವೇಳೆಗೆ ಜ್ವರ, ಎದೆನೋವು, ರಾತ್ರಿವೇಳೆ ಬೆವರುವುದು, ತೂಕ ಕಡಿಮೆಯಾಗುವುದು ಹಾಗೂ ಕೆಲವೊಮ್ಮೆ ಕಫದಲ್ಲಿ ರಕ್ತ ಬರುವುದು ಕ್ಷಯರೋಗದ ಲಕ್ಷಣಗಳು ಎಂದು ತಿಳಿಸಿದರು.

ಖಾಸಗಿ ಸಂಸ್ಥೆಗಳಿಂದಲೂ ಪ್ರತಿ ತಿಂಗಳು ಕ್ಷಯರೋಗದ ವರದಿ ತರಿಸಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 2024ರಲ್ಲಿ ಒಟ್ಟು 446 ಜನರಲ್ಲಿ ಕ್ಷಯ ಕಾಣಿಸಿಕೊಂಡಿದೆ. ಟಿಬಿ ಪ್ರಕರಣಗಳಿರುವ ಮನೆಗಳೊಂದಿಗೆ ಸಂಪರ್ಕದಲ್ಲಿರುವವರಿಗೆ ಸಿವೈಟಿಬಿ ಪರೀಕ್ಷೆ ಮಾಡಿ ಸೋಂಕಿತರಿಗೆ ಟಿಪಿಟಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಬಿ.ಪಿ.ನಾಗೇಶ್ ಮಾತನಾಡಿ, 2024ರ ಡಿ.7ರಿಂದ ಈ ವರ್ಷ ಮಾ.17ರವರೆಗೆ ಜಿಲ್ಲೆಯಲ್ಲಿ 100 ದಿನಗಳ ತೀವ್ರತರ ಕ್ಷಯರೋಗ ಆಂದೋಲನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 4,38,621 ಶಂಕಿತರನ್ನು ತಪಾಸಣೆ ನಡೆಸಲಾಯಿತು, 6,672 ಶಂಕಿತರಿಗೆ ಎಕ್ಸ್-ರೇ ಪರೀಕ್ಷೆ ಮಾಡಿ 355 ಮಂದಿಯಲ್ಲಿ ರೋಗ ಪತ್ತೆ ಮಾಡಲಾಯಿತು. ಅವರಿಗೆ ಡಾಟ್ಸ್ ಚಿಕಿತ್ಸೆ ಆರಂಭಿಸಲಾಗಿದೆ ಎಂದು ಹೇಳಿದರು.

2024ರಲ್ಲಿ 70,339 ಶಂಕಿತರಿಗೆ ಕಫ ಪರೀಕ್ಷೆ ಮಾಡಿಸಿ ಅದರಲ್ಲಿ 1,398 ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದ್ದು, 54 ಎಂಡಿಆರ್ ರೋಗಿಗಳನ್ನು ಪತ್ತೆಹಚ್ಚಿ ಚಿಕಿತ್ಸೆ ಆರಂಭಿಸಲಾಗಿದೆ. ಕ್ಷಯರೋಗವನ್ನು ಶೀಘ್ರ ಪತ್ತೆಹಚ್ಚುವ ಅತ್ಯಾಧುನಿಕ ಸಿಬಿಎನ್‌ಎಎಟಿ ಪ್ರಯೋಗಾಲಯವನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಹಾಗೂ 10 ಟ್ರೂೃನಾಟ್ ಯಂತ್ರಗಳನ್ನು ಸಾರ್ವಜನಿಕ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.

ಡಬ್ಲುೃಎಚ್‌ಒ ಪ್ರತಿನಿಧಿ ಡಾ. ರಾಜೀವ್, ಐಎಂಎ ಅಧ್ಯಕ್ಷ ಡಾ. ಎಸ್.ಶ್ರೀಧರ್, ಟಿಎಚ್‌ಒ ಡಾ. ಚಂದ್ರಶೇಖರ್, ಕ್ಷಯರೋಗ ನಿಯಂತ್ರಣ ಮೇಲ್ವಿಚಾರಕ ಎಸ್.ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net