

ಬೆಂಗಳೂರು: ಅಬಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಅಧಿಕಾರಿಗಳ ವಿಚಾರಣೆ ನಡೆದಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಕರ್ತವ್ಯಲೋಪವಾಗದಂತೆ ಎಚ್ಚರಿಕೆ ವಹಿಸಿ ಎಂದು ಸೂಚಿಸಿದ್ದಾರೆ.
ಅಬಕಾರಿ ಇಲಾಖೆಯ ನಗರದ ೩ ಉಪ ಜಿಲ್ಲಾ ಕಚೇರಿಗಳಲ್ಲಿನ ಕರ್ತವ್ಯ ಲೋಪದ ಬಗ್ಗೆ ಅಧಿಕಾರಿ ಮತ್ತು ಸಿಬ್ಬಂದಿಯ ವಿಚಾರಣೆಯನ್ನು ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆಸಿದರು.
ಮದ್ಯ ಮಾರಾಟ ಪರವಾನಗಿ ನೀಡುವಲ್ಲಿ ಲಂಚಕ್ಕೆ ಬೇಡಿಕೆ ಮತ್ತು ವಿಳಂಬ ಸಂಬಂಧ ಬಂದಿದ್ದ ದೂರುಗಳ ಆಧಾರದ ಮೇಲೆ ಲೋಕಾಯುಕ್ತರು, ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ, ಬಿ.ವೀರಪ್ಪ ಮತ್ತು ಲೋಕಾಯುಕ್ತ ಪೊಲೀಸರು ೨೦೨೪ರ ಸೆ. ೨೪ರಂದು ಅಬಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.
ದಾಳಿ ನಡೆದ ಸಂದರ್ಭದಲ್ಲಿ ಅಬಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳು ಮಾಹಿತಿ ನಮೂದಿಸದೆಯೇ ಕಚೇರಿಯಿಂದ ಹೊರಹೋಗಿದ್ದು, ಹಾಜರಾತಿ ಮತ್ತು ನಗದು ವಹಿ ನಿರ್ವಹಣೆ ಮಾಡದೇ ಇದ್ದದ್ದು ಹಾಗೂ ಕಚೇರಿಯಲ್ಲಿ ಮದ್ಯ ಕುಡಿದ್ದದ್ದು ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತರು ೨೦೨೫ರ ಮಾರ್ಚ್ ೨೯ರಂದು ವಿಚಾರಣೆ ನಡೆಸಿದ್ದರು.
ಬುಧವಾರ ಎರಡನೇ ಹಂತದಲ್ಲಿ ಬೆಂಗಳೂರು ಅಬಕಾರಿ ಜಿಲ್ಲೆ ೫, ೬ ಮತ್ತು ೮ರ ಪ್ರಕರಣಗಳ ವಿಚಾರಣೆ ನಡೆಸಿದ್ದು, ದಾಳಿಯ ವೇಳೆ ಪತ್ತೆಯಾಗಿದ್ದ ನ್ಯೂನತೆಗಳನ್ನು ಸರಿಪಡಿಸಿದ್ದೇವೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಲೋಕಾಯುಕ್ತರಿಗೆ ವರದಿ ಸಲ್ಲಿಸಿದರು. ವರದಿಗಳನ್ನು ಪರಿಶೀಲಿಸಿ, ಅವುಗಳಲ್ಲಿ ಸಮಂಜಸ ಎನಿಸಿದ ವಿವರಣೆ ನೀಡಿದ್ದ ಅಧಿಕಾರಿಗಳ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಲಾಯಿತು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
೨೦೨೪-೨೫ನೇ ಸಾಲಿನಲ್ಲಿ ನೂತನ ಸನ್ನದು, ಸನ್ನದು ನವೀಕರಣ, ಹೆಸರು ಬದಲಾವಣೆ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳು ಹಾಗೂ ಅವುಗಳ ಸ್ಥಿತಿಗತಿಯ ಮಾಹಿತಿ ಇರುವ ವರದಿಯನ್ನು ಜೂನ್ ೨೪ರಂದು ಸಲ್ಲಿಸಿ ಎಂದು ಅಬಕಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.