

ಹೂವಿನಹಡಗಲಿ: ಪಟ್ಟಣದಲ್ಲಿ ಈಗಾಗಲೆ ಡೆಂಘೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರು ತಮ್ಮ ಸುತ್ತಲಿನ ಸ್ಥಳವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದು ಟಿಎಚ್‌ಒ ಡಾ.ಸ್ವಪ್ನಾ ಕಟ್ಟಿ ಹೇಳಿದರು.
ಪಟ್ಟಣದ ಕಲ್ಲೇಶ್ವರ ದೇವಸ್ಥಾನದ ಬಳಿ ಪುರಸಭೆ ಮತ್ತು ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಡಯೇರಿಯಾ, ಡೆಂಘೆ ಜಾಗೃತಿ ಅಭಿಯಾನದಲ್ಲಿ ಶುಕ್ರವಾರ ಮಾತನಾಡಿದರು.
ಈಗಾಗಲೇ ತಾಲೂಕಿನ ಪ್ರತಿಹಳ್ಳಿಯಲ್ಲಿ ಈಡಿಸ್ ಲಾರ್ವಾ ತಾಣಗಳ ನಾಶಕ್ಕೆ ಇಲಾಖೆಯಿಂದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪಟ್ಟಣದಲ್ಲಿ ಬಹುತೇಕ ಮನೆಗಳಲ್ಲಿ ತೆರೆದ ಬಿಂದಿಗೆ ಹಾಗೂ ಡ್ರಮ್‌ಗಳಲ್ಲಿ ನೀರನ್ನು ಶೇಖರಿಸಿಕೊಳ್ಳಲಾಗುತ್ತಿದೆ. ಇದು ಲಾರ್ವಾ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಸಾರ್ವಜನಿಕರು ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಅಲ್ಪಪ್ರಮಾಣದಲ್ಲಿ ಸುಸ್ತು, ಜ್ವರ ಕಾಣಿಸಿಕೊಂಡರೆ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎರಡು ದಿನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜ್ವರ ಕಂಡು ಬಂದ ರೋಗಿಗಳಿಗೆ ರಕ್ತ ಪರೀಕ್ಷೆ ಮಾಡುವ ಮೂಲಕ ಇಲಾಖೆ ಸಿಬ್ಬಂದಿಗಳು ಮಲೇರಿಯ ಮತ್ತು ಡೆಂಘೆ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು. ತಾಲೂಕಿನಲ್ಲಿ 13 ಡೆಂಘೆ ಪ್ರಕರಣಗಳು ಪತ್ತೆಯಾಗಿವೆ. 15 ವರ್ಷದೊಳಗಿನ 4 ಮಕ್ಕಳಿಗೆ ಹಾಗೂ 7 ಜನ ಮಹಿಳೆಯರು 2 ಪುರುಷರಿಗೆ ಕಾಣಿಸಿಕೊಂಡಿದ್ದು. ಎಲ್ಲಾ ರೋಗಿಗಳಲ್ಲಿಗೆ ವಿಶೇಷ ಚಿಕಿತ್ಸಾ ಕೇಂದ್ರ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಇಮಾಮ್ ಸಾಹೇಬ್, ಹಿರಿಯ ಆರೋಗ್ಯ ನಿರೀಕ್ಷಕ ಮಾರುತಿ, ಕಿರಿಯ ಆರೋಗ್ಯ ನಿರೀಕ್ಷಕ ಸೋಮಶೇಖರ ಇತರರಿದ್ದರು.