ಲಾರ್ವಾ ಸರ್ವೆ, ಲೆಕ್ಕಕ್ಕುಂಟು ಆಟಕ್ಕಿಲ್ಲ !; ಜಿಪಿಎಸ್ ಇಲ್ಲದ ಫೋಟೊ ತೋರಿಸಿ ಸರ್ಕಾರಕ್ಕೆ ಮೋಸ; ಡೆಂಘೆ ಹೆಚ್ಚಳಕ್ಕೆ ಇದೂ ಒಂದು ಕಾರಣ

Larva Servey Story
Published on

ಕೇಶವಮೂರ್ತಿ ವಿ.ಬಿ. ಹಾವೇರಿ
ಮನೆ ಮನೆ ಸಮೀಕ್ಷೆ ಮಾಡಿ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸುತ್ತಿದ್ದೇವೆ ಎಂದು ಘಂಟಾಘೋಷವಾಗಿ ಹೇಳಿಕೊಳ್ಳುವ ಆರೋಗ್ಯ ಇಲಾಖೆ ತಂತ್ರಜ್ಞಾನದ ಈ ಯುಗದಲ್ಲೂ ಜಿಪಿಎಸ್ ಇಲ್ಲದ ಹಳೆಯ ಫೋಟೋಗಳನ್ನೇ ತೋರಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಮೋಸ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಹಾಗಾಗಿ, ಲಾರ್ವಾ ಸರ್ವೆ, ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಾಗಿದೆ.
ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಡೆಂಘೆ, ಮಲೇರಿಯಾ, ಚಿಕೂನ್ ಗುನ್ಯಾ, ಇನ್ನಿತರ ಕಾಯಿಲೆಗಳ ನಿಯಂತ್ರಣಕ್ಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿ ಷರ್ವವೂ ಕೋಟ್ಯಂತರ ರೂ. ಖರ್ಚು ಮಾಡುತ್ತದೆ. ಮಳೆಗಾಲ ಶುರುವಾದರೆ ಸಾಕು ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡಗಳನ್ನು ರಚಿಸಿ ಮನೆ ಮನೆ ಲಾರ್ವಾ ಸರ್ವೆ ನಡೆಸುತ್ತಿರುವುದಾಗಿ ಹೇಳುತ್ತದೆ. ಜಿಪಿಎಸ್ ಇಲ್ಲದ ಫೋಟೋಗಳನ್ನು ಲಗತ್ತಿಸಿ, ಕೋಟಿ ಕೋಟಿ ಬಿಲ್ ಪಡೆಯುತ್ತಿದೆ. ರಾಜ್ಯದಲ್ಲಿ ಡೆಂಘೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುವುದಕ್ಕೆ ಇದೂ ಒಂದು ಕಾರಣ ಎಂಬ ಆರೋಪವಿದೆ.
ಹೀಗೆ ಲಾರ್ವಾ ಸಮೀಕ್ಷೆ ಮಾಡುವಾಗ ಹಲವು ಸಿಬ್ಬಂದಿ ಜಿಪಿಎಸ್ ಇಲ್ಲದೇ ಹಳೆಯ ಫೋಟೋಗಳನ್ನೇ ತೋರಿಸಿ, ಕಳ್ಳಾಟ ಆಡುತ್ತಿದ್ದಾರೆ. ಲಾರ್ವಾ ಸರ್ವೆಗೆ ಹಾಜರಾಗಿರುವುದಾಗಿ ಬೇರೆ ವೈಯಕ್ತಿಕ ಕೆಲಸದಲ್ಲಿ ತೊಡಗುತ್ತಾರೆ. ಸರ್ವೆ ಮಾಡುವವರ ಮೇಲೆ ಮೇಲಧಿಕಾರಿಗಳು ನಿಗಾ ಇಡುವುದಿಲ್ಲ. ಹೀಗಾಗಿ, ಲಾರ್ವಾ ಸರ್ವೆ ಕಾರ್ಯ ಗಂಭೀರತೆ ಪಡೆದಿಲ್ಲ.
ಈ ಸಮಸ್ಯೆ ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಕಡೆ ಜೀವಂತವಾಗಿದೆ. ಇದರಿಂದ ಡೆಂಘೆ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ಇದನ್ನು ರಾಜ್ಯ ಸರ್ಕಾ ಗಂಭೀರವಾಗಿ ಪರಿಗಣಿಸಿ, ಈ ಸಮಸ್ಯೆಗೆ ತಿಲಾಂಜಲಿ ಇಡಬೇಕಿದೆ.
ಒಂದೇ ಜಿಲ್ಲೆಗೆ 11.64 ಲಕ್ಷ ಖರ್ಚು
ಹಾವೇರಿ ಜಿಲ್ಲೆಯೊಂದರಲ್ಲೇ 2023-24ರಲ್ಲಿ ಲಾರ್ವಾ ಸಮೀಕ್ಷೆಗಾಗಿ ಬರೋಬ್ಬರಿ 11,64,550 ರೂ. ಖರ್ಚು ಮಾಡಲಾಗಿದೆ. ಒಂದು ಜಿಲ್ಲೆಯಲ್ಲೇ ಇಷ್ಟು ಹಣ ಖರ್ಚಾದರೆ, ಉಳಿದ ಜಿಲ್ಲೆಗಳು ಸೇರಿ ಕೋಟ್ಯಂತರ ರೂ. ಬಿಲ್ ಗುಳುಂ ಮಾಡಿರುವ ಗುರುತರ ಆರೋಪ ಕೇಳಿಬಂದಿದೆ.
ಯಾರಿಗೆ ಎಷ್ಟು ಬಿಲ್ ?
ನಗರ ಪ್ರದೇಶದಲ್ಲಿ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶುಕ್ರವಾರ ಆರೋಗ್ಯ ನಿರೀಕ್ಷಣಾಧಿಕಾರಿಗಳು (ಎಚ್‌ಐಒ) ಮತ್ತು ಆರೋಗ್ಯ ಸುರಕ್ಷತಾಧಿಕಾರಿಗಳು (ಪಿಎಚ್‌ಸಿಒ) ಲಾರ್ವಾ ಸಮೀಕ್ಷೆ ನಡೆಸುತ್ತಾರೆ. ಇವರಿಗೆ ಒಬ್ಬರಿಗೆ ಒಂದು ಶುಕ್ರವಾರಕ್ಕೆ 150ರಂತೆತಿಂಗಳಿಗೆ 300 ರೂ. ಕೊಡಲಾಗುತ್ತದೆ. ಹೀಗೆ ಕಳೆದ ವರ್ಷ ಹಾವೇರಿ ಜಿಲ್ಲೆಯಲ್ಲಿ ಒಟ್ಟು 9,37,150 ರೂ. ಜಮೆ ಮಾಡಲಾಗಿದೆ. ನಗರದಲ್ಲಿ ಪ್ರತಿ ಆಶಾ ಕಾರ್ಯಕರ್ತೆಗೆ ಪ್ರತಿ ತಿಂಗಳಿಗೆ 200 ರೂ.ಯಂತೆ ಜಮೆ ಮಾಡಲಾಗುತ್ತದೆ. ಇವರಿಗೆ ಕಳೆದ ವರ್ಷ ಹಾವೇರಿ ಜಿಲ್ಲೆಯ 2,27,400 ರೂ. ಖರ್ಚು ಭರಿಸಲಾಗಿದೆ ಎಂದು ಆರೋಗ್ಯ ಇಲಾಖೆ ದಾಖಲಿಸಿದೆ.

ಕೋಟ್:
ಅನಕ್ಷರಸ್ಥರೂ ಜಿಪಿಎಸ್ ಫೋಟೋ ಬಳಸುವ ಕಾಲದಲ್ಲಿ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಮಾತ್ರ ಜಿಪಿಎಸ್ ಫೋಟೋ ಬಳಸುವುದಿಲ್ಲ. ನಾಲ್ಕೈದು ಕಡೆ ಭೇಟಿ ಕೊಟ್ಟು, ಹಳೆಯ ಫೊಟೋಗಳನ್ನೇ ತೋರಿಸಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಇಲಾಖೆಯ ಇಂತಹ ದಿವ್ಯ ನಿರ್ಲಕ್ಷೃದಿಂದಲೇ ಡೆಂಘೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರ ಇದಕ್ಕೆ ಬ್ರೇಕ್ ಹಾಕಬೇಕು.
- ಹನುಮಂತಪ್ಪ ಕಬ್ಬಾರ, ಆಮ್ ಆದ್ಮಿ ಜಿಲ್ಲಾಧ್ಯಕ್ಷ, ಹಾವೇರಿ

ಕೋಟ್:
ಜಿಪಿಎಸ್ ಟ್ಯಾಗ್ ಫೋಟೋ ಕಡ್ಡಾಯಗೊಳಿಸುವ ‘ವಿಜಯವಾಣಿ’ ಸಲಹೆ ಉತ್ತಮವಾಗಿದ್ದು, ಇನ್ನುಮುಂದೆ ಜಿಪಿಎಸ್ ಫೋಟೋ ದಾಖಲಿಸುವಂತೆ ಕಡ್ಡಾಯಗೊಳಿಸಲಾಗುವುದು.
- ಡಾ.ಎಂ.ಜಯಾನಂದ, ಡಿಎಚ್‌ಒ, ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net