

ಬೆಂಗಳೂರು: ಫೇಕ್ ನ್ಯೂಸ್‌ಗಳ ಸೃಷ್ಟಿ ಮತ್ತು ಹರಡುವಿಕೆಯನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಯಾರೂ ಕೂಡ ಅಂತಹ ಕಾನೂನುಬಾಹಿರ ಕೃತ್ಯಕ್ಕೆ ಕೈಹಾಕಬಾರದು ಎಂದು ಹಲವು ಬಾರಿ ಎಚ್ಚರಿಕೆ ನೀಡಿದ್ದೆವು. ಆದರೂ ನನ್ನ ವಿರುದ್ಧವೇ ಸುಳ್ಳು ಸುದ್ದಿ ಸೃಷ್ಟಿಸಿ, ಜನರ ದಾರಿ ತಪ್ಪಿಸಲು ಯತ್ನಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಬಿಜೆಪಿ, ಜೆಡಿಎಸ್ ಮಿತ್ರಮಂಡಳಿ ಕೃಪಾಪೋಷಿತ ಕಿಡಿಗೇಡಿಗಳು ವಾರ್ತಾಪತ್ರಿಕೆಯನ್ನು ಹೋಲುವ ಸುಳ್ಳು ಸುದ್ದಿಯ ತುಣುಕೊಂದನ್ನು ಸೃಷ್ಟಿಸಿ, ಅದರಲ್ಲಿ ಜನರ ಕೋಮುಭಾವನೆ ಕೆರಳಿಸುವ ಸುದ್ದಿಯನ್ನು ತುಂಬಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಈಗಾಗಲೇ ನಾನು ಪೊಲೀಸ್ ಇಲಾಖೆಗೆ ದೂರು ನೀಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ರಾಜಕೀಯ ವಿರೋಧಿಗಳನ್ನು ನ್ಯಾಯಸಮ್ಮತ ರೀತಿಯಲ್ಲಿ ಎದುರಿಸಲಾಗದೆ ಇಂತಹ ಅಡ್ಡದಾರಿ ಮೂಲಕ ಚುನಾವಣೆ ಗೆಲ್ಲಲು ಹೊರಟಿರುವುದು ಬಿಜೆಪಿ ಮತ್ತು ಜೆಡಿಎಸ್‌ನ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಹತ್ತು ವರ್ಷಗಳ ಕಾಲ ದೇಶದ ಆಡಳಿತ ನಡೆಸಿದ ಪಕ್ಷವೊಂದು ಚುನಾವಣೆ ಗೆಲ್ಲಲು ಸುಳ್ಳು ಸುದ್ದಿಯ ಮೊರೆ ಹೋಗುವಂತಹ ಹೀನಾಯ ಸ್ಥಿತಿಗೆ ತಲುಪಬಾರದಿತ್ತು ಎಂದು ಕುಟುಕಿದ್ದಾರೆ.
ಜತೆಗೆ ಸುಳ್ಳು ಸುದ್ದಿಗಳನ್ನು ನಂಬಿ ಶೇರ್ ಮಾಡುವ ಮುನ್ನ ಎಚ್ಚರಿಕೆ ವಹಿಸಿ ಎಂದು ಕರೆ ನೀಡಿದ್ದು, ಸುಳ್ಳು ಸುದ್ದಿಯ ಸೃಷ್ಟಿಕರ್ತರು, ಅವರ ಬೆನ್ನ ಹಿಂದೆ ಬೆಂಬಲಕ್ಕೆ ನಿಂತಿರುವವರು ಹೀಗೆ ಫೇಕ್ ಫ್ಯಾಕ್ಟರಿಯನ್ನು ಕಾನೂನಿನ ಮೂಲಕ ಬೇರು ಸಹಿತ ಕಿತ್ತೆಸೆಯುತ್ತೇವೆ ಎಂದು ಹೇಳಿದ್ದಾರೆ.