ರಸಗೊಬ್ಬರಗಳ ಕಲಬೆರಕೆ ಬಗ್ಗೆ ಎಚ್ಚರ ವಹಿಸಿ: ಡಾ.ಗಣಪತಿ

Soil Science Department
ಶಿಕಾರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ರಸಗೊಬ್ಬರ ಕಲಬೆರಕೆ ಪತ್ತೆ ವಿಧಾನಗಳ ಕುರಿತು ಕೃಷಿ ಮಹಾವಿದ್ಯಾಲಯದ ಮಣ್ಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಗಣಪತಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಡಾ. ಅರುಣ್‌ಕುಮಾರ್ ಇದ್ದರು.
Published on

ಶಿವಮೊಗ್ಗ: ರಸಗೊಬ್ಬರಗಳ ಕಲಬೆರಕೆಯಿಂದ ರೈತರು ಭೂಮಿಗೆ ಅಗತ್ಯ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸಲು ವಿಫಲರಾಗುತ್ತಿದ್ದಾರೆ ಎಂದು ಇರುವಕ್ಕಿ ಕೃಷಿ ಮಹಾವಿದ್ಯಾಲಯದ ಮಣ್ಣು ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಹೇಳಿದರು.

ಶಿಕಾರಿಪುರ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೃಷಿ ಗ್ರಾಮೀಣ ಕಾರ್ಯಾನುಭದ ಅಂಗವಾಗಿ ರಸಗೊಬ್ಬರ ಕಲಬೆರಕೆ ಪತ್ತೆ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ರಸಗೊಬ್ಬರದ ಮೇಲೆ ಭಾರಿ ವೆಚ್ಚ ಮಾಡುತ್ತಿದ್ದಾರೆ. ಜತೆಗೆ ಕಳಪೆ ರಸಗೊಬ್ಬರ ಮಾರಾಟಗಾರರ ವಂಚನೆಗೆ ಒಳಗಾಗುತ್ತಿದ್ದಾರೆ. ಯೂರಿಯಾ ಬಳಕೆಯಿಂದ ಗಿಡಗಳು ಹಸಿರಾಗುತ್ತವೆ ಮತ್ತು ಅವುಗಳ ಬೆಳವಣಿಗೆ ವೇಗವಾಗಿರುತ್ತದೆ. ಪೊಟ್ಯಾಶ್ ಬಳಸುವುದರಿಂದ ಗಿಡಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು. ಇದರಿಂದ ಮಣ್ಣಿನಲ್ಲಿ ಕೊರತೆಯಿರುವ ಪೋಷಕಾಂಶಗಳನ್ನು ಒದಗಿಸಲು ಸಹಕಾರಿ ಆಗಲಿದೆ ಎಂದು ಹೇಳಿದರು.

ರಸಗೊಬ್ಬರದ ಚೀಲ ಖರೀದಿಸುವಾಗ ಪ್ಯಾಕ್ ಮಾಡಿದ ದಿನಾಂಕ, ಅದರ ಪ್ರಮಾಣ, ತೂಕ, ಚೀಲದ ಯಂತ್ರದ ಹೊಲಿಗೆ ಮತ್ತು ಗೊಬ್ಬರದ ಪೋಷಕಾಂಶಗಳ ಮಾಹಿತಿ ಗಮನಿಸಬೇಕು ಎಂದರು.

ಸುಮಾರು 20 ರಸಗೊಬ್ಬರಗಳಿಂದ ಸಿಗುವ ಪೋಷಕಾಂಶಗಳು ಮತ್ತು ಅವುಗಳ ಪ್ರಮಾಣ ಹಾಗೂ ರಸಗೊಬ್ಬರ ಕಲಬೆರಕೆ ಪತ್ತೆ ವಿಧಾನಗಳ ಪ್ರಾತ್ಯಕ್ಷಿಕೆ ತೋರಿಸಿದರು. ಗ್ರಾಮಸ್ಥರು ಸಂಪನ್ಮೂಲ ವ್ಯಕ್ತಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಂಡು ಸಂದೇಹಗಳನ್ನು ಬಗೆಹರಿಸಿಕೊಂಡರು. ವಿಸ್ತರಣಾ ವಿಭಾಗದ ಡಾ. ಅರುಣ್‌ಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net