

ದೇಶದ ವಿವಿಧ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಮಂಗಳವಾರ ಭೇದಿಸಿದ್ದು, ಅಕ್ರಮ ವ್ಯವಹಾರದ ಮತ್ತೊಂದು ಮುಖ ತೆರೆದುಕೊಂಡಿದೆ. ಬೆಂಗಳೂರಿನ ವಿವಿಧ ಕಾಲೇಜುಗಳಿಗೆ ತೆರಳುತ್ತಿದ್ದ ಆರೋಪಿಗಳು, ಅಲ್ಲಿನ ಅಟೆಂಡರ್ಗಳಿಗೆ ಹಣ ಕೊಟ್ಟು, ಅನುತ್ತೀರ್ಣ ವಿದ್ಯಾರ್ಥಿಗಳ ಮಾಹಿತಿ ಪಡೆಯುತ್ತಿದ್ದರು. ನಂತರ ಅಂತಹ ಕೆಲವು ವಿದ್ಯಾರ್ಥಿಗಳನ್ನು ಸಂರ್ಪಸಿ, ‘ವೃಥಾ ಏಕೆ ಕಷ್ಟಪಟ್ಟು ಓದಬೇಕು? ಅನಾಯಾಸವಾಗಿ ನಿಮಗೆ ಅಂಕಪಟ್ಟಿ ಮತ್ತು ಪ್ರಮಾಣಪತ್ರ ಕೊಡಿಸುತ್ತೇವೆ’ ಎಂದು ಆಮಿಷ ಒಡ್ಡುತ್ತಿದ್ದರು. ತಲಾ ಅಂಕಪಟ್ಟಿಗೆ 25ರಿಂದ 40 ಸಾವಿರ ರೂ.ವರೆಗೆ ಹಣ ಪಡೆದು ನೈಜ ಅಂಕಪಟ್ಟಿ ಎಂದು ನಂಬಿಸಿ ಕೊಡುತ್ತಿದ್ದರು. ವಿದ್ಯಾರ್ಥಿ ಯಾವ ವಿಶ್ವವಿದ್ಯಾಲಯದ ಅಂಕಪಟ್ಟಿ ಕೇಳುತ್ತಾನೋ ಆ ವಿವಿಯ ಅಂಕಪಟ್ಟಿಯನ್ನು ನಕಲು ಮಾಡಿ ಕೊಡುತ್ತಿದ್ದರು. ಈ ಆಸಾಮಿಗಳು ಎಂಥ ಚಾಲಾಕಿಗಳು ಎಂದರೆ, ಈಗಾಗಲೇ ಮುಚ್ಚಿರುವ ವಿಶ್ವವಿದ್ಯಾಲಯದ ಹೆಸರಿನಲ್ಲೂ ಮಾರ್ಕ್ಸ್ ಕಾರ್ಡ್ ನೀಡುತ್ತಿದ್ದರು. ಬೆಂಗಳೂರಿನ ಕಾಲೇಜೊಂದರ ಬಳಿ ಆರೋಪಿಗಳು ಮಿಕಗಳಿಗಾಗಿ ಹುಡುಕಾಡುತ್ತಿದ್ದಾಗ, ಆಡಳಿತ ಮಂಡಳಿಯವರಿಗೆ ಅನುಮಾನ ಬಂದು ಪೊಲೀಸರಿಗೆ ತಿಳಿಸಿದಾಗ ನಕಲಿ ಜಾಲ ಬಯಲಿಗೆ ಬಂದಿದೆ.
ಬಂಧಿತರ ಪೈಕಿ ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರೆ, ಇನ್ನೊಬ್ಬ ಎಂಬಿಎ ಪದವೀಧರ. ತಂತ್ರಜ್ಞಾನ ಬಳಕೆಯಲ್ಲಿ ಪರಿಣತರಾದ ಇವರು ದುರುದ್ದೇಶಕ್ಕೆ ಇದನ್ನು ಬಳಸಿಕೊಂಡಿದ್ದು ಅಕ್ಷಮ್ಯ. ಉನ್ನತ ಶಿಕ್ಷಣ ಪಡೆದವರು ಸಹ ಹಣದಾಸೆಗಾಗಿ ಇಂಥ ಕೆಲಸಕ್ಕಿಳಿಯುವುದು ವಿಪರ್ಯಾಸವೇ ಸರಿ. ಇಲ್ಲಿ, ವಿದ್ಯಾರ್ಥಿಗಳೂ ಸಹ ಶತಾಯಗತಾಯ ಉತ್ತೀರ್ಣರಾಗಬೇಕೆಂದು ವಾಮಮಾರ್ಗ ಹಿಡಿಯುವುದು ತಪು್ಪ. ಇದು ಅನೈತಿಕ ಮಾತ್ರವಲ್ಲ, ಮುಂದೆ ಅವರಿಗೇ ತೊಂದರೆ. ಈಗಂತೂ ಅಂತರ್ಜಾಲದಲ್ಲಿ ಸಹ ಬೇಕಾದ ರೀತಿಯ ಪಠ್ಯವಸ್ತುಗಳು ಸಿಗುತ್ತವೆ. ಹೀಗಿರುವಾಗ ಕಷ್ಟಪಟ್ಟು ಓದಿ ಉತ್ತೀರ್ಣರಾಗಲು ನೋಡಬೇಕೆ ವಿನಾ ಅಡ್ಡದಾರಿ ಹುಡುಕಬಾರದು. ಹೀಗೆ ನಕಲಿ ಜಾಲದಿಂದ ಅಂಕಪಟ್ಟಿ ಪಡೆದು, ಪ್ರತಿಷ್ಠಿತ ಖಾಸಗಿ ಸಂಸ್ಥೆಗಳು, ಬ್ಯಾಂಕ್ ಮುಂತಾದೆಡೆ ಉದ್ಯೋಗ ಗಿಟ್ಟಿಸಿಕೊಂಡ ಕೆಲವರ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಅಂಥವರ ವಿಚಾರಣೆ ನಡೆಸುವ ಸಾಧ್ಯತೆಯೂ ಇದೆ. ರಾಜ್ಯದಲ್ಲಿ ನಕಲಿ ಅಂಕಪಟ್ಟಿ ಜಾಲ ಬಯಲಾಗುತ್ತಿರುವುದು ಇದೇ ಮೊದಲೇನೂ ಅಲ್ಲ; ಹಿಂದೆಯೂ ಇಂಥ ಪ್ರಕರಣಗಳು ನಡೆದಿವೆ. ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ವಂಚಿಸುವವರೂ ಇದ್ದಾರೆ.
ಎರಡೂ ಕೈ ಸೇರಿದರೆ ಮಾತ್ರ ಚಪ್ಪಾಳೆ ಎಂಬಂತೆ, ನಕಲಿ ಜಾಲದವರು ಬಲೆಬೀಸಿದರೂ ವಿದ್ಯಾರ್ಥಿಗಳು ಮತ್ತು ಪಾಲಕರು ಇಂಥ ಆಮಿಷಕ್ಕೆ ಬಲಿಯಾಗಬಾರದು. ಹೀಗೆ ಅಕ್ರಮ ಮಾರ್ಗದಿಂದ ಪದವಿ ಪಡೆಯುವುದು ಉದ್ಯೋಗ ನೀಡಿದ ಸಂಸ್ಥೆಗೆ ಮತ್ತು ಒಟ್ಟಾರೆಯಾಗಿ ದೇಶಕ್ಕೆ ಮಾಡುವ ಅಪಚಾರವೇ ಸರಿ. ಜನಜೀವನದ ಎಲ್ಲ ವಲಯಗಳು ಕರೊನೊತ್ತರ ದಿನಗಳಲ್ಲಿ ಮತ್ತೆ ಹಳಿಗೆ ಬರುವ ಪ್ರಯತ್ನದಲ್ಲಿವೆ. ಕರೊನಾದಿಂದ ತೀವ್ರವಾಗಿ ಬಾಧಿತವಾದ ರಂಗಗಳಲ್ಲಿ ಶಿಕ್ಷಣ ಕ್ಷೇತ್ರವೂ ಸೇರಿದ್ದು, ಅಲ್ಲಿ ಪುನಃ ಚೇತರಿಕೆ ತರುವಲ್ಲಿ ಸರ್ಕಾರ, ಸಮಾಜ, ಪಾಲಕರು, ಬೋಧಕ ವಲಯ, ವಿದ್ಯಾರ್ಥಿಗಳು- ಹೀಗೆ ಎಲ್ಲರ ಪಾತ್ರವೂ ಇದೆ. ಆ ನಿಟ್ಟಿನಲ್ಲಿ ಸಾಮೂಹಿಕ ಯತ್ನ ನಡೆಯಬೇಕೆ ವಿನಾ ಅಲ್ಲಿ ಅಕ್ರಮಕ್ಕೆ ಅವಕಾಶ ಇರಕೂಡದು.