ಬರ, ಮಳೆಗಾಲ ನಿರ್ವಹಣೆಗೆ ಎಚ್ಚರವಹಿಸಿ

tahasildhar b.n.girish meeting
ಶಿವಮೊಗ್ಗ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಬಿ.ಎನ್.ಗಿರೀಶ್ ಅವರು ಬರ ಮತ್ತು ಮಾನ್ಸೂನ್ ನಿರ್ವಹಣೆ ಕುರಿತು ಸಭೆ ನಡೆಸಿದರು. ಡಾ. ಜಿ.ಬಿ.ಚಂದ್ರಶೇಖರ್, ಸಿ.ಅವಿನಾಶ್, ಪಿ.ನಾಗರಾಜ್ ಇದ್ದರು.
Published on

ಶಿವಮೊಗ್ಗ: ಬರ ನಿರ್ವಹಣೆ, ಡೆಂಘೆ ಮತ್ತು ಮಾನ್ಸೂನ್ ಬಗ್ಗೆ ನಿರ್ಲಕ್ಷೃ ಮಾಡುವಂತಿಲ್ಲ. ಕುಡಿಯುವ ನೀರಿನ ಬಗ್ಗೆ ಪ್ರತಿ ಇಲಾಖೆಗಳೂ ನಿಗಾ ವಹಿಸಬೇಕು. ಅಂಗನವಾಡಿ, ಶಾಲೆ ಮತ್ತು ಹಾಸ್ಟೆಲ್ಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಬಿ.ಎನ್.ಗಿರೀಶ್ ಸೂಚಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬರ ಪರಿಹಾರ ವಿತರಣೆಯಲ್ಲಿ ರೈತರು ಕಚೇರಿಗೆ ಭೇಟಿ ನೀಡಿದಾಗ ಸಮಾಧಾನ ಮತ್ತು ಸಂಯಮದಿಂದ ವರ್ತಿಸಬೇಕು. ಪ್ರತಿಯೊಂದು ಇಲಾಖೆ ಅಧಿಕಾರಿಗಳೂ ಕೆಲಸವನ್ನು ನಿಷ್ಠೆ ಮತ್ತು ಜವಾಬ್ದಾರಿಯಿಂದ ಮಾಡಬೇಕು ಎಂದು ತಿಳಿಸಿದರು.
ಶಾಲೆ ಮತ್ತು ಅಂಗನವಾಡಿಗಳಲ್ಲಿ ಕಡ್ಡಾಯವಾಗಿ ಕುಡಿಯುವ ನೀರಿನ ಪರೀಕ್ಷೆ ಮಾಡಿಸಿ ಬಳಕೆ ಮಾಡಬೇಕು. ಶೌಚಗೃಹಗಳ ಶುಚಿತ್ವ ಕಾಪಾಡಿ ಮಕ್ಕಳ ಆರೋಗ್ಯದ ಕಡೆಗೆ ಗಮನಹರಿಸುವುದು ನಮ್ಮ ಕರ್ತವ್ಯ. ಮುಖ್ಯವಾಗಿ ಡೆಂಘೆಯಿಂದ ರಕ್ಷಣೆಗೆ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು. ಶಾಲೆ ಮತ್ತು ಅಂಗನವಾಡಿಗಳಿಗೆ ಬಣ್ಣ ಬಳಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ವಾಡಿಕೆಗಿಂತ ಮಳೆ ಹೆಚ್ಚುವ ಸಾಧ್ಯತೆ ಇರುವ ಕಾರಣ ರಸ್ತೆ ಬದಿ ಇರುವ ಮತ್ತು ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕು. ಪ್ರವಾಹ ಪರಿಸ್ಥಿತಿ ನಿರ್ಮಾಣವಾಗದಂತೆ ಚರಂಡಿ ಹಾಗೂ ಕಾಲುವೆಗಳನ್ನು ಸ್ವಚ್ಛ ಮಾಡಬೇಕು. ಡೆಂಘೆ ನಿರ್ಮೂಲನೆಗೆ ಸಹಕಾರಿಯಾಗುವ ಕೆಲಸ ಮಾಡಬೇಕು. ರಸ್ತೆ ಬದಿಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು ಎಂದು ಅರಣ್ಯ, ನಗರಪಾಲಿಕೆ ಮತ್ತು ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಟಿಎಚ್‌ಒ ಡಾ. ಜಿ.ಬಿ.ಚಂದ್ರಶೇಖರ್ ಮಾತನಾಡಿ, ನೀರಿನ ಟ್ಯಾಂಕ್‌ಗಳನ್ನು ವಾರಕ್ಕೆ 2 ಬಾರಿ ಸ್ವಚ್ಛಗೊಳಿಸುವ ಮೂಲಕ ಡೆಂಘೆ ಬಾರದಂತೆ ತಡೆಯಬೇಕು. ತೊಟ್ಟಿ, ಡ್ರಮ್ಗಳನ್ನು ವಾರಕ್ಕೆ 2 ಬಾರಿ ಸ್ವಚ್ಛಗೊಳಿಸುವುದು. ಟಯರ್ ಮತ್ತು ವಾಹನಗಳ ಅನುಪಯುಕ್ತ ಬಿಡಿ ಭಾಗಗಳನ್ನು ಸೂಕ್ತ ಸ್ಥಳದಲ್ಲಿ ಸಂಗ್ರಹಿಸಬೇಕು. ಆಸ್ಪತ್ರೆ, ಶಾಲೆ ಮತ್ತು ಮನೆ ಸುತ್ತಮುತ್ತ ಘನ ತ್ಯಾಜ್ಯದಲ್ಲಿ ಮಳೆನೀರು ಸಂಗ್ರಹವಾಗದಂತೆ ತಡೆಗಟ್ಟಲು ನಿಯಮಿತ ವಿಲೇವಾರಿ ಮಾಡುವುದರಿಂದ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಯಬಹುದು. ಸಾರ್ವಜನಿಕರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ಹಾಗೂ ಸಹಾಯವಾಣಿ ದೂ: 08182-279312 ಕರೆಮಾಡಿ ಮಾಹಿತಿ ನೀಡಬೇಕು ಎಂದರು.
ತಾಪಂ ಇಒ ಸಿ.ಅವಿನಾಶ್, ಬಿಇಒ ಪಿ.ನಾಗರಾಜ್, ಪೊಲೀಸ್ ಉಪಾಧೀಕ್ಷಕರು, ತಾಲೂಕು ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

ಶಿವಮೊಗ್ಗ ತಾಲೂಕಿನಲ್ಲಿ ಡೆಂಘೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವರ್ಷ ಈ ಸಮಯಕ್ಕೆ 8 ಡೆಂಘೆ ಪ್ರಕರಣಗಳು ಇದ್ದವು. ಆದರೆ ಈ ವರ್ಷ 55ಕ್ಕೆ ಏರಿಕೆಯಾಗಿದೆ. ಸಾರ್ವಜನಿಕರು ಡೆಂಘೆ ನಿಯಂತ್ರಣ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು.ಡಾ. ಜಿ.ಬಿ.ಚಂದ್ರಶೇಖರ್, ಟಿಎಚ್‌ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net