

ಕೋಲಾರ: ತಂತ್ರಜ್ಞಾನ ಮುಂದುವರೆದಂತೆ ಸಮಾಜದಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ, ಇದನ್ನು ಬದಲಾವಣೆ ಮಾಡುವ ಶಕ್ತಿ ವಿದ್ಯಾರ್ಥಿಗಳಲ್ಲಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಹೇಳಿದರು.
ನಗರದ ಶತಶೃಂಗ ಪೊಲೀಸ್ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್‌ಗಳಿದ್ದು, ತಂತ್ರಾಂಶ ಬಳಿಸುವಾಗ ಎಚ್ಚರದಿಂದ ಇರದಿದ್ದರೆ ಅನಾಹುತಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆಯಿರುತ್ತದೆ ಎಂದರು.
ಮೊಬೈಲ್ ಬಳಕೆಯನ್ನು ಪ್ರಜ್ಞಾಪೂರ್ವಕವಾಗಿ ಬಳಸಬೇಕು, ಅಪರಿಚಿತರ ಕೈಗೆ ಮೊಬೈಲ್ ನೀಡಬಾರದು, ಫೋನ್ ಮತ್ತು ವಿಡಿಯೋ ಕರೆಗಳನ್ನು ಸ್ವೀಕರಿಸಬಾರದು. ಒಟಿಪಿ ಸಂಖ್ಯೆಯನ್ನು ಹಂಚಿಕೊಳ್ಳಬಾರದು. ಹೆಣ್ಣು ಮಕ್ಕಳು ಮೊಬೈಲ್ ಕುರಿತು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ದೂರವಾಣಿ ಕರೆ ಮಾಡಿ ಡಿಪಿಯಲ್ಲಿರುವ ಫೋಟೋಗಳನ್ನೇ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಹಣ ನೀಡುವಂತೆ ಬೇಡಿಕೆ ಇರುವ ಸಾಧ್ಯತೆಯಿರುತ್ತದೆ. ಒಂದು ವರ್ಷದಲ್ಲಿ ೩ ಲಕ್ಷ ಪ್ರಕರಣಗಳು ಮೊಬೈಲ್ ದುರ್ಬಳಕೆಯ ಪ್ರಕರಣಗಳ ದೂರುಗಳು ದಾಖಲಾಗಿವೆ. ಈ ಪೈಕಿ ಶೇ.೭೦ ಪ್ರಕರಣಗಳು ಯುವತಿಯರ ಲೈಂಗಿಕ ದೌರ್ಜನ್ಯಕ್ಕೆ, ೩೦ ಯುವಕರಿಗೆ ಹಾಗೂ ಇತರರಿಗೆ ಸಂಬಂಽಸಿದ್ದಾಗಿದೆ. ವಾಟ್ಸಾಪ್, ಇನ್‌ಸ್ಟಾಗ್ರಾಮ್, ಫೆಸ್‌ಬುಕ್, ಎಕ್ಸ್ ಖಾತೆ ಮೂಲಕ ಅಪರಿಚಿತರು ಪರಿಚಯ ಮಾಡಿಕೊಂಡು ಹಣ ನೀಡುವಂತೆ ಒತ್ತಾಯ ಮಾಡುತ್ತಾರೆ. ಇದ್ಯಾವುದಕ್ಕೂ ಕಿವಿಗೋಡಬಾರದು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ 32 ಪ್ರಕರಣಗಳು ವರದಿಯಾಗಿವೆ. ಸುಮಾರು 2.5 ಕೋಟಿ ರೂ ಕಳೆದುಕೊಂಡಿದ್ದಾರೆ. ಯಾವುದೇ ಸಂಸ್ಥೆಯಿಂದ ಹೊಡಿಕೆಗೆ ನಿಮಗೆ ಶೇ.9 ರಿಂದ ಶೇ.11ರ ವರೆಗೆ ಮಾತ್ರ ವಾಪಸ್ ಕೊಡಿಸಲು ಸಾಧ್ಯ, ಅದಕ್ಕಿಂತ ಹೆಚ್ಚಾಗಿ ನೀಡುವುದಾಗಿ ತಿಳಿಸಿದಾಗ ದುರಾಸೆಯಿಂದ ಹೂಡಿಕೆ ಮಾಡಿದರೆ ವಂಚನೆಯಾಗುವುದು ಖಚಿತ. ಹಾಗಾಗಿ ಎಲ್ಲದಕ್ಕೂ ಅರಿವಿಲ್ಲದೆ ಒಪ್ಪಿಗೆ ನೀಡುವ ಮುನ್ನ ಪರಿಶೀಲಿಸಿ ಎಚ್ಚರಿಕೆಯಿಂದ ಇರುವುದು ಉತ್ತಮ. ಬೇರೆ ರಾಜ್ಯಗಳಿಗೆ ತೆರಳಿ ಇಂಥಹ ಕ್ರಿಮಿನಲ್ ಕೃತ್ಯಗಳು ಎಸೆಗುವ ತಂಡಗಳು ಇರುತ್ತವೆ. ಅನೇಕ ಹೊರ ರಾಜ್ಯದ ಅಪರಾಽಗಳನ್ನು ಬಂಧಿಂಸಿ ಜೈಲಿಗಟ್ಟಿರುವ ನಿದರ್ಶನಗಳಿವೆ ಎಂದು ತಿಳಿಸಿದರು.
1930ಗೆ ಕರೆ ಮಾಡಿ
ಲಿಂಕ್‌ಗಳನ್ನು ಕಳುಹಿಸಿ ಕ್ಲಿಕ್ ಮಾಡುವಂತೆ ಸಂದೇಶ ಬಂದರೆ ಅದನ್ನು ತಿರಸ್ಕರಿಸಬೇಕು. ಹಣ ದ್ವಿಗುಣ ಮಾಡಿಕೊಡುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದಿವೆ. ಹೊಡಿಕೆಗೆ ಆಮಿಷ ಒಡ್ಡುವುದರಿಂದ ಎಚ್ಚರಿಕೆಯಿಂದ ಇರಬೇಕು. ಇದರಿಂದ ಎಚ್ಚರವಾಗಲು ಸಹಾಯವಾಣಿ ೧೯೩೦ ಸಂಖ್ಯೆಗೆ ಕರೆ ನೀಡಬೇಕು ಎಂದು ಎಸ್‌ಪಿ ತಿಳಿಸಿದರು.
ಪ್ರತಿಕ್ರಿಯೆ ನೀಡಬೇಡಿ
ಜಿಲ್ಲೆಯ ಮುಳಬಾಗಿಲಿನ ವಯೋವೃದ್ಧೆಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಸಿದ ಸಮವಸ್ತದಾರಿಯೊರ್ವ ವಿವಿಧ ಬಾರಿ ಖಾತೆಗಳಿಗೆ ಒಟ್ಟು ೧.೩೦ ಕೋಟಿ ರೂ. ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ ಐಐಟಿ ಪದವೀಧರನೊಬ್ಬನಿಗೆ ೫ ಕೋಟಿ ರೂ. ವಂಚಿಸಲಾಗಿದೆ. ಅಪರಿಚಿತರು ಇಂಗ್ಲಿಷ್, ಹಿಂದಿ ಸೇರಿ ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಕನ್ನಡದಲ್ಲಿಯೇ ಉತ್ತರಿಸಿ, ಏನೇ ಕೇಳಿದರೂ ನೇರ ಭೇಟಿ ಮಾಡಲು ಸೂಚಿಸಬೇಕು, ಆ ಮೂಲಕ ವಂಚನೆಯಿAದ ದೂರವಾಗಬೇಕು ಎಂದು ಬಿ.ನಿಖಿಲ್ ಎಚ್ಚರಿಸಿದರು.
ಅನಾಮಧೆಯ ಕರೆ ಸ್ವೀಕರಿಸದಿರಿ
ಸೈಬರ್ ಅಪರಾಧ ವಿಭಾಗದ ವೃತ್ತ ನಿರೀಕ್ಷಕ ಎಸ್.ಆರ್.ಜಗದೀಶ್ ಮಾತನಾಡಿ, ಸೈಬರ್ ವಂಚನೆಗಳಿಗೆ ತಂತ್ರಜ್ಞಾನವೇ ಹೆಚ್ಚು ಕಾರಣ. ಆನ್‌ಲೈನ್ ಗೇಮ್ಸ್, ವ್ಯವಹಾರ ಇವು ಹೆಚ್ಚು ನಡೆಸಲು ಅವಕಾಶ ಮಾಡಿಕೊಡುತ್ತಿವೆ ಎಂದು ಹೇಳಿದರು.
ವಂಚಕರು ನಕಲಿ ಆ್ಯಪ್‌ಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾನಗಳಲ್ಲಿ ಜಾಹೀರಾತಿನ ಮೂಲಕ ಜನರನ್ನು ಸೆಳೆದು ನಂತರ ವ್ಯಾಟ್ಸಾಪ್ ಇತರೆ ಸಾಮಾಜಿಕ ಜಾಲತಾಣ ಗುಂಪು ರಚಿಸಿ ಸದಸ್ಯರನ್ನು ಸೇರಿಸಿಕೊಳ್ಳುತ್ತಾರೆ. ಎಪಿಕೆ, ಲಿಂಕ್‌ಗಳ ಮೂಲಕ ವಂಚಿಸುವ ಪ್ರಯತ್ನ ಮಾಡುತ್ತಾರೆ. ಅನಾಮಧೆಯ ದೂರವಾಣಿ ಕರೆಗಳನ್ನು ಸ್ವೀಕರಿಸಬಾರದು ಎಂದು ತಿಳಿಸಿದರು.