

ಕೋಲಾರ: ಸಹಕಾರಿ ರಂಗದಲ್ಲಿ ಕಾಲಕಾಲಕ್ಕೆ ಕಾಯ್ದೆಗಳು ತಿದ್ದುಪಡಿಯಾಗುತ್ತಿರುತ್ತವೆ, ಅದರ ಬಗ್ಗೆ ಅರಿವು ಪಡೆದುಕೊಂಡು ಜಾರಿಗೆ ತರಲು ಸಹಕಾರ ಸಂಗಳ ಕಾರ್ಯದರ್ಶಿಗಳು ಮುಂದಾಗಬೇಕು ಎಂದು ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಪಿ.ಎಂ.ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾ ಸಹಕಾರಿ ಒಕ್ಕೂಟದಿಂದ ಸಭಾಂಗಣದಲ್ಲಿ ಶುಕ್ರವಾರ ಸಹಕಾರಿ ಸಂಗಳ ಕಾರ್ಯದರ್ಶಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಕಾರ್ಯದರ್ಶಿಗಳು ಕೇಳಿ ತರಬೇತಿ ಪಡೆದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಸಿಬ್ಬಂದಿಯನ್ನು ಬಲವಂತವಾಗಿ ತರಬೇತಿಗೆ ಕರೆಸುವ ಪರಿಸ್ಥಿತಿ ಎದುರಾಗಿದೆ ಎಂದರು.
ಹಾಲು ಒಕ್ಕೂಟದ ವಿಸ್ತರಣಾಧಿಕಾರಿಗಳು ಸಂಗಳಿಗೆ ಹೋದಾಗ ಕಡ್ಡಾಯವಾಗಿ ತರಬೇತಿಗಳಿಗೆ ಹಾಜರಾಗುವಂತೆ ಸೂಚಿಸಬೇಕು. ಆದರೆ ಈ ವಿಚಾರವಾಗಿ ಅಧಿಕಾರಿಗಳು ಸಹ ಉದಾಸೀನ ತೋರುತ್ತಿರುವುದರಿಂದ ಕಾರ್ಯಕ್ರಮಗಳಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.
ಹೈನೋದ್ಯಮವು ಅವಿಭಜಿತ ಕೋಲಾರ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ಎಷ್ಟೇ ಕಷ್ಟ ಬಂದರು ಹೈನುಗಾರಿಕೆಯಿಂದ ದೂರ ಸರಿಯುವುದಿಲ್ಲ. ಹಾಲಿನ ಉತ್ಪಾದನೆಯು ದುಬಾರಿಯಾಗಿದ್ದು ಇದಕ್ಕೆಲ್ಲ ಪಶು ಆಹಾರದ ಬೆಲೆ ಹೆಚ್ಚಾಗಿರುವುದು ಕಾರಣ. ಕೇಂದ್ರ ಸರ್ಕಾರ ರಸಗೊಬ್ಬರಕ್ಕೆ ಸಬ್ಸಿಡಿ ನೀಡುತ್ತಿರುವ ರೀತಿ ರಾಜ್ಯ ಸರ್ಕಾರವೂ ಪಶು ಆಹಾರಕ್ಕೆ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
* ರಾಜಕೀಯ ತೆವಲಿಗೆ ಬಲಿ
ಒಕ್ಕೂಟದ ನಿರ್ದೇಶಕ ಉರಗಿಲಿ ರುದ್ರಸ್ವಾಮಿ ಮಾತನಾಡಿ, ಡಿಸಿಸಿ ಬ್ಯಾಂಕ್ ಹಾಗೂ ಹಾಲು ಒಕ್ಕೂಟವು ಎರಡೂ ಜಿಲ್ಲೆಯ ರೈತರ, ಮಹಿಳೆಯರ ಎರಡು ಕಣ್ಣುಗಳಿದ್ದಂತೆ. ಆದರೆ ಈಗ ಸಂಸ್ಥೆಗಳು ರಾಜಕೀಯ ತೆವಲಿಗೆ ದಿವಾಳಿಯತ್ತ ಸಾಗುತ್ತಿರುವ ಆತಂಕ ಎದುರಾಗಿದೆ ಎಂದು ವಿಷಾದಿಸಿದರು.
ಒಂದು ಕಾಲದಲ್ಲಿ ಡಿಸಿಸಿ ಬ್ಯಾಂಕನ್ನು ಎರಡೂ ಜಿಲ್ಲೆಯ ರಾಜಕಾರಣಿಗಳು ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಂಡರು. ಆಡಳಿತ ಮಂಡಳಿಯ ಅವಧಿ ಮುಗಿದು ಎರಡ್ಮೂರು ವರ್ಷಗಳೇ ಕಳೆದರು ಚುನಾವಣೆ ನಡೆಸಲು ಸರ್ಕಾರವೇ ಆಸಕ್ತಿ ತೋರುತ್ತಿಲ್ಲ. ಕೆಲವರು ರಾಜಕೀಯ ದ್ವೇಷ ಸಾಧಿಸುತ್ತಿದ್ದು ರೈತರು, ಮಹಿಳೆಯರು ಬಲಿಪಶುಗಳಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯ ದ್ವೇಷ ಇದ್ದರೆ ಸಹಕಾರ ರಂಗವನ್ನು ಹೊರತು ಪಡಿಸಿ ಮಾಡಿಕೊಳ್ಳಲಿ. ಅಷ್ಟೂ ಆಗಲಿಲ್ಲ ಎಂದರೆ ಚುನಾವಣೆ ಎದುರಿಸಲಿ. ತೆವಲಿಗೆ ಸಂಸ್ಥೆಗಳನ್ನು ಹಾಳು ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಡಿಸಿಸಿ ಬ್ಯಾಂಕ್ ಆಯಿತು, ಈಗ ಹಾಲು ಒಕ್ಕೂಟದ ಮುಖ ಮಾಡಿದ್ದಾರೆ. ಒಕ್ಕೂಟ ವಿಭಜನೆಯ ಚಟುವಟಿಕೆಗಳು ಬೀರುಸುಗೊಂಡಿದ್ದು, ಕ್ಷೇತ್ರ ವಿಂಡಗಣೆಯಲ್ಲಿ ನ್ಯೂನತೆಗಳು ಆಗಿದೆ ಎಂದು ಕೋರ್ಟ್ ಪಟ್ಟಿಯನ್ನು ವಜಾಗೊಳಿಸಿದೆ. ಪಟ್ಟಿ ಸಿದ್ಧಪಡಿಸುವ ಮೊದಲು ಅಧಿಕಾರಿಗಳು ನಿಯಮ ಪಾಲನೆ ಮಾಡಿಲ್ಲ, ಯಾರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಇದು ಈಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು ಏನಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಡಾ.ವೆಂಕಟಸ್ವಾಮಿ ಹೈನುಗಾರಿಕೆ ಹಾಗೂ ರಾಸುಗಳಿಗೆ ತಗಲುವ ಕಾಯಿಲೆಗಳ ನಿರ್ವಹಣೆ ಕುರಿತು ಹಾಗೂ ಒಕ್ಕೂಟದ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ.ಆರ್.ಮಹೇಶ್ ಶುದ್ಧ ಹಾಗೂ ಗುಣಮಟ್ಟ ಹಾಲು ಉತ್ಪಾದನೆ ಕುರಿತು ಉಪನ್ಯಾಸ ನೀಡಿದರು.
ಒಕ್ಕೂಟದ ನಿರ್ದೇಶಕರಾದ ಮೂರಾಂಡಹಳ್ಳಿ ಇ.ಗೋಪಾಲಪ್ಪ, ಎಸ್.ಸುರೇಶ್, ಎನ್.ನಾಗರಾಜ್, ವೆಂಕಟೇಶಪ್ಪ, ಷೇಕ್ ಅಹ್ಮದ್, ಸಿಇಒ ಭಾರತಿ, ಸಿಬ್ಬಂದಿ ರವಿಕುಮಾರ್ ಇದ್ದರು.