

ಬೆಂಗಳೂರು: ಕೋವಿಡ್ 19ನಿಂದಾಗಿ ದೇಶದಾದ್ಯಂತ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗೃಹ ಮತ್ತು ವಾಹನ ಸಾಲ ಸೇರಿ ವಿವಿಧ ಸಾಲಗಳಿಗೆ ಮೂರು ತಿಂಗಳ ಸಮಾನ ಮಾಸಿಕ ಕಂತುಗಳ (ಇಎಂಐ) ಪಾವತಿಗೆ ವಿನಾಯ್ತಿ ನೀಡುವಂತೆ ದೇಶದ ಎಲ್ಲ ಬ್ಯಾಂಕ್ಗಳಿಗೆ ಸೂಚಿಸಿದೆ.
ಕೆಲವು ಬ್ಯಾಂಕ್ಗಳು ಇದನ್ನು ಕಡ್ಡಾಯವಾಗಿ ಜಾರಿಗೊಳಿಸಿವೆ. ಹಲವು ಬ್ಯಾಂಕ್ಗಳು ಇದರ ಆಯ್ಕೆಯನ್ನು ಗ್ರಾಹಕರಿಗೆ ಬಿಟ್ಟಿವೆ. ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ಕಳ್ಳರು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲಾರಂಭಿಸಿದ್ದಾರೆ.
ಬ್ಯಾಂಕ್ಗಳ ಗ್ರಾಹಕರಿಗೆ ಕರೆ ಮಾಡುತ್ತಿರುವ ಸೈಬರ್ ಕಳ್ಳರು ಇಎಂಐ ಪಾವತಿಯ ವಿನಾಯ್ತಿ ಪಡೆದುಕೊಳ್ಳಲು ಸಹಕರಿಸುವುದಾಗಿ ಹೇಳಿ, ಒಟಿಪಿಗಳನ್ನು ಕಳುಹಿಸುತ್ತಿದ್ದಾರೆ. ಆ ಒಟಿಪಿಯನ್ನು ಕೊಡುವಂತೆ ಗ್ರಾಹಕರಿಗೆ ಸೂಚಿಸುತ್ತಾರೆ. ಒಟಿಪಿ ಕೊಡುತ್ತಲೇ ಗ್ರಾಹಕರ ಬ್ಯಾಂಕ್ ಖಾತೆಗಳಿಂದ ಹಣ ದೋಚುತ್ತಿದ್ದಾರೆ.
ಈ ರೀತಿಯ ಸಾಕಷ್ಟು ದೂರುಗಳು ಬೆಂಗಳೂರು ಸೈಬರ್ ಕ್ರೈಂ ಬ್ರ್ಯಾಂಚ್ನಲ್ಲಿ ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಯಾರಾದರೂ ಕರೆ ಮಾಡಿ ಇಎಂಐ ಪಾವತಿಯ ವಿನಾಯ್ತಿ ಕೊಡುವುದಾಗಿಯೂ, ಒಟಿಪಿ ಹೇಳುವಂತೆ ತಿಳಿಸಿದರೆ ಯಾರೂ ಕೂಡ ಕೊಡಬಾರದು ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಟ್ವೀಟ್ ಮಾಡಿ, ಜನರನ್ನು ಎಚ್ಚರಿಸಿದ್ದಾರೆ.