ಸಾಲ ಪಡೆದವರ ಡೇಟಾ ಕದ್ದು ಬ್ಲ್ಯಾಕ್​​ಮೇಲ್ - ಲೋನ್ ಆಪ್​ಗಳ ಕಳ್ಳಾಟ!

fake app
Published on

ಯಂಕಣ್ಣ ಸಾಗರ್ ಬೆಂಗಳೂರು

ಲೋನ್ ಆಪ್​ಗಳ ಮೂಲಕ ಸಾಲ ಪಡೆಯುವಾಗ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ! ಏಕೆಂದರೆ ಸಾಲ ಕೊಟ್ಟ ಬಳಿಕ ನಿಮ್ಮ ಮೊಬೈಲ್​ನಲ್ಲಿರುವ ವೈಯಕ್ತಿಕ ವಿವರಗಳ ಕದ್ದು, ನಿಮ್ಮನ್ನೇ ಬ್ಲ್ಯಾಕ್​​ಮೇಲ್ ಮಾಡುವ ದಂಧೆ ಶುರುವಾಗಿದೆ!

ಕರೊನಾ ಲಾಕ್​ಡೌನ್ ಬಳಿಕ ನೂರಾರು ಅನಧಿಕೃತ ಲೋನ್ ಆಪ್​ಗಳು ಹುಟ್ಟಿಕೊಂಡಿದ್ದು, ಅಂಥಹ ಆಪ್​ಗಳನ್ನು ಇನ್​ಸ್ಟಾಲ್ ಮಾಡಿಕೊಂಡರೆ ನಿಮ್ಮ ಮೊಬೈಲ್ ಫೋನ್​ನಲ್ಲಿರುವ ಸಂಪೂರ್ಣ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ. ಕದ್ದ ಡೇಟಾದಿಂದ ಬ್ಲ್ಯಾಕ್​​ಮೇಲ್ ಮಾಡುತ್ತಾರೆ ಎಂದು ಸಿಐಡಿ ಸೈಬರ್ ಕ್ರೈಂ ಪೊಲೀಸರು ಎಚ್ಚರಿಸಿದ್ದಾರೆ.

ಸೈಬರ್ ಪೊಲೀಸರ ಸಲಹೆ?: * ಗೂಗಲ್, ಜಾಲತಾಣಗಳಿಂದ ಆಪ್ ಡೌನ್​ಲೋಡ್ ಮಾಡುವುದು ಬೇಡ. * ಜಾಲತಾಣಗಳಲ್ಲಿ ಸಿಗುವ ಆಪ್​ಗಳು ಅನಧಿಕೃತ. * ಆಪ್ ಇನ್​ಸ್ಟಾಲ್ ಮಾಡುವ ಮುನ್ನ ಸುರಕ್ಷತೆಯನ್ನು ಪರೀಕ್ಷಿಸಿಕೊಳ್ಳಬೇಕು. * ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಿವರ, ಕಾರ್ಡ್ ನಂಬರ್, ಸಿವಿವಿ ಮತ್ತು ಓಟಿಪಿ ನಂಬರ್ ಹಂಚಿಕೊಳ್ಳಬೇಡಿ. * ಅನಧಿಕೃತ ಆಪ್ ಆಗಿದ್ದರೆ ಮೊಬೈಲ್​ನಲ್ಲಿನ ಮಾಹಿತಿ ಸೋರಿಕೆ ಸಾಧ್ಯತೆ. * ಲೋನ್ ಆಪ್ ಕಂಪನಿಗೆ ಆರ್​ಬಿಐನಿಂದ ಮಾನ್ಯತೆ ಸಿಕ್ಕಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. * ಬ್ಯಾಂಕ್ ಅಥವಾ ಫೈನಾನ್ಸ್ ಸರ್ವೀಸ್ ಕಂಪನಿ

ಫೇಸ್​ಬುಕ್, ಇನ್​ಸ್ಟಾಗ್ರಾಂನಲ್ಲಿ ‘ಲೋನ್ ಇನ್ ಒನ್ ಮಿನಿಟ್’ (ಒಂದು ನಿಮಿಷದಲ್ಲಿ ಸಾಲ) ಎಂಬ ಲಿಂಕ್​ಗಳು ಜನರನ್ನು ಸೆಳೆಯುತ್ತಿವೆ. ಇಂಥಹ ಆಪ್​ಗಳನ್ನು ಇನ್​ಸ್ಟಾಲ್ ಮಾಡಿ, ಸಾಲ ಕೋರಿದರೆ ಬ್ಯಾಂಕ್ ಸೇರಿ ಇನ್ನಿತರ ಕೆಲ ದಾಖಲೆಗಳನ್ನು ಪಡೆದುಕೊಂಡು ಸಾಲ ನೀಡಲಾಗುತ್ತದೆ. ಆದರೆ ಆರ್​ಬಿಐನಿಂದ ಮಾನ್ಯತೆ ಪಡೆಯದ ಈ ಆಪ್​ಗಳು ದಂಧೆ ನಡೆಸುತ್ತಿದ್ದು, ಮರುಪಾವತಿ ವಿಳಂಬವಾದರೆ ನಕಲಿ ಲೀಗಲ್ ನೋಟಿಸ್ ಕಳುಹಿಸಿ ಬೆದರಿಸುತ್ತಾರೆ.

ಲೋನ್ ಆಪ್ ಇನ್​ಸ್ಟಾಲ್ ಮಾಡುವ ಮುನ್ನ ಸುರಕ್ಷತೆ ಹಾಗೂ ಪರ್ವಿುಷನ್ ಬಗ್ಗೆ ಪರೀಕ್ಷಿಸಿಕೊಳ್ಳಬೇಕು. ಅನಧಿಕೃತ ಆಪ್ ಆಗಿದ್ದರೆ, ಮೊಬೈಲ್ ಬಳಕೆದಾರನ ಜಿಪಿಎಸ್ ಲೊಕೇಷನ್, ಮೊಬೈಲ್ ಗ್ಯಾಲರಿ, ಫೋನ್ ನಂಬರ್ ಸೇರಿ ಇನ್ನಿತರ ವೈಯಕ್ತಿಕ ಮಾಹಿತಿ ಸುಲಭವಾಗಿ ಲೋನ್ ಆಪ್ ಕಂಪನಿಯವರ ಕೈ ಸೇರಲಿದೆ. ಸಾಲ ಮರುಪಾವತಿಸದಿದ್ದಾಗ ಮೊಬೈಲ್​ನಿಂದ ಫೋಟೋ ಹಾಗೂ ವಿಡಿಯೋಗಳನ್ನು ಕದ್ದು ಸಂಬಂಧಿಕರು ಮತ್ತು ಸ್ನೇಹಿತರಿಗೆ ಕಳುಹಿಸುವುದಾಗಿ ಬ್ಲಾ್ಯಕ್​ವೆುೕಲ್ ಮಾಡುತ್ತಾರೆ. ಖಾಸಗಿ ಮಾಹಿತಿ ಇದ್ದರೆ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಡುತ್ತಾರೆ ಎಂದು ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದ್ದಾರೆ.

ನಿಂದನಾತ್ಮಕ ಫೋಟೋ ರವಾನೆ

ಬೆಂಗಳೂರಿನ ಉತ್ತರಹಳ್ಳಿ ನಿವಾಸಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಕೆಲ ತಿಂಗಳ ಹಿಂದೆ ಬೇರೆಬೇರೆ ಲೋನ್ ಆಪ್​ಗಳಿಂದ ಸಾಲ ಪಡೆದಿದ್ದರು. ನಿಗದಿತ ಅವಧಿಗೆ ಸಾಲ ಮರುಪಾವತಿಸಲು ಆಗಿಲ್ಲ. ಇತ್ತೀಚೆಗೆ ಲೋನ್ ಆಪ್ ಕಂಪನಿಯ ನೌಕರ, ಸಾಲ ಪಡೆದ ವ್ಯಕ್ತಿಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದ. ಬಳಿಕ ಆತನ ಫೋಟೋಗಳ ಮೇಲೆ ‘ಫ್ರಾಡ್’ ಎಂದು ಬರೆದು, ಸಂಬಂಧಿಕರು ಹಾಗೂ ಸ್ನೇಹಿತರಿಗೆ ಕಳುಹಿಸಿದ್ದಾರೆ. ಈ ಕುರಿತು ಸಾಲ ಪಡೆದ ವ್ಯಕ್ತಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಧಿಕ ಬಡ್ಡಿ ಹಾಕುತ್ತಿರುವ ಆಪ್ ಕಂಪನಿ ಹಾಗೂ ನಿಂದಿಸಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ದೂರು ನೀಡಿದ್ದಾರೆ.

ಹೀಗೂ ವಂಚಿಸುತ್ತಾರೆ?: ಜಯನಗರದ ನಿವಾಸಿಯೊಬ್ಬರು ನ.6ರಂದು ‘ಉಧಾರ್’ ಆಪ್​ನಲ್ಲಿ 3,500 ರೂ. ಲೋನ್ ಪಡೆದಿದ್ದರು. ನ. 13ರಂದು ಮರುಪಾವತಿಸಿದ್ದರು. ಅದೇ ದಿನ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ಉಧಾರ್ ಲೋನ್ ಎಕ್ಸಿಕ್ಯೂಟಿವ್ ಎಂದಿದ್ದ. ಲೋನ್ ಮರುಪಾವತಿಯಾಗಿಲ್ಲ. ನಿಮ್ಮ ಮೊಬೈಲ್​ಗೆ ಓಟಿಪಿ ನಂಬರ್ ಬರುತ್ತದೆ ಅದನ್ನು ತಿಳಿಸುವಂತೆ ಹೇಳಿದ್ದ. ಆತನ ಮಾತನ್ನು ನಂಬಿದ ಚೇತನ್ ಕುಮಾರ್ ಒಟಿಪಿ ನಂಬರ್ ಹಂಚಿಕೊಂಡಿದ್ದರು. ಇದಾದ ಬಳಿಕ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡಿರುವ ಅಪರಿಚಿತ, ವಿವಿಧ ಲೋನ್ ಆಪ್​ಗಳಿಂದ 32 ಸಾವಿರ ರೂ. ಸಾಲ ಪಡೆದುಕೊಂಡಿದ್ದ. ಇತ್ತೀಚೆಗೆ ಚೇತನ್ ಅವರಿಗೆ ಅನಾಮಿಕ ನಂಬರ್​ಗಳಿಂದ ಕರೆ ಮಾಡಿ, ಲೋನ್ ಕಟ್ಟುವಂತೆ ನಿಂದಿಸಿದ್ದಾರೆ. ವಂಚಿಸಿರುವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net