ಬಿಡಿಎ ನಕ್ಷೆಗೆ ಅಲೆದಾಟ ಫಿಕ್ಸ್; ಬಿಬಿಎಂಪಿ ಬದಲು ತನ್ನಲ್ಲೇ ಸೌಲಭ್ಯ ಪಡೆಯಲು ಸೂಚನೆ

bda office
Published on

ಆರ್.ತುಳಸಿಕುಮಾರ್ ಬೆಂಗಳೂರು
ಬಿಬಿಎಂಪಿ ವ್ಯಾಪ್ತಿಯ ಬಿಡಿಎ ಬಡಾವಣೆಗಳಲ್ಲಿನ ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ ಇನ್ನು ಮುಂದೆ ಪಾಲಿಕೆ ಕಚೇರಿಗಳಲ್ಲಿ ಕಟ್ಟಡ ನಕ್ಷೆ ಸಿಗುವುದಿಲ್ಲ. ಹಾಗೆಯೇ ಸರ್ಕಾರದ ನಂಬಿಕೆ ನಕ್ಷೆ ಕಾರ್ಯಕ್ರಮದಡಿ ಆನ್​ಲೈನ್​ನಲ್ಲೇ ನಕ್ಷೆ ಪಡೆದುಕೊಳ್ಳುವ ಸೌಲಭ್ಯವೂ ಸಿಗುವುದಿಲ್ಲ. ದಿಢೀರ್ ಬೆಳವಣಿಗೆಯಲ್ಲಿ ಬಿಡಿಎ ನಕ್ಷೆ ನೀಡಿಕೆ ಸೌಲಭ್ಯವನ್ನು ತನ್ನಲ್ಲೇ ಇರಿಸಿಕೊಳ್ಳುವಂತಹ ಆದೇಶ ಹೊರಡಿಸಿದೆ. ಇದಕ್ಕೆ ಪಾಲಿಕೆ ಕೂಡ ಒಪ್ಪಿಗೆ ನೀಡಿರುವುದು ಸಾರ್ವಜನಿಕರ ಅಲೆ ದಾಟಕ್ಕೆ ಆಸ್ಪದ ನೀಡಿದಂತಾಗಿದೆ.

ಇತ್ತೀಚಿಗೆ ಬಿಬಿಎಂಪಿ ‘ನಂಬಿಕೆ ನಕ್ಷೆ’ ಎಂಬ ಕಾರ್ಯಕ್ರಮದ ಮೂಲಕ 50/80 ಅಡಿ ವಿಸ್ತೀರ್ಣದ ವರೆಗಿನ ಸೈಟ್​ಗಳಿಗೆ ಆನ್​ಲೈನ್ ಮೂಲಕ ಸುಲಭವಾಗಿ ನಕ್ಷೆ ಮಂಜೂರಾತಿ ಸೌಲಭ್ಯವನ್ನು ಜಾರಿಗೆ ತಂದಿದೆ. ಇದಕ್ಕೆ ಜನರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಈ ಸೌಲಭ್ಯ ಜಾರಿಗೊಂಡು ಒಂದು ತಿಂಗಳು ಪೂರೈಸುತ್ತಿರುವಾಗಲೇ, ನಗರಾಭಿವೃದ್ಧಿ ಇಲಾಖೆಯು ಸೈಟ್​ದಾರರಿಗೆ ಗೊಂದಲ ಮೂಡಿಸುವ ತೀರ್ವನಕ್ಕೆ ಅನುಮತಿ ನೀಡಿದೆ. ಇದರಿಂದಾಗಿ ರಾತ್ರೋರಾತ್ರಿ ಪಾಲಿಕೆ ಬಳಿ ಇದ್ದ ಕಟ್ಟಡ ನಕ್ಷೆ ಅನುಮತಿ/ಪರವಾನಗಿ ಅಧಿಕಾರವು ಬಿಡಿಎಗೆ ವರ್ಗಾವಣೆಯಾಗಿದೆ.

ಸಣ್ಣ ಸೈಟ್​ಗಳಿಗೆ ಕಷ್ಟ..: ಹಾಲಿ ಸರ್ಕಾರದ ನಿಯಮದಂತೆ ಪಾಲಿಕೆ ವ್ಯಾಪ್ತಿಯಲ್ಲಿ 20,000 ಚದರ ಮೀಟರ್​ಗಿಂತ ಕಡಿಮೆ ವಿಸ್ತೀರ್ಣದ ಪ್ರದೇಶಕ್ಕೆ ಬಿಬಿಎಂಪಿಯೇ ನೇರವಾಗಿ ಖಾತೆ ಮಾಡಿ ಕಟ್ಟಡ ನಕ್ಷೆಯನ್ನು ವಿತರಿಸುತ್ತಿತ್ತು. ಈ ಮಿತಿಯೊಳಗೆ 30/40 ಅಡಿ, 40/60 ಅಡಿ, 50/80 ಅಡಿ ವಿಸ್ತೀರ್ಣದ ಸೈಟ್​ಗಳು ಸೇರಿದ್ದವು. 20 ಸಾವಿರ ಚ. ಮೀ. ಮೇಲ್ಪಟ್ಟ ವಿಸ್ತೀರ್ಣಕ್ಕೆ ಮಾತ್ರ ಬಿಡಿಎ ನಕ್ಷೆ ಮಂಜೂರಾತಿ ನೀಡುತ್ತಿತ್ತು. ಇದರಿಂದ ಎರಡೂ ಸಂಸ್ಥೆಗಳು ಯಾವುದೇ ಗೊಂದಲ ಇಲ್ಲದೆ ಜನರಿಗೆ ನಕ್ಷೆ ಮಂಜೂರಾತಿ/ಪರವಾನಗಿ ನೀಡುತ್ತಿದ್ದವು. ಆದರೆ, ಡಿಜಿಟಲ್ ಖಾತೆ ನೀಡುವ ಸರ್ಕಾರದ ಹೊಸ ಸೌಲಭ್ಯದಿಂದಾಗಿ ಕೆಲ ಸಮಸ್ಯೆಗಳು ಉದ್ಭವಿಸಲಿವೆ ಎಂಬ ಕಾರಣ ನೀಡಿ ಹಳೆಯ ನಿಯಮವನ್ನು ಬದಲಾಯಿಸಲಾಗಿದೆ. ಇದರಿಂದ ಸಾರ್ವಜನಿಕರು ವೃಥಾ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂಬ ಆಕ್ಷೇಪ ಕೇಳಿಬಂದಿದೆ.

ನಾಗರಿಕರ ಅಲೆದಾಟಕ್ಕೆ ನಾಂದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಡಿಎ ನಿರ್ವಿುತ ಬಡಾವಣೆಗಳಲ್ಲಿ ಸೈಟ್​ದಾರರು ಹೊಸದಾಗಿ ಬಿಲ್ಡಿಂಗ್ ನಿರ್ವಿುಸಬೇಕಿದ್ದಲ್ಲಿ ಈಗ ನಕ್ಷೆ ಮಂಜೂರಾತಿ ಪಡೆಯಲು ಅಲೆದಾಟ ಮಾಡಬೇಕಿದೆ. ಏಕೆಂದರೆ ಹಾಲಿ ನಿಯಮವನ್ನು ಬದಲಾಯಿಸಿದ್ದಕ್ಕೆ ಜನರಿಗೆ ಯಾವುದೇ ಮಾಹಿತಿ ನೀಡದೆ ಆದೇಶ ಹೊರಡಿಸಲಾಗಿದೆ. ಇದರ ಅರಿವು ಇಲ್ಲದ ನಾಗರಿಕರು ಯಥಾಪ್ರಕಾರ ಪಾಲಿಕೆ ಕಚೇರಿಗಳಿಗೆ ತೆರಳಿ ನಕ್ಷೆ ಮಂಜುರಾತಿಗೆ ಅರ್ಜಿ ಸಲ್ಲಿಸುವ ಪರಿಪಾಠ ಮುಂದುವರಿಸುವವರಿದ್ದಾರೆ. ಅಲ್ಲಿ ಅರ್ಜಿದಾರರಿಗೆ ಸಮರ್ಪಕ ಮಾಹಿತಿ ದೊರೆಯದೆ ಬಿಡಿಎಗೆ ತೆರಳುವಂತೆ ಸೂಚನೆ ನೀಡಿದರೂ, ಪ್ರಾಧಿಕಾರದಲ್ಲಿ ಯಾವ ರೀತಿ ಸೌಲಭ್ಯ ಪಡೆದುಕೊಳ್ಳಬೇಕೆಂಬುದನ್ನು ಸ್ಪಷ್ಟಪಡಿಸಿಲ್ಲ. ಅಪಾರ್ಟ್​ವೆುಂಟ್ ಸಹಿತ ಬೃಹತ್ ಕಟ್ಟಡ ನಿರ್ವಣಗಾರರಿಗೆ ಅನ್ವಯಿಸಬೇಕಿದ್ದ ನಿಯಮವನ್ನು ಕಡಿಮೆ ವಿಸ್ತೀರ್ಣದ ಸೈಟ್​ದಾರರಿಗೂ ವಿಸ್ತರಿಸಿರುವುದು ಸಾಮಾನ್ಯ ನಾಗರಿಕರಿಗೆ ಹೊರೆಯಾಗಲಿದೆ.

ಯಾರಿಗೆಲ್ಲ ಸಮಸ್ಯೆ?

  • ಸಿಟಿಎಸ್ ಸಂಖ್ಯೆ ಹೊಂದಿರುವ ನಿವೇಶನ
  • ಹಳೆಯ ನಗರಸಭೆ, ಪುರಸಭೆ, ಗ್ರಾಪಂನಿಂದ ವರ್ಗಾವಣೆಗೊಂಡು ಪಾಲಿಕೆಯ ಎ ರಿಜಿಸ್ಟರ್​ನಲ್ಲಿರುವ ಸೈಟ್
  • ಬಿಡಿಎ ನಿರ್ವಿುತ/ಅನುಮೋದಿತ ಲೇಔಟ್​ಗಳ ಸೈಟ್, ಯೋಜನಾ ನಕ್ಷೆ ಮಂಜೂರಾತಿ ಪಡೆದ ಸೈಟ್
  • ಪಾಲಿಕೆ ಕಟ್ಟಡ ನಕ್ಷೆ ನೀಡಿದ್ದರೂ, ಪರಿಷ್ಕೃತ ನಕ್ಷೆ/ಕಟ್ಟಡ ನಿರ್ವಣದ ಪ್ರಸ್ತಾವನೆ
  • ಕೆಎಚ್​ಬಿ, ಕೆಐಎಡಿಬಿ, ಕೆಎಸ್​ಎಸ್​ಐಡಿಸಿಯಿಂದ ಫಲಾನುಭವಿಗಳಿಗೆ ಮಂಜೂರಾದ ಸ್ವತ್ತು
  • ಬಿಡಿಎ, ಬಿಎಂಐಸಿಎಪಿಎ, ಸಕ್ಷಮ ಪ್ರಾಧಿಕಾರದಿಂದ ಕೆಟಿಸಿಪಿ ಕಾಯ್ದೆ 17ರಡಿಯಲ್ಲಿ ಅನುಮೋದಿತ ಏಕ ನಿವೇಶನ

ನಗರಾಭಿವೃದ್ಧಿ ಇಲಾಖೆ ಏಕಾಏಕಿ ಬಿಬಿಎಂಪಿ ಬಳಿಯಿದ್ದ ಅಧಿಕಾರವನ್ನು ಬಿಡಿಎಗೆ ನೀಡಿರುವುದು ಜನರ ಅಲೆದಾಟಕ್ಕೆ ಅವಕಾಶ ನೀಡಿದೆ. ಬಿಡಿಎನಲ್ಲಿ ಸಣ್ಣ ಕೆಲಸಕ್ಕೂ ವರ್ಷಗಟ್ಟಲೆ ಸಮಯ ಹಿಡಿಯುವುದರಿಂದ ಬಡವರ ಸೂರಿನ ಕನಸು ಈಡೇರಿಸಿಕೊಳ್ಳುವುದು ಕಷ್ಟವಾಗಲಿದೆ. ಜನರ ದೃಷ್ಟಿಯಿಂದ ಹಿಂದೆ ಇದ್ದ ನಿಯಮವನ್ನೇ ಸರ್ಕಾರ ಮುಂದುವರಿಸಲಿ.

| ಎಸ್.ಅಮರೇಶ್ ವ್ಯವಸ್ಥಾಪಕ ಟ್ರಸ್ಟಿ, ಮಾಹಿತಿ ಹಕ್ಕು ಅಧ್ಯಯನ ಕೇಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net