

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತನ್ನ ವ್ಯಾಪ್ತಿಯಲ್ಲಿ ಅನಧಿಕೃತ ನಿರ್ಮಾಣ ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಮಂಗಳವಾರ ಬಿಟಿಎಂ 1ನೇ ಹಂತದ ಬಡಾವಣೆಯಲ್ಲಿ 12.25 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಗ್ರಾಮದ ಸರ್ವೆ ನಂ.50ರಲ್ಲಿ 6629 ಚದರ ಅಡಿ ವಿಸ್ತೀರ್ಣದ ಸ್ವತ್ತಿನಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ಹಾಗೂ ಕಾಂಪೌಂಡ್ ಅನ್ನು ಪ್ರಾಧಿಕಾರದ ಕಾರ್ಯಪಡೆಯ ಸಿಬ್ಬಂದಿ ತೆರವುಗೊಳಿಸಿದರು. ಅಂದಾಜು 12.25 ಕೋಟಿ ಬೆಲೆ ರೂ. ಮೌಲ್ಯದ ಸ್ವತ್ತನ್ನು ಮರುವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಸ್ವತ್ತಿಗೆ ತಂತಿ ಬೇಲಿ ಹಾಕಿ ಭದ್ರಪಡಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ತೆರವು ಕಾರ್ಯಾಚರಣೆಯನ್ನು ಪ್ರಾಧಿಕಾರದ ಕಾರ್ಯಪಡೆಯ ಆರಕ್ಷಕ ಅಧೀಕ್ಷಕರು ನೇತೃತ್ವದಲ್ಲಿ ನಡೆಯಿತು. ಬಿಡಿಎ ದಕ್ಷಿಣ ವಿಭಾಗದ ಕಾರ್ಯಪಾಲಕ ಅಭಿಯಂತರ, ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಸ್ಥಳೀಯ ಪೊಲೀಸರು ಉಪಸ್ಥಿತರಿದ್ದರು.