

ಬೆಂಗಳೂರು: ಬನಶಂಕರಿ 6ನೇ ಹಂತದ ಬಡಾವಣೆ ಅಭಿವೃದ್ಧಿಗಾಗಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ 24 ವರ್ಷ ಕಳೆದರೂ ಭೂಮಿ ಸ್ವಾಧೀನಪಡಿಸಿಕೊಳ್ಳದ ಹಿನ್ನೆಲೆಯಲ್ಲಿ ಕೆಲವು ಭೂಮಿಗಳಿಗೆ ಸಂಬಂಧಿಸಿದಂತೆ ಬಿಡಿಎ ಕೈಗೊಂಡಿದ್ದ ಭೂ ಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸುವ ಮಹತ್ವದ ತೀರ್ಪನ್ನು ಹೈಕೋರ್ಟ್ ನೀಡಿದೆ.
ಬಿಡಿಎ ಕೈಗೊಂಡಿದ್ದ ಭೂಸ್ವಾಧೀನ ಪ್ರಶ್ನಿಸಿ ಎಚ್. ನಾಗರಾಜಯ್ಯ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.
‘ಹೈಕೋರ್ಟ್‌ನ ಹಿಂದಿನ ಆದೇಶದಂತೆ ಭೂಸ್ವಾಧೀನ ಪ್ರಕ್ರಿಯೆಯಿಂದ ಬಹುತೇಕ ಭೂಮಿ ಕೈಬಿಡಲಾಗಿದೆ ಮತ್ತು 2,138 ಎಕರೆ ಭೂ ಸ್ವಾಧೀನಕ್ಕೆ ಬಿಡಿಎ ಉದ್ದೇಶಿಸಿತ್ತು.ಆದರೆ, ಎಷ್ಟು ಸ್ವಾಧೀನಪಡಿಸಿಕೊಂಡಿದೆ ಎಂಬ ಬಗ್ಗೆ ಪೂರಕ ದಾಖಲೆಗಳನ್ನೇ ಬಿಡಿಎ ಸಲ್ಲಿಸಿಲ್ಲ. 24 ವರ್ಷ ಕಳೆದರೂ ಭೂಮಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿಲ್ಲ.
ಬಡಾವಣೆ ಅಭಿವೃದ್ಧಿ ಯೋಜನೆ ಬಹುತೇಕ ಅನುಷ್ಠಾನಗೊಂಡಿದೆ ಎಂಬ ಸರ್ಕಾರ ಮತ್ತು ಬಿಡಿಎ ವಾದ ಒಪ್ಪಲಾಗದು. ಆದ್ದರಿಂದ ಬಡಾವಣೆಯ ಒಂದು ಭಾಗದ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗುತ್ತಿದೆ’ ಎಂದು ಆದೇಶಿಸಿದೆ.