ಬಿಬಿಎಂಪಿ: ಮಣ್ಣಿನ ಗಣೇಶ ತಯಾರಿಕೆಗೆ ಕಾರ್ಯಾಗಾರ

bbmp ganesha
Published on

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಮಣ್ಣಿನ ಗಣೇಶ ತಯಾರಿಕೆ ಕಲಿಕಾ ಕಾರ್ಯಕ್ರಮ ಆಯೋಜಿಸುವ ಮೂಲಕ ಪರಿಸರ ರಕ್ಷಣೆ ಕುರಿತು ಅರಿವು ಮೂಡಿಸಬಹುದು ಎಂದು ಬಿಬಿಎಂಪಿ ರಾಜರಾಜೇಶ್ವರಿನಗರ ವಲಯದ ಆಯುಕ್ತ ಬಿ.ಸಿ.ಸತೀಶ್ ಅಭಿಪ್ರಾಯಪಟ್ಟರು.

ರಾಜರಾಜೇಶ್ವರಿನಗರ ವಲಯದ ಹೇರೋಹಳ್ಳಿಯ ಬಿಬಿಎಂಪಿ ಪ್ರೌಢಶಾಲೆ ಮತ್ತು ಲಗ್ಗೆರೆಯ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮಣ್ಣಿನ ಗಣೇಶ ಮೂರ್ತಿಯನ್ನು ತಯಾರಿಸುವ ಗುರುವಾರ ಆಯೋಜಿಸಿದ್ದ ಕಲಿಕಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗಣೇಶ ಮೂರ್ತಿಗಳನ್ನು ತಯಾರಿಸುವಾಗ ಪಿಒಪಿ ಹಾಗೂ ಹಾನಿಕಾರಕ ರಾಸಾಯನಿಕ ಬಣ್ಣ ಬಳಸುವುದರಿಂದ ಮೂರ್ತಿಗಳನ್ನು ವಿಸರ್ಜಿಸಿದಾಗ ನೀರಿನಲ್ಲಿ ಕರಗದೆ ಪರಿಸರಕ್ಕೆ ಹಾನಿಯಾಗುತ್ತದೆ. ಮಣ್ಣಿನ ಗಣೇಶ ಮೂರ್ತಿ ತಯಾರಿಸಿ ಹಬ್ಬ ಆಚರಿಸಿದರೆ ಪರಿಸರಕ್ಕೆ ಹಾನಿಯಾಗದು. ಇದರಿಂದ ಕೆರೆ ಸೇರಿ ಇನ್ನಿತರ ಜಲ ಮೂಲಗಳು ಮಲಿನವಾಗುವುದಿಲ್ಲ. ಇಂತಹ ಮುನ್ನೆಚ್ಚರಿಕೆ ವಹಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಹೇಳಬೇಕಿದೆ ಎಂದರು.

ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ಕಲಿಕಾ ಕಾರ್ಯಾಗಾರದಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ಕುರಿತು ಚಿತ್ರಕಲಾ ಶಿಕ್ಷಕರು ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಆರ್.ಆರ್.ನಗರ ವಲಯದ ಜಂಟಿ ಆಯುಕ್ತೆ ಆರತಿ ಆನಂದ್, ಮುಖ್ಯ ಅಭಿಯಂತರ ಸ್ವಯಂಪ್ರಭ ,ಆರೋಗ್ಯಾಧಿಕಾರಿ ಸಂಗಮಿತ್ರಾ, ಜಂಟಿ ನಿರ್ದೇಶಕ (ನಗರ ಯೋಜನೆ) ಆರತಿ ವೆಂಕಟೇಶ್, ಕಾರ್ಯಪಾಲಕ ಅಭಿಯಂತರ ನಾಗರಾಜ್ ಶಿಂಗ್ರಿ, ಸಹಾಯಕ ಆಯುಕ್ತ ದಿಲೀಪ್, ಪ್ರಾಂಶುಪಾಲೆ ಜಯಂತಿ ನಾಯಕ್, ಮುಖ್ಯೋಪಾಧ್ಯಾಯರಾದ ಎಚ್. ಛಾಯಾದೇವಿ, ಸಮರ್ಪಣ ಸಂಸ್ಥೆಯ ಶಿವಕುಮಾರ್ ಹೊಸಮನಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net