ಬಿಬಿಎಂಪಿ ವಾರ್ಡ್ ಒಂದಕ್ಕೆ ಪುನೀತ್ ರಾಜ್‌ಕುಮಾರ್ ಹೆಸರು: ರಾಜ್ಯಪತ್ರದಲ್ಲಿ ಉಲ್ಲೇಖ

Puneeth Rajkumar 3
Published on

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ರಾಜ್ಯ ಸರ್ಕಾರ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದೆ.

ಬಿಬಿಎಂಪಿ ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ ವಾರ್ಡ್‌ಗಳ ಮರುವಿಂಗಡಣೆ ಅಂತಿಮಗೊಳಿಸಿ ರಾಜ್ಯ ಪತ್ರ ಹೊರಡಿಸಿರುವ ಸರ್ಕಾರ, ವಾರ್ಡ್ 55ಕ್ಕೆ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಹೆಸರು ನಾಮಕರಣ ಮಾಡಿದೆ.

ಡಿ-ಲಿಮಿಟೇಷನ್ ಅಂತಿಮಗೊಳಿಸಿರುವ ರಾಜ್ಯ ಪತ್ರವನ್ನು ಇಂದು ಸಂಜೆ ಸರ್ಕಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ವಿಷಯ ಉಲ್ಲೇಖವಾಗಿದೆ. ವಾರ್ಡ್ ಸಂಖ್ಯೆ 55ಕ್ಕೆ ಈವರೆಗೆ ಕಾವೇರಿ ನಗರ ಎಂಬ ಹೆಸರು ಇತ್ತು. ಅದನ್ನು ಬದಲಿಸಿ ಪುನೀತ್ ರಾಜ್‌ಕುಮಾರ್ ವಾರ್ಡ್ ಎಂದು ನಾಮಕರಣ ಮಾಡಲಾಗಿದೆ.

ಜೊತೆಗೆ ವಾರ್ಡ್ 77ಕ್ಕೆ ಹಳೇ ಹೆಸರನ್ನೇ ಮುಂದುವರಿಸಲಾಗಿದೆ. ಬಿಬಿಎಂಪಿ ಡಿ-ಲಿಮಿಟೇಷನ್ ಸಮಿತಿ ಸಲ್ಲಿಸಿದ್ದ ಪಟ್ಟಿಯಲ್ಲಿ 77ನೇ ವಾರ್ಡ್ ಅನ್ನು ಮೋದಿ ಗಾರ್ಡನ್ ಎಂದು ಬದಲಿಸುವಂತೆ ಶಿಫಾರಸು ಮಾಡಲಾಗಿತ್ತು. ಈಗ ಸರ್ಕಾರ ಹೊರಡಿಸಿದ ರಾಜ್ಯ ಪತ್ರದಲ್ಲಿ ಮೋದಿ ಗಾರ್ಡನ್ ಹೆಸರಿನ ಬದಲಿಗೆ ಹಳೆಯ ಹೆಸರು ದೇವರ ಜೀವನಹಳ್ಳಿ ಎಂಬುದೇ ಅಂತಿಮಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net