

ಡೆಹ್ರಾಡೂನ್: ಹಣ ಖರ್ಚು ಮಾಡಿ ಬೈಕ್, ಕಾರುಗಳಿಗೆ ಫ್ಯಾನ್ಸಿ ನಂಬರ್ ಪ್ಲೇಟ್ ಬರೆಸುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯ. ಆದರೆ, ಉತ್ತರಾಖಂಡದಲ್ಲಿ ವ್ಯಕ್ತಿಯೋರ್ವ ತನ್ನ ಕಾರಿನ ಮೇಲೆ ಹಿಂದಿಯಲ್ಲಿ 'ಪಪ್ಪಾ' ಎಂದು ಬರೆಸಿ ಮಾಡಿದ ತಪ್ಪಿಗೆ ಈಗ ದಂಡ ಕಟ್ಟಿದ್ದಾನೆ.
ಪ್ರಕರಣದ ಹಿನ್ನೆಲೆ:
ವ್ಯಕ್ತಿಯೊಬ್ಬನ ಕಾರಿನ ನಂಬರ್ 4141 ಆಗಿದ್ದು, ಅದನ್ನ ಫ್ಯಾನ್ಸಿ ಸ್ಟೈಲ್ನಲ್ಲಿ ಪಪ್ಪಾ(पापा) ಎಂದು ಹಿಂದಿಯಲ್ಲಿ ಬರೆಸಲಾಗಿದೆ. ಇದು ಉತ್ತರಾಖಂಡ ಪೊಲೀಸರ ಕಣ್ಣಿಗೆ ಬಿದ್ದಿದ್ದು, ಸಂಚಾರಿ ನಿಯಮದ ಉಲ್ಲಂಘನೆಯಾಗಿದೆ. ಹೀಗಾಗಿ, ನಂಬರ್ ಪ್ಲೇಟ್ ಹಾಕಿಸಿರುವ ವ್ಯಕ್ತಿಯನ್ನ ಟ್ರಾಫಿಕ್ ಕಚೇರಿಗೆ ಕರೆಯಿಸಿ, ದಂಡ ಕಟ್ಟಿಸಿಕೊಳ್ಳಲಾಗಿದೆ. ನಂಬರ್ ಪ್ಲೇಟ್ ಬದಲಾವಣೆ ಮಾಡುವಂತೆ ತಿಳಿಸಿದ್ದು, ಇದರ ಬೆನ್ನಲ್ಲೇ ಚೇಂಜ್ ಮಾಡಲಾಗಿದೆ.
ಈ ನಂಬರ್ ಪ್ಲೇಟ್ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿರುವ ಉತ್ತರಾಖಂಡ ಪೊಲೀಸರು, 'ಮಕ್ಕಳು ದೊಡ್ಡ ಹೆಸರು ಮಾಡುವಂತೆ ತಂದೆ ಹೇಳುತ್ತಾರೆ, ಆದರೆ, ಮಗ ತಂದೆಯ ಹೆಸರು ಕಾರಿನ ಪ್ಲೇಟ್ ಮೇಲೆ ಬರೆಯುತ್ತಾನೆ ಎಂದು ಬರೆದುಕೊಂಡಿದ್ದಾರೆ. ಇಂತಹ ನಂಬರ್ ಪ್ಲೇಟ್ ಕಂಡು ಬಂದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.