

ಬೆಂಗಳೂರು: ಕರೊನಾ ಭಯದಿಂದ ಜನರು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬಿಬಿಎಂಪಿ ಟೆಲಿ ಹೆಲ್ತ್ಲೈನ್ (07447118949) ಉಚಿತ ಸೇವೆ ಆರಂಭಿಸಲಾಗಿದೆ.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಗುರುವಾರ ಮೇಯರ್ ಎಂ. ಗೌತಮ್ುಮಾರ್ ‘ಆರೋಗ್ಯ ವಾಣಿ’ಗೆ ಚಾಲನೆ ನೀಡಿದರು. ನಂತರ ಸುದ್ದಿಗಾರ ರೊಂದಿಗೆ ಮಾತನಾಡಿ, ನಗರದ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಬಿಬಿಎಂಪಿಯು ಬ್ಲೂಮ್ ಬರ್ಗ್ ಫಿಲಾಂಥ್ರಪಿಸ್ ಹಾಗೂ ವೈಟಲ್ ಸ್ಟ್ರ್ಯಾಟಜೀಸ್ ಸಂಸ್ಥೆಗಳ ಸಹಯೋಗದಲ್ಲಿ ಕೋವಿಡ್-19 ಹಾಗೂ ಇತರೆ ರೋಗಗಳ ಬಗ್ಗೆ ಜನಜಾಗೃತಿ ಮೂಡಿಸಲು ಹೆಲ್ತ್ಲೈನ್ ಆರಂಭಿಸಲಾಗಿದೆ. ಇದಕ್ಕೆ ಕರೆ ಮಾಡಿ ಉಚಿತವಾಗಿ ಸಲಹೆ ಪಡೆಯಬಹುದು ಎಂದರು.
ಕರೆ ಮಾಡಿದ ಪ್ರತಿಯೊಬ್ಬರಿಗೂ ಪ್ರತ್ಯೇಕ ಗುರುತಿನಸಂಖ್ಯೆ ನೀಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ, ವೈದ್ಯರ ಜೊತೆ ಸಮಾ ಲೋಚನೆ ನಡೆಸಲು ವಿಡಿಯೋ ಕಾನ್ಪರೆನ್ಸ್ ವ್ಯವಸ್ಥೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಖಾಸಗಿ ವೈದ್ಯರೂ ಕೈಜೋಡಿಸಿದರೆ ಇನ್ನಷ್ಟು ಅಭಿವೃದ್ಧಿಪಡಿಸ ಲಾಗುವುದೆಂದು ಮೇಯರ್ ಮಾಹಿತಿ ನೀಡಿದರು.
ಇಮೇಲ್, ವಾಟ್ಸ್ಆಪ್ ಮೂಲಕ ಔಷಧ ವಿವರ: ಕರೊನಾ ಬಂದ ನಂತರ ಫೀವರ್ ಕ್ಲಿನಿಕ್ಗಳಿಗೆ ತೆರಳಲು ಜನರು ಹಿಂಜರಿಯುತ್ತಿರುವ ಹಿನ್ನೆಲೆಯಲ್ಲಿ ಟೆಲಿ ಹೆಲ್ತ್ ಲೈನ್ ಮೂಲಕ ವೈದ್ಯರನ್ನು ಸಂರ್ಪಸಿ ರೋಗಗಳಿಗೆ ಸೂಕ್ತ ಔಷಧ ಪಡೆಯಬಹುದು. ಇ-ಮೇಲ್ ಅಥವಾ ವಾಟ್ಸ್ಆಪ್ ಮೂಲಕ ವೈದ್ಯರು ಔಷಧದ ವಿವರಗಳನ್ನು ನೀಡುತ್ತಾರೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ಕುಮಾರ್ ಮಾಹಿತಿ ನೀಡಿದರು.
ಉಪ ಮೇಯರ್ ರಾಮಮೋಹನ ರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು, ವಿಶೇಷ ಆಯುಕ್ತ ಡಾ. ರವಿಕುಮಾರ್ ಸುರಪುರ, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಬೆ.8ರಿಂದ ರಾತ್ರಿ 8ರವರೆಗೆ ಸೇವೆ
ಆರೋಗ್ಯವಾಣಿ ಸೇವೆಯಲ್ಲಿ ಸಾರ್ವಜನಿಕರಿಗೆ, 42 ಪಾಲಿಕೆ ವೈದ್ಯರು ಅಗತ್ಯ ಮಾಹಿತಿ ನೀಡಲಿದ್ದಾರೆ. ಪ್ರತಿನಿತ್ಯ ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ 12 ಗಂಟೆ ಕಾಲ 4 ಪಾಳಿಯಲ್ಲಿ ವೈದ್ಯರು ಕಾರ್ಯ ನಿರ್ವಹಿಸಲಿದ್ದಾರೆ. ಜ್ವರ, ಶೀತ, ಕೆಮ್ಮು, ಗಂಟಲುನೋವು, ಉಸಿರಾಟ ತೊಂದರೆಗೆ ಸಲಹೆಗಳನ್ನು ಪಡೆಯಬಹುದು.