BBMP ವ್ಯಾಪ್ತಿಯ ಪ್ರತಿ ಮನೆಗೆ 100 ರೂ. ತ್ಯಾಜ್ಯ ಸೇವಾ ಶುಲ್ಕ: ಸೇಡಿನ ನಡೆ ಎಂದ ಸುರೇಶ್​ ಕುಮಾರ್

BBMP
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗೆ ತ್ಯಾಜ್ಯ ನಿರ್ವಹಣೆಗಾಗಿ ತಿಂಗಳಿಗೆ 100 ರೂಪಾಯಿ ಸೇವಾ ಶುಲ್ಕ ವಿಧಿಸಲು ಸರ್ಕಾರ ಮುಂದಾಗಿದ್ದು, ಮಾಜಿ ಸಚಿವ ಸುರೇಶ್​ ಕುಮಾರ್​ ಅವರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನು ಸರಳವಾಗಿ ಮತ್ತು ನೇರವಾಗಿ ಹೇಳುವುದಾದರೆ ಕಾಂಗ್ರೆಸ್ ಸರ್ಕಾರದ ಸೇಡಿನ ನಡೆಯಾಗಿದೆ. ಬೆಂಗಳೂರಿನ ಉತ್ತರ, ಕೇಂದ್ರ, ದಕ್ಷಿಣ, ಎರಡು ವಿಧಾನಸಭಾ ಕ್ಷೇತ್ರಗಳನ್ನು (ರಾಜರಾಜೇಶ್ವರಿನಗರ, ಬೆಂಗಳೂರು ದಕ್ಷಿಣ) ಒಳಗೊಂಡ ಬೆಂಗಳೂರು ಗ್ರಾಮಾಂತರ, ಒಂದು ವಿಧಾನಸಭಾ ಕ್ಷೇತ್ರನ್ನು (ಯಲಹಂಕ) ಒಳಗೊಂಡ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷಕ್ಕೆ ಮತದಾರರು ನೀಡಿರುವ ಭಾರಿ ವಿಜಯಕ್ಕೆ ಕಾಂಗ್ರೆಸ್ ಪಕ್ಷ ನೀಡುತ್ತಿರುವ ಸೇಡಿನ ಕೊಡುಗೆ ಇದು ಎಂದು ಫೇಸ್​ಬುಕ್​ ಮೂಲಕ ಸುರೇಶ್​ ಕುಮಾರ್​ ಕಿಡಿಕಾರಿದ್ದಾರೆ.

ಅಂದಹಾಗೆ ಜೂನ್​​ 1ರಿಂದ ನಗರದ ತ್ಯಾಜ್ಯ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಕಂಪನಿ (ಬಿಎಸ್‌ಡಬ್ಲ್ಯೂಎಂಎಲ್), ಜೂನ್​ ತಿಂಗಳಿನಿಂದಲೇ ಕಸ ಸಂಗ್ರಹಕ್ಕೆ ಸೇವಾ ಶುಲ್ಕ ವಿಧಿಸಲು ಅನುಮತಿ ನೀಡಬೇಕೆಂಬ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದು, ಇದಕ್ಕೆ ಸರ್ಕಾರವೂ ಸಹ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ನಗರದ ವಸತಿ ಪ್ರದೇಶದಲ್ಲಿರುವ ಪ್ರತಿ ಮನೆಗಳಿಗೆ ಹಾಗೂ ಅಪಾರ್ಟ್​ಮೆಂಟ್​ಗಳಲ್ಲಿ ಪ್ರತಿ ಫ್ಲ್ಯಾಟ್​ಗೆ 100 ರೂಪಾಯಿ ವಿಧಿಸಲು ನಿರ್ಧರಿಸಲಾಗಿದೆ. ಅಲ್ಲದೆ, ವಾಣಿಜ್ಯ ಕಟ್ಟಡಗಳಿಗೆ 200 ರೂಪಾಯಿ ವಿಧಿಸಲು ಮುಂದಾಗಿದೆ. ಬೆಸ್ಕಾಂನ ವಿದ್ಯುತ್ ಬಿಲ್‌ನಲ್ಲಿ ಈ ತ್ಯಾಜ್ಯ ಸೇವಾ ಶುಲ್ಕವನ್ನು ವಿಧಿಸಿ, ಸಂಗ್ರಹಿಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಬೆಸ್ಕಾಂ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಹೀಗಾಗಿ, ಯಾವುದರ ಮೂಲಕ ಸಂಗ್ರಹಿಸಬೇಕೆಂದು ಪಾಲಿಕೆ ಯೋಚಿಸುತ್ತಿದೆ.

ಈ ತ್ಯಾಜ್ಯ ನಿರ್ವಹಣೆ ಸೇವಾ ಶುಲ್ಕದಿಂದ ವಾರ್ಷಿಕವಾಗಿ 800 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆ ಇದೆ. ಇದನ್ನು ತ್ಯಾಜ್ಯ ನಿರ್ವಹಣೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ, ಬಿಬಿಎಂಪಿ ಈಗಾಗಲೇ ತ್ಯಾಜ್ಯ ನಿರ್ವಹಣೆ ಕರ ಎಂದು ಆಸ್ತಿ ತೆರಿಗೆಯಲ್ಲಿ ಸಂಗ್ರಹ ಮಾಡುತ್ತಿದೆ. ಇದೀಗ ಮತ್ತೆ ಸೇವಾ ಶುಲ್ಕ ಎಂದು ಪ್ರತಿ ಮನೆಗೆ 100 ರೂಪಾಯಿ ವಿಧಿಸಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net