

ಬೆಂಗಳೂರು: ಬಿಗ್ಬಾಸ್ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಪಡೆದುಕೊಂಡ ಸುದ್ದಿ ರಾಜ್ಯದಲ್ಲಿ ಬಹಳ ಚರ್ಚೆಯಾಗುತ್ತಿರುವಾಗ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಜೋಡಿಯ ಡಿವೋರ್ಸ್ ಸುದ್ದಿ ತಲ್ಲಣ ಮೂಡಿಸಿದೆ. ಅದರಲ್ಲೂ ದೊಡ್ಮನೆ ಸಂಸಾರದಲ್ಲಿ ಬಿರುಗಾಳಿ ಎಬ್ಬಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಹೌದು, ದೊಡ್ಮನೆ ಕುಡಿ ಯುವ ರಾಜ್‌ಕುಮಾರ್, ಶ್ರೀದೇವಿ ಭೈರಪ್ಪರಿಂದ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರ ಬೆನ್ನಲ್ಲೇ ಆರೋಪ-ಪ್ರತ್ಯಾರೋಪಗಳ ಸರಣಿ ಮುಂದುವರಿದಿದೆ.
ಶ್ರೀದೇವಿ ಅವರ ವಿರುದ್ಧ ಪತ್ನಿ ಕ್ರೌರ್ಯ ಆರೋಪ ಕೇಳಿಬಂದಿದೆ. ಇದಿಷ್ಟೇ ಅಲ್ಲದೆ, ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಗಂಭೀರ್ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಶ್ರೀದೇವಿ ಭೈರಪ್ಪ ತಮ್ಮ ಇನ್ಸ್ಟಾಗ್ರಾಂ ಮೂಲಕ ಕಿಡಿಕಾರಿದ್ದಾರೆ.
ವೃತ್ತಿಪರ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಬ್ಬ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ. ಕಳೆದ ಕೆಲವು ತಿಂಗಳಿಂದ ಆದ ಅನೇಕ ನೋವುಗಳ ಹೊರತಾಗಿಯೂ, ನಾನು ಕುಟುಂಬದ ಗೌರವ ಕಾಪಾಡಿಕೊಳ್ಳಲು, ಮೌನವಾಗಿದ್ದೆ. ಆದರೆ, ನನ್ನ ಸಭ್ಯತೆ ಹಾಗೂ ಮಾನವೀಯತೆಯನ್ನು ಗೌರವಿಸದೆ, ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿರುವುದು ದುರದೃಷ್ಟಕರ. ಸತ್ಯ ಮತ್ತು ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ ಎಂದು ಶ್ರೀದೇವಿ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ತನ್ನ ವಿರುದ್ಧದ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಅಂದಹಾಗೆ MC ಆ್ಯಕ್ಟ್ ಸೆಕ್ಷನ್ 13(1)(ia) ಅಡಿಯಲ್ಲಿ ಯುವ ರಾಜ್‌ಕುಮಾರ್ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಯುವರಾಜ್ ಕುಮಾರ್ ಅರ್ಜಿಯ ಹಿನ್ನೆಲೆಯಲ್ಲಿ ಯುವ ಪತ್ನಿ ಶ್ರೀದೇವಿ ಭೈರಪ್ಪಗೆ ಕೋರ್ಟ್ನಿಂದ ನೋಟಿಸ್ ಜಾರಿಯಾಗಿದೆ. ವಿಚ್ಛೇದನದ ಕೇಸ್‌ನಲ್ಲಿ ಫ್ಯಾಮಿಲಿ ಕೋರ್ಟ್ ಮುಂದಿನ ಜುಲೈ ತಿಂಗಳ 4ನೇ ತಾರೀಕಿಗೆ ವಿಚಾರಣೆ ನಿಗದಿ ಮಾಡಿದೆ.
2019ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಅಂದಹಾಗೆ ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು. ಯುವರಾಜ್ ಕುಮಾರ್ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿದ್ದಾರೆ. ಶ್ರೀದೇವಿ ಅವರು ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮೈಸೂರು ಮೂಲದ ಹುಡುಗಿ ಶ್ರೀದೇವಿಯನ್ನ ವರಿಸಿದ್ದ ಯುವ, ಇದೀಗ ಪತ್ನಿಗೆ ಡಿವೋರ್ಸ್ ನೋಟಿಸ್ ಕೊಟ್ಟಿದ್ದಾರೆ. ಸದ್ಯಕ್ಕೆ ಅಮೆರಿಕಾದಲ್ಲಿ ಶ್ರೀದೇವಿ ನೆಲೆಸಿದ್ದಾರೆ. ಶಾಂತಿನಗರ ಫ್ಯಾಮಿಲಿ ಕೋರ್ಟ್‌ನಲ್ಲಿ ಇದೇ ತಿಂಗಳು 6ನೇ ತಾರೀಕು ವಿಚ್ಛೇದನ ಅರ್ಜಿ ಸಲ್ಲಿಸಿದ್ದರು ಯುವರಾಜ್.