ಬಿಬಿಎಂಪಿ ಲ್ಯಾಬ್‍ನಲ್ಲಿ ಸ್ಫೋಟ ಆಗಿದ್ದು ಹೇಗೆ? ಪ್ರಯೋಗಾಲಯದಿಂದ ಒಟ್ಟಿಗೆ ಓಡಿ ಬಂದ ಆ ಮೂವರು ಯಾರು?

bbmp (1)
Published on

ಬೆಂಗಳೂರು: ನಿನ್ನೆ ಸಂಜೆಯ ವೇಳೆಗೆ ಬಿಬಿಎಂಪಿ ಮುಖ್ಯ ಕಚೇರಿಯ ಆವರಣದದಲ್ಲಿರುವ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಏಳು ಮಂದಿ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು.

ಬಿಬಿಎಂಪಿಯ ಗುಣ ನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆ ನಡೆದು ಅರ್ಧ ಗಂಟೆ ಬಳಿಕ ಅಗ್ನಿಶಾಮಕ ದಳ ವಾಹನ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿತ್ತು.

ಈ ಅವಗಢದಿಂದ 7 ಜನ ಬಿಬಿಎಂಪಿ ನೌಕರರಿಗೆ ತೀವ್ರ ಗಾಯಗಳಾಗಿದ್ದು ಪ್ರಾಥಮಿಕ ಮಾಹಿತಿ ಪ್ರಕಾರ ಗ್ಯಾಸ್‍ನಿಂದ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿತ್ತು. ಆದರೆ ನಂತರ ಕಾಂಗ್ರೆಸ್, ದಾಖಲೆಗಳಿದ್ದ ಕೊಠಡಿಗೆ ಬೆಂಕಿ ಬಿದ್ದದ್ದು ಆಕಸ್ಮಿಕ ಅಲ್ಲ. ಬೆಂಕಿ ಹಿಂದೆ ಷಡ್ಯಂತ್ರ ಇದೆ ಎಂದು ಆರೋಪಿಸಿತ್ತು. ತನ್ನ ಅಧಿಕೃತ X ಹ್ಯಾಂಡಲ್‍ನಿಂದ ಟ್ವೀಟ್‍ ಮಾಡಿದ್ದ ಕಾಂಗ್ರೆಸ್, ಶೇ. 40% ಕಮಿಷನ್​ನ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿದ ಬೆನ್ನಲ್ಲೇ ದಾಖಲೆಗಳಿದ್ದ ಕೊಠಡಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳನ್ನು, ಇದರ ಹಿಂದಿರುವ ಬಿಜೆಪಿಯ ಭ್ರಷ್ಟರನ್ನು ಹೆಡೆಮುರಿ ಕಟ್ಟುವುದು ನಿಶ್ಚಿತ ಎಂದು ಆರೋಪ ಮಾಡಿದೆ. ಬಿಜೆಪಿ ತಾನು ಮಾಡಿದ ಭ್ರಷ್ಟಾಚಾರದ ಸಾಕ್ಷ್ಯಗಳಿಗೆ ಬೆಂಕಿ ಇಟ್ಟು ಬಚಾವಾಗಿಬಿಡುವ ಹುನ್ನಾರ ನಡೆಸಿದೆ ಎಂದೂ ಆರೋಪಿಸಲಾಗಿದೆ.

ಬಿಬಿಎಂಪಿ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಆಗಿದ್ದೇನು?

ಗುಣ ನಿಯಂತ್ರಣ ಪ್ರಯೋಗಾಲಯ, ಬಿಬಿಎಂಪಿ ಕಾಮಗಾರಿಗೆ ಸಂಬಂಧಿಸಿದಂತೆ ಗುಣಮಟ್ಟ ಪರೀಕ್ಷೆಗಿರುವ ಪ್ರಯೋಗಾಲಯ. ಬಿಬಿಎಂಪಿಯ ಹಲವು ಕಾಮಗಾರಿಗಳ ಗುಣಮಟ್ಟವನ್ನು ಇಲ್ಲಿ ರಾಸಾಯನಿಕವಾಗಿ ಪರೀಕ್ಷಿಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಡಾಂಬರ್ ರಸ್ತೆಗೆ ಬಳಸುವ ಬಿಟುಮಿನ್ ಟೆಸ್ಟ್ ಸಹ ಇಲ್ಲಿ ನಡೆಯುತ್ತದೆ.

ಈ ಬಿಟುಮಿನ್ ಗುಣಮಟ್ಟ ಟೆಸ್ಟ್ ಮಾಡಲು ಬೆನ್ಸೆನ್ ಎನ್ನೋ ಕೆಮಿಕಲ್ ಬಳಸಲಾಗುತ್ತದೆ. ಬಿಟುಮಿನ್ ಎನ್ನುವುದು ಪೆಟ್ರೋಲಿಯಂನ ಒಂದು ಉತ್ಪನ್ನ. ಕಪ್ಪು ಬಣ್ಣದ ಜಿಗುಟಾದ ಅರೆ ಘನ ರೂಪದಲ್ಲಿರೋ ಉತ್ಪನ್ನ ಇದು. ಇದು ಬೆಂಕಿ ತಗುಲಬುದಾದ ಪೆಟ್ರೋಲಿಯಂ ಉತ್ಪನ್ನವಾಗಿದ್ದು ಬಿಬಿಎಂಪಿ ಗುಣ ನಿಯಂತ್ರಣ ಪ್ರಯೋಗಾಲಯದಲ್ಲೂ ಇದೇ ಟೆಸ್ಟ್ ನಡೆಸಲಾಗುತ್ತಿತ್ತು. ಬಿಟುಮಿನ್‍ಗೆ ಬೆನ್ಸೆನ್ ಬದಲಾಗಿ ಬೇರೆ ಕೆಮಿಕಲ್ ಬಳಸಿರೋ ಸಾಧ್ಯತೆ ಇದ್ದು ಅಥವಾ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿನ ಬೆನ್ಸೆನ್ ಕೆಮಿಕಲ್ ಬಳಸಿರಬಹುದಾಗಿದೆ. ಇದರಿಂದ ಕಿಡಿ ಹೊತ್ತಿಕೊಂಡು ಬೆಂಕಿ ತಗುಲಿರಬಹುದಾಗಿದೆ.

ಒಟ್ಟಿಗೆ ಓಡಿ ಬಂದ ಆ ಮೂವರು ಯಾರು?

ಆದರೆ ಅದಕ್ಕಿಂತಲೂ ಹೆಚ್ಚಾಗಿ ಕಾಡುತ್ತಿರುವ ಪ್ರಶ್ನೆಗಳು ಎಂದರೆ, ಸ್ಫೋಟದ ಸಮಯದಲ್ಲಿ ಆ ಮೂವರು ಒಟ್ಟಿಗೆ ಓಡಿ ಬಂದಿದ್ಯಾಕೆ? ಅವರು ಯಾರು? ಇತ್ಯಾದಿ. ಬಿಬಿಎಂಪಿ ಚೀಫ್ ಇಂಜನಿಯರ್ ಕೆ ಪ್ರಹ್ಲಾದ್ ದೂರಿನನ್ವಯ ಎಫ್ಐಎರ್ ಅನ್ನು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.

IPC ಸೆಕ್ಷನ್ 337 (ಮಾನವ ಜೀವಕ್ಕೆ ಅಪಾಯ ಉಂಟು ಮಾಡುವುದು) ಹಾಗೂ 338 (ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡಿ ಗಾಯಪಡಿಸೋದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ.

ಲ್ಯಾಬ್ ನಲ್ಲಿ ಅಗ್ನಿ ಅವಘಡ ಆದಾಗ ಸ್ಥಳದಲ್ಲೇ ಇದ್ದ ಆ ಮೂವರು ಡಿ ಗ್ರೂಪ್ ನೌಕರರು ಎನ್ನಲಾಗಿದೆ. ಅಗ್ನಿ ಅವಘಡ ಆಗಿದ್ದೇ ತಡ ಲ್ಯಾಬ್‍ನಿಂದ ಹೊರಗಡೆ ಓಡಿ ಬಂದಿದ್ದರು. ಆದರೆ ಮೊದಲಿಗೆ ಏಳುವ ಪ್ರಶ್ನೆ ಏನೆಂದರೆ, ಡಿ ಗ್ರೂಪ್ ನೌಕರರು ಟೆಸ್ಟಿಂಗ್ ಲ್ಯಾಬ್‍ಗೆ ಯಾಕೆ ಹೋಗಿದ್ರು ಎನ್ನುವ ಪ್ರಶ್ನೆಯೂ ಎದ್ದಿದೆ. ಮೂವರು ಒಟ್ಟಿಗೆ ಓಡಿ ಬಂದಿದ್ದು ಯಾಕೆ ಅಂತಾನೂ ವಿಚಾರಣೆ ನಡೆಯುತ್ತಿದ್ದು ತಡರಾತ್ರಿವರೆಗೂ ಖುದ್ದು ಡಿಸಿಪಿಯೇ ಮೂವರ ವಿಚಾರಣೆ ನಡೆಸಿದ್ದಾರೆ. ಸದ್ಯ ಈ ಮೂವರನ್ನ ವಶಕ್ಕೆ ಪಡೆದು ಪೊಲೀಸರು  ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net