ಬಿಬಿಎಂಪಿ ಬೆಂಕಿ ಪ್ರಕರಣ: ಪಾಲಿಕೆಗೆ ಸಿಎಂ-ಡಿಸಿಎಂ ಭೇಟಿ; ತನಿಖೆ ನಡೆಸಲು ಕಮಿಷನರ್​ಗೆ ಸೂಚನೆ

CM BBMP
Published on

ಬೆಂಗಳೂರು: ಬಿಬಿಎಂಪಿ ಪ್ರಯೋಗಾಲಯದಲ್ಲಿ ಬೆಂಕಿ ಹೊತ್ತಿಕೊಂಡು 9 ಮಂದಿ ಗಾಯಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲಿಕೆ ಮುಖ್ಯ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಪಾಲಿಕೆ ಕಚೇರಿಯಲ್ಲಿ ರುಟೀನ್ ಮೀಟಿಂಗ್ ಇತ್ತು, ಈ ಸಂದರ್ಭದಲ್ಲಿ ಪ್ರಯೋಗಾಲಯದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಗಾಯಗೊಂಡ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಗಾಯಾಳುಗಳನ್ನು 48 ಗಂಟೆ ನಿಗಾ ಇಟ್ಟು ನೋಡಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.

ಗಾಯಾಳುಗಳ ಮುಖ ಮತ್ತು ಕೈ ಸುಟ್ಟು ಹೋಗಿದ್ದು, ಕಣ್ಣುಗಳಿಗೆ ಅಪಾಯವಾಗಿಲ್ಲ. ಎಲ್ಲರಿಗೂ ಅತ್ಯುತ್ತಮ ಚಿಕಿತ್ಸೆ ನೀಡಲು ನಿರ್ದೇಶನ ನೀಡಿದ್ದೇವೆ. ಯಾಕಾಯಿತು, ಹೇಗಾಯಿತು ಎನ್ನುವ ಕುರಿತು ತನಿಖೆ ನಡೆಸುವಂತೆ ಬಿಬಿಎಂಪಿ ಕಮಿಷನರ್​ಗೆ ಹೇಳಿದ್ದೇವೆ ಎಂದರು. ಪ್ರಕರಣದ ತನಿಖೆ ನಡೆಯುತ್ತದೆ, ಗಾಯಾಳುಗಳೆಲ್ಲರೂ ಗುಣಮುಖರಾಗಲಿ ಎಂದು ಆಶಿಸುತ್ತೇನೆ ಎಂದೂ ಹೇಳಿದರು.

ಸದ್ಯ ನಮಗೆ ಗಾಯಾಳುಗಳ ಚಿಕಿತ್ಸೆ, ಅವರ ಆರೋಗ್ಯ ಅತಿಮುಖ್ಯ. ಸರ್ಕಾರದ ಕಡೆಯಿಂದ ಅತ್ಯುತ್ತಮ ಚಿಕಿತ್ಸೆ ನೀಡಲಾಗುವುದು. ಅವರ ಚಿಕಿತ್ಸೆ ಕಡೆ ನಾವೆಲ್ಲರೂ ಗಮನ ಹರಿಸಬೇಕಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net