ತ್ಯಾಜ್ಯ ಶುಲ್ಕ ವಸೂಲಿಗೆ ಸಿದ್ಧತೆ : ಪ್ರತಿ ಮನೆಯಿಂದ 200 ರೂ., ಹೊಸ ವರ್ಷಕ್ಕೆ ಜಾರಿ

SWM 2020- 1
Published on

ಬೆಂಗಳೂರು : ನಗರದಲ್ಲಿ ತ್ಯಾಜ್ಯ ನಿರ್ವಹಣೆಗೆ ಹಣಕಾಸಿನ ತೊಂದರೆಯನ್ನು ನಿವಾರಿಸಲು ಮುಂದಾಗಿರುವ ಬಿಬಿಎಂಪಿ, ಘನತ್ಯಾಜ್ಯ ನಿರ್ವಹಣಾ ಉಪನಿಯಮ-2020 ಜಾರಿಗೊಳಿಸಿ ಪ್ರತಿ ಮನೆಗೆ ತಲಾ 200 ರೂ. ಶುಲ್ಕ ಸಂಗ್ರಹಿಸಲು ಸಿದ್ಧತೆ ನಡೆದಿದೆ.

ಈಗಾಗಲೇ ತೆರಿಗೆ ಸಂಗ್ರಹಣೆಯಲ್ಲಿ ಇಳಿಕೆ, ಆದಾಯಕ್ಕಿಂತ ಹೆಚ್ಚಿನ ವೆಚ್ಚ, ಗುತ್ತಿಗೆದಾರರಿಗೆ 2 ಸಾವಿರ ಕೋಟಿ ರೂ. ಬಾಕಿ ಮೊತ್ತ ಉಳಿಸಿಕೊಂಡಿರುವ ಪಾಲಿಕೆ ಹೊಸ ಆದಾಯದತ್ತ ಚಿತ್ತ ನೆಟ್ಟಿದೆ. ಹೀಗಾಗಿ, ಇತ್ತೀಚಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದ ಘನತ್ಯಾಜ್ಯ ನಿರ್ವಹಣಾ ಉಪನಿಯಮ-2020 ಜಾರಿಗೊಳಿಸಲು ಮುಂದಾಗಿದೆ. ಈ ಮೂಲಕ ತ್ಯಾಜ್ಯ ಉತ್ಪಾದಕರರಾದ ಹೊಟೇಲ್, ಕಲ್ಯಾಣ ಮಂಟಪ, ಆಸ್ಪತ್ರೆ, ಶಾಪಿಂಗ್ ಮಾಲ್‌ಗಳಿಂದ ಹೊಸ ವರ್ಷದಿಂದ ಕಸ ಸಂಗ್ರಹಕ್ಕಾಗಿ ಮಾಸಿಕ 200 ರೂ. ಗಳಿಂದ 14 ಸಾವಿರ ರೂ.ವರೆಗೆ ಶುಲ್ಕ ವಸೂಲಿ ಮಾಡಲು ಸಿದ್ಧವಾಗಿದೆ. ವಿದ್ಯುತ್ ದರ ಏರಿಕೆಯಿಂದ ಬಳಲುತ್ತಿರುವ ನಗರದ ಜನತೆಗೆ, ತ್ಯಾಜ್ಯ ಶುಲ್ಕ ಹೊರೆಯಾಗಲಿದೆ.

ಬೆಸ್ಕಾಂನಿಂದಲೇ ತ್ಯಾಜ್ಯ ಶುಲ್ಕ ವಸೂಲಿ : ಪಾಲಿಕೆ ವ್ಯಾಪ್ತಿಯಲ್ಲಿ 46 ಲಕ್ಷ ವಸತಿ ಹಾಗೂ 6.5 ಲಕ್ಷ ಇತರೆ ಕಟ್ಟಗಳು ವಿದ್ಯುತ್ ಸಂಪರ್ಕ ಪಡೆದುಕೊಂಡಿವೆ. ವಿದ್ಯುತ್ ಬಿಲ್‌ನೊಂದಿಗೆ ತ್ಯಾಜ್ಯ ಶುಲ್ಕ ಸಂಗ್ರಹಣೆಗೆ ಬೆಸ್ಕಾಂ ಒಪ್ಪಿಗೆ ನೀಡಿದ್ದು, ಶೀಘ್ರ ಶುಲ್ಕ ಸಂಗ್ರಹ ಜಾರಿಯಾಗಲಿದೆ. ಇದರಿಂದ ಮಾಸಿಕ ಬಿಬಿಎಂಪಿಗೆ ಸುಮಾರು 50 ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆಯಿದೆ. ಬೆಸ್ಕಾಂ ವತಿಯಿಂದ ಶುಲ್ಕ ಸಂಗ್ರಹಿಸಿ ನೀಡುವ ಕಾರ್ಯಕ್ಕೆ ಪ್ರತಿಯಾಗಿ ಬಿಬಿಎಂಪಿ ಶೇ.5 ಸೇವಾ ಶುಲ್ಕವನ್ನು ಬೆಸ್ಕಾಂಗೆ ಪಾವತಿಸುತ್ತದೆ.

ಬಾಕಿ ವಸೂಲಿಗೆ ಮಾರ್ಷಲ್ ನಿಯೋಜನೆ: ಮಾಸಿಕ ವಿದ್ಯುತ್ ಬಿಲ್ ಜತೆಗೆ ತ್ಯಾಜ್ಯದ ಶುಲ್ಕ ಪಾವತಿ ಮಾಡದೆ ಬಾಕಿ ಉಳಿಸಿಕೊಂಡವರ ಬಗ್ಗೆ ಬೆಸ್ಕಾಂ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಲಿದೆ. ನಂತರ ಪಾಲಿಕೆ ಆರೋಗ್ಯ ಅಧಿಕಾರಿಗಳು ಮತ್ತು ಮಾರ್ಷಲ್‌ಗಳು ಮನೆ-ಮನೆಗೆ ತೆರಳಿ ಶುಲ್ಕ ವಸೂಲು ಮಾಡಲಿದ್ದಾರೆ. ಒಂದು ವೇಳೆ ಶುಲ್ಕ ಪಾವತಿಸದಿದ್ದರೆ ಕಸ ಸಂಗ್ರಹಣೆ ನಿಲ್ಲಿಸಲಾಗುತ್ತದೆ. ಈ ಯೋಜನೆ ಡಿಸೆಂಬರ್ ಅಂತ್ಯಕ್ಕೆ ಅಥವಾ ಹೊಸ ವರ್ಷದ ಆರಂಭದಲ್ಲಿ ಜಾರಿಗೊಳ್ಳುವ ಸಾಧ್ಯತೆಯಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ತ್ಯಾಜ್ಯ ಉತ್ಪಾದಕರಿಗೆ ಮಾಸಿಕ ಶುಲ್ಕ ಪ್ರಮಾಣ : ಘನತ್ಯಾಜ್ಯ ಉಪನಿಯಮ ಜಾರಿಗೊಂಡ ನಂತರ ವಾಸವಿರುವ ಮನೆಗಗಳಿಗೆ ಮಾಸಿಕ 200 ರೂ, ದಿನಕ್ಕೆ 5 ಕೆ.ಜಿ ಗಿಂತ ಕಡಿಮೆ ಕಸ ಉತ್ಪಾದಕರಿಗೆ 500 ರೂ, 5 ರಿಂದ 10 ಕೆ.ಜಿ ಕಸ ಉತ್ಪಾದಕರಿಗೆ ದಿನಕ್ಕೆ 1,400 ರೂ, 11 ರಿಂದ 25 ಕೆ.ಜಿ ಕಸ ಉತ್ಪಾದಕರಿಗೆ ದಿನಕ್ಕೆ 3,500 ರೂ., 26 ರಿಂದ 50 ಕೆ.ಜಿ ಕಸ ಉತ್ಪಾದಕರಿಗೆ ದಿನಕ್ಕೆ 7 ಸಾವಿರ ರೂ. ಹಾಗೂ 100 ಕೆ.ಜಿಗಿಂತ ಹೆಚ್ಚಿನ ಕಸ ಉತ್ಪಾದಕರಿಗೆ ದಿನಕ್ಕೆ 14 ಸಾವಿರ ರೂ. ಶುಲ್ಕ ವಿಧಿಸಲಾಗುತ್ತದೆ.

ಘನತ್ಯಾಜ್ಯ ನಿರ್ವಹಣಾ ಶುಲ್ಕ ಪಾವತಿಸಲು ಯಾರೊಬ್ಬರೂ ವಿರೋಧ ಮಾಡುವಂತಿಲ್ಲ. ವಿರೋಧಿಸಿದರೆ ಅವರ ಮನೆಯಿಂದ ಕಸ ಸಂಗ್ರಹಣೆ ನಿಲ್ಲಿಸಲಾಗುತ್ತದೆ. ಜತೆಗೆ, ಆಯಾ ಮನೆಗಳ ಮೇಲೆ ನಿಗಾವಹಿಸಿ ಅವರು ರಸ್ತೆ ಅಥವಾ ಬೇರೆಡೆ ಕಸ ಬೀಸಾಡಿದರೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಬೆಸ್ಕಾಂ ವತಿಯಿಂ ತ್ಯಾಜ್ಯ ಶುಲ್ಕ ಸಂಗ್ರಹಣೆಗೆ ಒಪ್ಪಿಗೆ ನೀಡಿದ್ದು, ಶೀಘ್ರ ಸಂಗ್ರಹಣೆ ಕಾರ್ಯ ಆರಂಭಿಸಲಾಗುವುದು.

ಡಿ.ರಂದೀಪ್, ವಿಶೇಷ ಆಯುಕ್ತ, ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net