ಬಿಗ್​ ಬಾಸ್​ ತೆಗೆದುಕೊಂಡ ನಿರ್ಧಾರವೇ ತಪ್ಪಾ? ಸಮಸ್ಯೆ ಇರೋದು ಸ್ಪರ್ಧಿಗಳ ನಡುವೆ ಅಲ್ಲ…! | Sudeep

ವಿಜಯವಾಣಿ-2024-10-19T133332.530
Published on

ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ (BiggBoss Kannada season 11) ಮನರಂಜನಾ ಕಾರ್ಯಕ್ರಮ ಇದೀಗ ಹೊಸ ರೂಪ ಪಡೆದುಕೊಂಡಿದ್ದು,​ ಸೀಸನ್ 10ರ ಯಶಸ್ಸಿನ ಬೆನ್ನಲ್ಲೇ ಸೀಸನ್​ 11ರ ಭರ್ಜರಿ ಯಶಸ್ಸಿಗೆ ಬಿಗ್ ತಂಡ ದೊಡ್ಡ ಹೆಜ್ಜೆಯನ್ನೇ ಇಟ್ಟಿರುವುದು ಇದೀಗ ಮತ್ತಷ್ಟು ಸ್ಪಷ್ಟವಾಗಿದೆ. ಅಂತಿಮವಾಗಿ ಈ ಬಾರಿಯೂ ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡಿರುವ ಕಿಚ್ಚ ಸುದೀಪ್ (Kichcha Sudeep)​, ಎಂದಿನಂತೆ ತಮ್ಮ ಖಡಕ್​ ಮಾತಿನ ಶೈಲಿಯಲ್ಲೇ ಎರಡನೇ ವಾರದ ಕಥೆ ಕಿಚ್ಚನ ಜತೆ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಮೊದಲ ವಾರದಲ್ಲೇ ಲಾಯರ್​ ಜಗದೀಶ್​​ಗೆ ಖಡಕ್​ ಎಚ್ಚರಿಕೆ ಕೊಟ್ಟಿದ್ದ ಸುದೀಪ್,​ ಇದೀಗ ಈ ವಾರ ಅವರನ್ನು ಮಾತನಾಡಿಸುವ ಮುಂಚಿತವಾಗಿಯೇ ಜಗದೀಶ್​ ಮನೆಯಿಂದ ಹೊರಗುಳಿದಿದ್ದಾರೆ. ಇವರ ಜತೆ ರಂಜೀತ್ ಕೂಡ ಹೊರಬಿದ್ದಿರುವುದು ಇದೀಗ ವೀಕ್ಷಕರಲ್ಲಿ ಭಾರೀ ಗೊಂದಲಗಳನ್ನು ಹುಟ್ಟುಹಾಕಿದೆ.

ಮನೆಯ ಮಹಿಳೆಯರನ್ನು ನಿಂದಿಸಿದ್ದಕ್ಕೆ ಜಗದೀಶ್​ರನ್ನು ಹೊರಗಟ್ಟಿದ ಬಿಗ್​ ಬಾಸ್​, ಜಗದೀಶ್​ ಮೇಲೆ ದೈಹಿಕ ಹಲ್ಲೆ ಮಾಡಿದ ಕಾರಣಕ್ಕಾಗಿ ರಂಜಿತ್​​ರನ್ನು ಮನೆಯ ಮುಖ್ಯದ್ವಾರದಿಂದ ಹೊರನಡೆಯುವಂತೆ ತಿಳಿಸಿದರು. ಸದ್ಯ ಇವರಿಬ್ಬರು ಬಿಗ್ ಮನೆಯಿಂದ ಹೊರಬಂದಿದ್ದೇ ತಡ ವೀಕ್ಷಕರು, ರಂಜಿತ್ ಮತ್ತು ಜಗದೀಶ್​ ಪರ ಬ್ಯಾಟ್​ ಬೀಸಿದರು. ಒಂದೆಡೆ ಜಗದೀಶ್​ರನ್ನು ಮನೆಯಲ್ಲಿ ಉಳಿಸಿಕೊಳ್ಳಬೇಕಿತ್ತು. ಏಕೆಂದರೆ, ಮನೆಯಲ್ಲಿದ್ದ ಅಷ್ಟು ಸದಸ್ಯರು ಅವರ ವಿರುದ್ಧ ರೊಚ್ಚಿಗೆದ್ದ ಹಿನ್ನಲೆ ಅವರು ಹಾಗೆ ಮಾಡಿದ್ದು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ರಂಜಿತ್ ಮಾಡಿದ್ದು ಸರಿಯಿತ್ತು. ಹೆಣ್ಣು ಮಕ್ಕಳ ಪರ ನಿಂತ ಅವರು, ಕೋಪದಿಂದ ಹೀಗೆ ಮಾಡಿದ್ದಾರೆ. ಇದನ್ನು ಬಿಗ್ ಬಾಸ್​ ಕ್ಷಮಿಸಿ, ಮನೆಯಲ್ಲಿ ರಂಜಿತ್​ರನ್ನು ಇರಿಸಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯಗಳು ಮತ್ತೊಂದೆಡೆ.

ಸದ್ಯ ಇದೆಲ್ಲವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿರುವ ನಟ, ನಿರೂಪಕ ಕಿಚ್ಚ ಸುದೀಪ್​, ಇದೀಗ ಈ ವಿಷಯದಲ್ಲಿ ಏನು ಹೇಳಲಿದ್ದಾರೆ? ಯಾರದ್ದು ತಪ್ಪು-ಸರಿ? ಆದ ಎಡವಟ್ಟುಗಳೇನು ಎಂಬುದನ್ನು ಇಂದಿನ 'ವಾರದ ಕಥೆ ಕಿಚ್ಚನ ಜತೆ' ಸಂಚಿಕೆಯಲ್ಲಿ ಮಾತನಾಡಲಿದ್ದಾರೆ ಎಂಬುದು ವೀಕ್ಷಕರಿಗೆ ಸ್ಪಷ್ಟವಾಗಿದ್ದು, ಸದ್ಯ ಕಾರ್ಯಕ್ರಮದ ಪ್ರಸಾರದತ್ತ ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಈ ಮಧ್ಯೆ ಹೊಸ ಪ್ರೋಮೋ ಹೊರಬಿದ್ದಿದ್ದು. "ಇಷ್ಟು ವರ್ಷ ಮನೆಯವರು ಮಾಡಿದ ತಪ್ಪುಗಳನ್ನು ಈ ವೇದಿಕೆಯಲ್ಲಿ ಮಾತನಾಡುತ್ತಿದ್ದೆವು. ಆದ್ರೆ, ಇದೇ ಮೊದಲ ಬಾರಿಗೆ ಸಮಸ್ಯೆ ಇರುವುದು ಬಿಗ್​ ಬಾಸ್​ನಲ್ಲಿ. ಅವಸರದಲ್ಲಿ ನಿರ್ಧಾರ ತೆಗೆದುಕೊಂಡ್ರಾ ಅಥವಾ ತೆಗೆದುಕೊಂಡ ನಿರ್ಧಾರಗಳೇ ತಪ್ಪಾಗಿತ್ತಾ?" ಎಂದು ಕಿಚ್ಚ ವೇದಿಕೆಯಲ್ಲಿ ಹೇಳಿರುವ ಪ್ರೋಮೋ ಸದ್ಯ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ವೀಕ್ಷಕರ ಕುತೂಹಲವನ್ನು ಇದೀಗ ಮತ್ತಷ್ಟು ಹೆಚ್ಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net