BBKS11: ತಪ್ಪನ್ನು ಒಪ್ಪಿಕೊಳ್ಳುವ ಮನಸ್ಥಿತಿ ನಿಮಗಿಲ್ಲ! ಒಂದು ಸ್ಥಾನಕ್ಕೆ ಹಲವರ ಕಿತ್ತಾಟ

rivalary contestants
Published on

ಬೆಂಗಳೂರು: ಕನ್ನಡ ಬಿಗ್ ಬಾಸ್​ ಸೀಸನ್ 11 (BBKS11) ಪ್ರಾರಂಭಗೊಂಡು ಇಂದಿಗೆ ಒಂದು ತಿಂಗಳಿಗೂ ಹೆಚ್ಚು ದಿನಗಳೇ ಕಳೆದಿದ್ದು, ಮನೆಯಲ್ಲಿ ಸ್ಪರ್ಧಿಗಳ ಆಟದ ಜಗ್ಗಾಟ ಜೋರಾಗಿದೆ. ಕಳೆದ ವಾರ ನಟ, ನಿರೂಪಕ ಸುದೀಪ್​ ಅವರ ಉಪಸ್ಥಿತಿಯಲ್ಲಿ ಬಿಗ್ ಬಾಸ್​ ವಾರಾಂತ್ಯ ಸಾಗಿತ್ತು. ಐದನೇ ವಾರಕ್ಕೆ ವೇದಿಕೆಗೆ ಹಾಜರಾದ ಕಿಚ್ಚ ಸುದೀಪ್​, ತಾಯಿಯ ಅಗಲಿಕೆಯ ನೋವಿದ್ದರೂ, ಭಾರವಾದ ಮನಸ್ಸಿನಿಂದಲೇ ವಾರದ ಕಥೆ ಕಿಚ್ಚನ ಜತೆ ಸಂಚಿಕೆಗೆ ನಡೆಸಿಕೊಟ್ಟು, ಮನೆಯಿಂದ ಮಾನಸಾ ಅವರನ್ನು ಎಲಿಮಿನೇಟ್​ ಆದ ಕಾರಣ ಹೊರಬರುವಂತೆ ಹೇಳಿದರು.

ಇನ್ನು 6ನೇ ವಾರಕ್ಕೆ ಕಾಲಿಟ್ಟಿರುವ ಸ್ಪರ್ಧಿಗಳ ನಡುವೆ ಮಾತಿಗಿಂತ ದೈಹಿಕ ಬಲಾಬಲವೇ ಹೆಚ್ಚು ಸದ್ದು ಮಾಡಲಾರಂಭಿಸಿದ್ದು, ಸದಸ್ಯರ ನಡುವಿನ ಜಗ್ಗಾಟ ಜೋರಾಗಿದೆ. ಅದರಲ್ಲೂ ಈ ವಾರದ ಟಾಸ್ಕ್​ಗಳಲ್ಲಿ ಪ್ರತಿಯೊಬ್ಬರು ತಮ್ಮ ಬುದ್ಧಿವಂತಿಕೆ ಮತ್ತು ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು, ಉತ್ತಮ ಹಾಗೂ ಕ್ಯಾಪ್ಟನ್ ಪಟ್ಟ ಪಡೆಯಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಈ ಪೈಕಿ ಬಿಗ್ ಬಾಸ್​ ಯಾರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗಿಡಲು ಬಯಸುತ್ತೀರಿ ಎಂದು ಕೇಳಿದ್ದಕ್ಕೆ, ಮನೆಯವರು ಕೊಟ್ಟ ಹೆಸರು ಮತ್ತು ಕಾರಣಗಳು ಕೆಲ ಸ್ಪರ್ಧಿಗಳಿಗೆ ಕಿಂಚಿತ್ತು ಹಿಡಿಸಿಲ್ಲ.

ಗೌತಮಿ ಜಾದವ್​ ಮತ್ತು ಮಂಜು ನಡುವೆ ವಾಕ್ಸಮರ ಜೋರಾದರೆ. ಅತ್ತ ಧನರಾಜ್​ ಮತ್ತು ಮೋಕ್ಷಿತಾ ಮಧ್ಯೆಯೂ ಮಾತಿನ ಚಕಮಕಿ ತಾರಕಕ್ಕೇರಿದೆ. ಅನುಷಾ ರೈ ಮತ್ತು ಮೋಕ್ಷಿತಾ ಹೆಸರು ಪರಿಗಣಿಸಿದ್ದಕ್ಕೆ ಇಬ್ಬರಿಂದಲೂ ಭಾರೀ ಅಸಮಾಧಾನ ಕೇಳಿಬಂದಿದೆ. ಈ ವಿಚಾರಕ್ಕೆ ಕಿವಿಗೊಡದ ಧನರಾಜ್​, ಇಲ್ಲಿ ನಾನು ಯಾರಿಗೂ ಹೆದರುವುದಿಲ್ಲ. ಹಳೆಯ ಧನು ಈಗಿಲ್ಲ ಎಂದು ಗಟ್ಟಿಯಾಗಿ ಧ್ವನಿ ಏರಿಸಿ ಮಾತನಾಡಿದ್ದಾರೆ. ಅಸಲಿಗೆ ಜಗಳ ಸ್ಫೋಟಗೊಳ್ಳಲು ಇವರು ಕೊಟ್ಟ ಕಾರಣವೇನು? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net