BBKS11: ಐದನೇ ವಾರಕ್ಕೆ 'ಬಿಗ್' ಮನೆಯಿಂದ ಮಾನಸಾ ಎಲಿಮಿನೇಟ್​!

BBKS11
Published on

ಬೆಂಗಳೂರು: ಕನ್ನಡ ಬಿಗ್ ಬಾಸ್​ ಸೀಸನ್ 11 ಪ್ರಾರಂಭಗೊಂಡು ಇಂದಿಗೆ ಒಂದು ತಿಂಗಳು ಕಳೆದಿದ್ದು, ಮನೆಯಲ್ಲಿ ಸ್ಪರ್ಧಿಗಳ ಆಟದ ಜಗ್ಗಾಟ ಜೋರಾಗಿದೆ. ಕಳೆದ ವಾರ ನಟ, ನಿರೂಪಕ ಸುದೀಪ್​ ಅವರ ಅನುಪಸ್ಥಿತಿಯಲ್ಲಿ ಬಿಗ್ ಬಾಸ್​ ವಾರಾಂತ್ಯ ಸಾಗಿತ್ತು. ಆದರೆ, ಐದನೇ ವಾರಕ್ಕೆ ವೇದಿಕೆಗೆ ಹಾಜರಾದ ಕಿಚ್ಚ ಸುದೀಪ್​, ತಾಯಿಯ ಅಗಲಿಕೆಯ ನೋವಿದ್ದರೂ, ಭಾರವಾದ ಮನಸ್ಸಿನಿಂದಲೇ ವಾರದ ಕಥೆ ಕಿಚ್ಚನ ಜತೆ ಸಂಚಿಕೆಗೆ ಆಗಮಿಸಿದರು. ಈ ಮಧ್ಯೆ ಇಂದು ನಡೆದ ಸೂಪರ್ ಸಂಡೆ ವಿತ್​ ಸುದೀಪ ಸಂಚಿಕೆಯಲ್ಲಿ ಐದನೇ ವಾರದಂದು ಮನೆಯಿಂದ ಹೊರಬಿದ್ದವರು ಯಾರು ಎಂಬುದನ್ನು ಅಧಿಕೃತವಾಗಿ ಘೋಷಿಸಿದರು.

ವಾರದ ಕಥೆ ಕಿಚ್ಚನ ಜತೆ ಸಂಚಿಕೆಯ ಆರಂಭದಲ್ಲಿ ಬಿಗ್​ ಬಾಸ್​ ಸ್ಪರ್ಧಿಗಳು ಹಾಗೂ ತಂಡದ ಸದಸ್ಯರು ಸುದೀಪ್​ ಅವರ ತಾಯಿಗೆ ಹಾಡಿನ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಈ ವಿಷಯಕ್ಕೆ ಧನ್ಯವಾದ ತಿಳಿಸಿದ ಸುದೀಪ್​ ಅವರು, ತದನಂತರ ಎಂದಿನಂತೆ ಕಾರ್ಯಕ್ರಮ ನಡೆಸಿಕೊಟ್ಟರು. ಶನಿವಾರ ಮನೆ ಮಂದಿಗೆಲ್ಲಾ ತಮ್ಮ ಖಡಕ್ ಮಾತಿನಿಂದಲೇ ಅವರವರ ತಪ್ಪುಗಳನ್ನು ಎತ್ತಿಹಿಡಿದ ಕಿಚ್ಚ, ಅಲ್ಲಲ್ಲಿ ಕೆಲವರಿಗೆ ಬುದ್ಧಿ ಹೇಳಿ, ತಿದ್ದಿ ತೀಡಿದರು.

ಇನ್ನು ಭಾನುವಾರದ ಸಂಚಿಕೆಯಲ್ಲಿ ತಮಾಷೆ, ಮೋಜು-ಮಸ್ತಿಗೆ ಹೆಚ್ಚು ಸಮಯ ಕೊಟ್ಟ ಸುದೀಪ್​, ಧನರಾಜ್​-ಮಂಜು ಕಾಂಬಿನೇಷನ್​ನಲ್ಲಿ ಹಾಸ್ಯ ಅರಳಿಸಿದ್ದು ವೀಕ್ಷಕರಲ್ಲಿ ನಗೆ ತರಿಸಿತು. ಈ ನಗುವಿನ ಸಿಹಿಯ ಜತೆಗೆ ಸಂಚಿಕೆಯ ಕಡೆಯಲ್ಲಿ ಕಹಿ ಉಣಿಸಿದ ಕಿಚ್ಚ, ಮಾನಸಾ ಅವರು ಎಲಿಮಿನೇಟ್ ಆಗಿದ್ದೀರಾ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net